ಗದಗ: ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಅಂಗವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್ ಪೇಪರ್ ಮಾರಾಟ ಸಂಪೂರ್ಣ ನಿಷಿದ್ಧವಾಗಿದೆ.ಆದರೆ, ಅವಳಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ನಡೆಯುವ ಶುಭ ಸಮಾರಂಭ, ಎಗ್ ರೈಸ್ ಅಂಗಡಿ, ಸಣ್ಣ-ಪುಟ್ಟ ಹೋಟೆಲ್‌ಗಳಲ್ಲಿ ಆಹಾರ ಮೂಲಕ ವಿಷ ಉಣಿಸುವ ಕಾರ್ಯ ಮುಂದುವರಿದಿದೆ.
ಅವಳಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧಗೊಂಡಿದೆ. ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ಸಾವಿರಾರು ರೂ. ದಂಡ ವಿಧಿಸುವ ಸಾಧ್ಯತೆಯಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಗ್ಗೆ ವಿವಿಧ ಕ್ಯಾಟರಿಂಗ್ ಗುತ್ತಿಗೆದಾರರು ಕಿವಿಗೊಡುತ್ತಿಲ್ಲ.
ನಾನಾ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮುಂದುವರಿಸಿದ್ದಾರೆ. ಮದುವೆ, ಆರಕ್ಷತೆ, ನಿಶ್ಚಿತಾರ್ಥ ಹಾಗೂ ಹುಟ್ಟುಹಬ್ಬ ಸಮಾರಂಭಗಳಲ್ಲಿ ಊಟ ಪೂರೈಕೆ ಗುತ್ತಿಗೆ ಪಡೆದಿರುವ ಕ್ಯಾಟರಿಂಗ್ ಸಂಸ್ಥೆಗಳು, ಪ್ಲಾಸ್ಟಿಕ್ ಪೇಪರ್‌ಗಳಲ್ಲಿ ಹೋಳಿಗೆಯನ್ನು ಪ್ಯಾಕಿಂಗ್ ಮಾಡಿ ಪೂರೈಸುತ್ತಿರುವುದು ಕಂಡುಬರುತ್ತಿದೆ. ಅದರೊಂದಿಗೆ ಕುಡಿಯುವ ನೀರು, ಟೀ-ಕಾಫಿ ಹಾಗೂ ಜ್ಯೂಸ್‌ಗಳನ್ನು ಪ್ಲಾಸ್ಟಿಕ್ ಗ್ಲಾಸ್‌ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ, “ಪ್ಲಾಸ್ಟಿಕ್ ಬ್ಯಾನ್ ಆಗಿದೆ ನಿಜ. ಆದರೆ, ಈ ಹಿಂದೆ ಬಲ್ಕ್ ಆಗಿ ತೆಗೆದುಕೊಂಡಿದ್ದ ಪ್ಲಾಸ್ಟಿಕ್ ಪೇಪರ್ ಹಾಗೂ ಗ್ಲಾಸ್‌ಗಳನ್ನೇ ಬಳಕೆ ಮಾಡುತ್ತಿದ್ದೇವೆ. ಅವುಖಾಲಿಯಾಗುತ್ತಿದ್ದಂತೆ ಪೇಪರ್‌ನಿಂದ ತಯಾರಿಸಿದ ಪ್ಲೇಟ್, ಗ್ಲಾಸ್‌ಗಳನ್ನು ಬಳಸುತ್ತೇವೆ. ಕಾನೂನು ಜೊತೆಗೆ ನಮ್ಮ ಹೊಟ್ಟೆ ಪಾಡು ನೋಡಿಕೊ ಬೇಕಲ್ವಾ ಸರ್’ ಎಂದು ಕ್ಯಾಟರಿಂಗ್ ಉಸ್ತುವಾರಿಗಳು ಜಾರಿಕೊಳ್ಳುತ್ತಾರೆ. ಇನ್ನು, ಸಭೆ- ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರಿರುವುದರಿಂದ ಯಾರೂ ಚರ್ಚೆ ಬೆಳೆಸುವುದಿಲ್ಲ. ಹೀಗಾಗಿ ಕ್ಯಾಟರಿಂಗ್ ಆಹಾರ ಪೂರೈಕೆದಾರರು ನಿರಾತಂಕವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ.
ಗ್ರಾಹಕರ ಸ್ಥಿತಿ ಬೆಂಕಿಯಿಂದ ಬಾಣಲಿಗೆ: ಅವಳಿ ನಗರದ ಪ್ರತಿಯೊಂದು ರಸ್ತೆಗಳಲ್ಲಿ ಇಡ್ಲಿ ಸೆಂಟರ್ ಹಾಗೂ ಎಗ್‌ರೈಸ್ ಸೆಂಟರ್‌ಗಳು ಕಾಣಸಿಗುತ್ತವೆ. ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಹೋಟೆಲ್ ಗಳಲ್ಲಿ, ರಸ್ತೆ ಬದಿಯ ಎಗ್‌ರೈಸ್ ಸೆಂಟರ್‌ಗಳಲ್ಲಿ ಇಡ್ಲಿ, ವಡಾ, ಬಜಿ, ಮಿರ್ಚಿ ಗಾಡಿಗಳಲ್ಲಿ ಬಹುತೇಕ ಪ್ಲಾಸ್ಟಿಕ್ ಪೇಪರ್ ಬಳಕೆ ಕೈಬಿಡಲಾಗಿದೆ. ಇದೀಗ ಪ್ಲಾಸ್ಟಿಕ್ ಪೇಪರ್ ಬದಲಾಗಿ ಹಳೇ ರದ್ದಿ ಪೇಪರಲ್ಲಿ ನೀಡುತ್ತಿದ್ದಾರೆ. ದೊಡ್ಡ ಹೋಟೆಲ್‌ಗಳಿಗೆ ಹೋದರೆ ನೂರಾರು ರೂ.ಗಳು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕರು, ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ತಮ್ಮ ಹಸಿವು ನೀಗಿಸಿಕೊಳ್ಳಲು ಸಹಜವಾಗಿ ಬೀದಿ ಬದಿಯ ಹೋಟೆಲ್‌ಗಳಿಗೆ ಮೊರೆ ಹೋಗುತ್ತಾರೆ. ಆಹಾರ ಪದಾರ್ಥಗಳೊಂದಿಗೆ ಚಟ್ನಿ, ಸಾಂಬಾರನ್ನು ಹಾಕುತ್ತಿರುದರಿಂದ ರದ್ದಿ ಪೇಪರ್ ನಲ್ಲಿರುವ ರಾಸಾನಿಯಕ ವಿಷ ನೇರವಾಗಿ ಹೊಟ್ಟೆ ಸೇರುತ್ತಿದೆ. ಇದರಿಂದಾಗಿ ಗ್ರಾಹಕರ ಸ್ಥಿತಿ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ ಎಂಬುದು ಸಾರ್ವಜನಿಕರ ದೂರು.
ಈ ಬಗ್ಗೆ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ಹಾಗೂ ರದ್ದಿ ಪೇಪರ್‌ಗಳನ್ನು ಬಳಕೆ ಕೈಬಿಟ್ಟು, ಬಾಳೆ, ಅಡಿಕೆ ಎಲೆಗಳಲ್ಲಿ ಪೂರೈಸುವಂತೆ ಕ್ರಮ ಜರುಗಿಸಬೇಕಿದೆ. ಜೊತೆಗೆ ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ.
-ವೀರೇಂದ್ರ ನಾಗಲದಿನ್ನಿ