Advertisement

ರಾಜ್ಯದ 5 ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಮರುಬಳಕೆ ಯಂತ್ರ ಸ್ಥಾಪನೆ

10:03 AM Jan 01, 2020 | sudhir |

ಮಂಗಳೂರು: ಪರಿಸರ ಸ್ನೇಹಿ ವ್ಯವಸ್ಥೆಯತ್ತ ಕೆಎಸ್ಸಾರ್ಟಿಸಿ ಒಲವು ತೋರುತ್ತಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ಮಂಗಳೂರು ಸೇರಿದಂತೆ ರಾಜ್ಯದ 5 ಬಸ್‌ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಕ್ರಷ್‌ ಮಾಡಿ ಮರು ಬಳಕೆ ಮಾಡುವ ಯಂತ್ರವನ್ನು ಸ್ಥಾಪಿಸಲು ಸಾರಿಗೆ ನಿಗಮ ಮುಂದಾಗಿದೆ.

Advertisement

ಅನೇಕ ಪ್ರಯಾಣಿಕರು ನಿಲ್ದಾಣಗಳಲ್ಲಿ ಬಾಟಲಿಗಳನ್ನು ಎಸೆಯುತ್ತಿರುವುದನ್ನು ಮನಗಂಡು ಕೆಎಸ್ಸಾರ್ಟಿಸಿ ಈ ನೂತನ ಯೋಜನೆಗೆ ಕೈ ಹಾಕಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಈ ಯಂತ್ರವನ್ನು ಸ್ಥಾಪಿಸಲಾಗಿದ್ದು, ಜನವರಿ 15ರೊಳ ಗಾಗಿ ಮಂಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಮೈಸೂರು ಕೆಎಸ್ಸಾರ್ಟಿಸಿ ಡಿಪೋಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಮರುಬಳಕೆ ಮಾಡುವ ಯಂತ್ರ ಸ್ಥಾಪನೆಯಾಗಲಿದೆ.

ಗ್ರೀನ್‌ ಸೈಕ್ಲೋ ಪಾಸ್ಟ್‌ ಮತ್ತು ಸ್ಪರ್ಶ ಮಸಾಲಾದ ಸಿಎಸ್‌ಆರ್‌ (ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಈ ನೂತನ ಯೋಜನೆಯನ್ನು ಕೆಎಸ್ಸಾರ್ಟಿಸಿ ಹಮ್ಮಿಕೊಳ್ಳುತ್ತಿದೆ. 4.3 ಲಕ್ಷ ರೂ.ನ ಯಂತ್ರ ಇದಾಗಿದೆ. ನಿಗಮವು ಉಚಿತ ಸ್ಥಳಾವಕಾಶ ನೀಡಿದ್ದು ವಿದ್ಯುತ್‌ ವೆಚ್ಚವನ್ನೂ ಭರಿಸಲಿದೆ.

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಳವಡಿಸಲಾದ ಈ ಯಂತ್ರಕ್ಕೆ ಈಗಾಗಲೇ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ನೀರಿನ ಬಾಟಲಿಗೆ ಬ್ರೇಕ್‌
ಕೆಎಸ್ಸಾರ್ಟಿಸಿಯ 300 ಹವಾನಿಯಂತ್ರಿತ (ವೋಲ್ವೋ) ಬಸ್‌ಗಳು ಸೇರಿದಂತೆ ಮೂರು ಸಾರಿಗೆ ನಿಗಮಗಳ 450 ಐಷಾರಾಮಿ ಬಸ್‌ಗಳಲ್ಲಿ ಪ್ರತಿ ವರ್ಷ ಪ್ರಯಾಣಿಕರಿಗೆ 1.20 ಕೋಟಿ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ವಿತರಿಸಲಾಗುತ್ತಿತ್ತು. ಬಳಿಕ ಈ ಬಾಟಲಿಗಳು ಭೂಮಿಯ ಒಡಲು ಸೇರುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಪ್ರಯಾಣಿಕರಿಗೆ ನೀರು ಕೊಡುವ ಯೋಜನೆಯಿಂದ ಕೆಎಸ್ಸಾ ರ್ಟಿಸಿ ಈಗಾಗಲೇ ದೂರ ಸರಿದಿದೆ.

Advertisement

“ಪರಿಸರ ಮೇಳ’
ಬಸ್‌ ನಿಲ್ದಾಣದ ಅಂಗಡಿಗಳಲ್ಲಿ ಹಾಗೂ ಕ್ಯಾಂಟಿನ್‌ಗಳಲ್ಲಿ ವಿತರಣೆ ಯಾಗುವ ಪ್ಲಾಸ್ಟಿಕ್‌, ಕಾಗದ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮುಖೇನ ಪರಿಸರ ಸಂರಕ್ಷಣೆಗೆ ಮಾಡುತ್ತಿರುವ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ “ಪರಿಸರ ಮೇಳ’ ಆರಂಭಿಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ.

ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಳವಡಿಸಿ ರುವ “ಸ್ಯಾನಿಟರಿ ನ್ಯಾಪ್‌ಕಿನ್‌ ಇನ್ಸಿನೇಟರ್‌’, “ನ್ಯಾಪ್‌ಕಿನ್‌ ವೆಂಡಿಂಗ್‌ ಮೆಷಿನ್‌’ ಅನ್ನು ಇತರ ನಿಲ್ದಾಣಗಳಿಗೂ ವಿಸ್ತರಿಸುವ ಯೋಜನೆಯನ್ನು ನಿಗಮ ಹಮ್ಮಿಕೊಂಡಿದೆ.

ಪ್ರಯಾಣಿಕರು ತೊರೆದು ಹೋಗುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಕೆಎಸ್ಸಾ ರ್ಟಿಸಿ ಯೋಜನೆ ಜಾರಿಗೆ ತರುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸ್ಥಾಪಿಸಿದ ಬಾಟಲ್‌ ಕ್ರಷ್‌ ಮಾಡಿ ಮರು ಬಳಕೆ ಮಾಡುವ ಯಂತ್ರವನ್ನು ರಾಜ್ಯದ 5 ಬಸ್‌ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು.
– ಶಿವಯೋಗಿ ಸಿ. ಕಳಸದ, ಕೆಎಸ್ಸಾರ್ಟಿಸಿ ವ್ಯ. ನಿರ್ದೇಶಕ

ವರ್ಷಕ್ಕೆ 17.2 ಟನ್‌ ಪ್ಲಾಸ್ಟಿಕ್‌ ಮರುಬಳಕೆ
“ನೂತನ ಯಂತ್ರವು ಪ್ರತೀ ದಿನ 4,500 ಪ್ಲಾಸ್ಟಿಕ್‌ ಬಾಟಲಿಗಳನ್ನು ಕ್ರಷ್‌ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಈ ಯಂತ್ರದ ಮೂಲಕ ಮರುಬಳಕೆಯಾಗಲಿದೆ. ಇದರಿಂದ ಶೌಚಾಲಯದ ಕ್ಯಾಬಿನ್‌, ರಸ್ತೆ, ಕಸದ ಬುಟ್ಟಿ, ದಿನಚರಿ ಪುಸ್ತಕ, ಟೀ ಶರ್ಟ್‌ ಸೇರಿದಂತೆ ಇನ್ನಿತರ ವಸ್ತುಗಳು ತಯಾರಾಗಲಿವೆ’ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು “ಉದಯವಾಣಿ”ಗೆ ತಿಳಿಸಿದ್ದಾರೆ.

– ನವೀನ್ ಭಟ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next