Advertisement

ಪಡಿತರ ಕೇಂದ್ರದಿಂದ ಪ್ಲಾಸ್ಟಿಕ್‌ ಅಕ್ಕಿ ವಿತರಣೆ: ಆರೋಪ

12:58 PM Oct 03, 2021 | Team Udayavani |

ಆನೇಕಲ್‌: ಸರ್ಕಾರ ಪಡಿತರ ಅಕ್ಕಿ ವಿತರಣೆ ಮಾಡಿದ್ದು, ತಾಲೂಕಿನ ಹಿನ್ನಕ್ಕಿ ಗ್ರಾಮದ ಪಡಿತರ ವಿತರಣಾ ಕೇಂದ್ರದಲ್ಲಿ ಅಕ್ಕಿಯ ಜೊತೆಗೆ ಪ್ಲಾಸ್ಟಿಕ್‌ ಅಕ್ಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಕಳೆದ ಮೂರು ದಿನಗಳಿಂದ ಹಿನ್ನಕ್ಕಿ ಗ್ರಾಮ ದಲ್ಲಿನ ಪಡಿತರ ಕೇಂದ್ರದಿಂದ ಆಹಾರಧಾನ್ಯಗಳನ್ನು ವಿತರಿಸಲಾಗಿತ್ತು. ಅಕ್ಕಿ ಪಡೆದ ಗ್ರಾಮಸ್ಥರು ಮನೆಗೆ ಹೋಗಿ ಅಡುಗೆ ಮಾಡಿ ನೋಡಿದಾಗ ಪ್ಲಾಸ್ಟಿಕ್‌ ಆಕ್ಕಿ ಬಿಸಿನೀರಿನಲ್ಲಿ ತೇಲಾಡುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಪರಿಶೀಲನೆಗೆ ಮುಂದಾಗಿದ್ದಾಗ ಬಿಳಿ ಅಕ್ಕಿಯ ಜೊತೆಗೆ, ಮಣ್ಣಿನ ಬಣ್ಣದಂತೆ ಕಾಣುವ ಅಕ್ಕಿ ಪತ್ತೆಯಾಗಿದೆ. ಕೂಡಲೇ ಬೇರೆ ಪಾತ್ರೆಯಲ್ಲಿಇದನ್ನು ಬೇರ್ಪಡಿಸಿ ಬೇಯಿಸಿದಾಗ ಅದು ಒಂದಕ್ಕೊಂದು ಅಂಟಿಕೊಂಡು ಪ್ಲಾಸ್ಟಿಕ್‌ ಎನ್ನುವುದು ಅನುಮಾನಗೊಂಡು ಗ್ರಾಮಸ್ಥರು ಎಲ್ಲರೂ ಸೇರಿ ಪಡಿತರ ನೀಡುತ್ತಿದ್ದ ಟಿಎಪಿಸಿಎಂಎಸ್‌ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

ಆನೇಕಲ್‌ ಆಹಾರ ಇಲಾಖೆಯ ಅದಿಕಾರಿಗಳಿಗೆ ಮಾಹಿತಿ ತಿಳಿಸಿದ ಮೇಲೆ ಗ್ರಾಮದಲ್ಲಿ ನೀಡಲಾಗಿದ್ದ ಅಕ್ಕಿಯನ್ನು ವಾಪಸ್‌ ಪಡೆಯಲಾಯಿತು. ಗ್ರಾಮದಲ್ಲಿ ನೂರಾರು ಜನ ಪಡಿತರ ಅಕ್ಕಿಯನ್ನು ಪಡೆದಿದ್ದು ಕಳೆದ ಎರಡು ದಿನಗಳಿಂದ ಹಿನ್ನಕ್ಕಿ ಗ್ರಾಮದ ಪಡಿತರ ಕೇಂದ್ರದ ಬಳಿ ಅಕ್ಕಿಯನ್ನು ತೆಗೆದುಕೊಂಡು ಬಂದು ಹಿಂದಿರುಗಿಸುತ್ತಿದ್ದರು.

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಪದೇ ಪದೆ ಇಂತಹ ಘಟನೆಗಳು ನಡೆಯುವುದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಪಂ ಸದಸ್ಯ ಅನಂದ ಮಾತನಾಡಿ, ಹಿನ್ನಕ್ಕಿ ಪಡಿತರ ಕೇಂದ್ರಕ್ಕೆ ಸರಬರಾಜು ಆಗಿರುವ ಆಕ್ಕಿಯಲ್ಲಿ ಪ್ಲಾಸ್ಟಿಕ್‌ ಇರುವುದು ಇಡೀ ಗ್ರಾಮದಲ್ಲಿ ಗೊತ್ತಾಗಿದೆ. ಈಗಾಗಲೇ ಜನ ಪಡೆದುಕೊಂಡಿರುವ ಅಕ್ಕಿಯನ್ನು ಕೆಲವರು ಅನ್ನ ಮಾಡಿ ಸೇವಿಸಿದ್ದಾರೆ. ಆಹಾರ ಇಲಾಖೆಯವರಿಗೆ ಈಗಾಗಲೇ ಮಾಹಿತಿಯನ್ನು ನೀಡಿದ್ದೇವೆ. ಅವರು ಅಕ್ಕಿಯನ್ನು ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಇಂತಹ ಅಕ್ಕಿ ಹೇಗೆ ಬಂತು ಎನ್ನುವುದು ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಆಕ್ಕಿ ಪಡೆದ ಕರಗಪ್ಪ ಮಾತನಾಡಿ, ಎರಡು ದಿನದ ಹಿಂದೆ ಅಕ್ಕಿ ಖರೀದಿ ಮಾಡಿಕೊಂಡು ಮನೆಗೆ ಹೋಗಿದ್ದೆವು. ಮನೆಯಲ್ಲಿ ಅಡುಗೆ ಮಾಡಿದ ಬಳಿಕ ಪ್ಲಾಸ್ಟಿಕ್‌ ಅಂಶ ಇರುವುದು ಗೊತ್ತಾಗಿ ಅಕ್ಕಿಯನ್ನು ವಾಪಸ್‌ ಪಡಿತರ ಕೇಂದ್ರಕ್ಕೆ ತಂದಾಗ ಅದನ್ನು ಹಿಂದಕ್ಕೆ ಪಡೆಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಇಂತಹ ಅಕ್ಕಿಗಳನ್ನು ಸರ್ಕಾರ ನೀಡುವ ಪಡಿತರದಲ್ಲಿ ಮಿಶ್ರಣ ಮಾಡಿರುವುದು ಹೇಗೆ ಎನ್ನುವುದು ತನಿಖೆಯನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಗ್ರಾಪಂ ಸದಸ್ಯರಾದ ವೆಂಕಟೇಶ್‌, ಮಹೇಶ್‌, ಸ್ಥಳೀಯರಾದ ಕೃಷ್ಣಪ್ಪ, ಶಿವರುದ್ರಯ್ಯ, ಕರಗಪ್ಪ ಮತ್ತಿತರರಿದ್ದರು.

“ಕಳಪೆ ಆಹಾರ ಅಥವಾ ಪ್ಲಾಸ್ಟಿಕ್‌ ಅಂಶ ಕಂಡು ಬಂದಿರುವ ಕುರಿತು ತನಿಖೆ ನಡೆಸಲಾಗುವುದು. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅಲ್ಲಿ ಏನಾಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಈ ಬಗ್ಗೆ ಅವರಿಗೆ ಸೂಚನೆ ನೀಡುತ್ತೇನೆ.”

ದಿನೇಶ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next