ರಾಮನಗರ: ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯ್ತಿ ಪರಿವರ್ತನೆಗಾಗಿ ಅ.1ರಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ ನಡೆಯಲಿದೆ ಎಂದು ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು.
ನಗರದ ಮಿನಿ ವಿಧಾನಸೌಧದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಪಿಡಿಒಗಳು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರಲ್ಲಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು. ಪ್ಲಾಸ್ಟಿಕ್ ಮುಕ್ತ ನಗರಗಳಿಗಾಗಿ ನಿರಂತರ ಅಭಿಯಾನ ನಡೆಯುತ್ತಿದೆ. ಗ್ರಾಮೀಣ ಮಟ್ಟದ ಜನರಲ್ಲೂ ಪ್ಲಾಸ್ಟಿಕ್ ಸಮಸ್ಯೆಗಳ ಬಗ್ಗೆ ಅರಿವು ಉಂಟಾಗಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮಗಳು ಇಂದಿನ ಅವಶ್ಯವಿದೆ ಎಂದರು.
ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಳ್ಳಿ: ಪಿಡಿಒಗಳು ತಮ್ಮ ವ್ಯಾಪ್ತಿಯ ವ್ಯಾಪಾರಿ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕವರ್ ಇತ್ಯಾದಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ, ಮಾರಾಟ ಬೇಡ ಎಂದು ಎಚ್ಚರಿಸಿ, ಆದಾಗ್ಯೂ ಮಾರಾಟ, ಬಳಕೆ ಮುಂದುವರಿದರೆ ಅದನ್ನು ವಶಪಡಿಸಿಕೊಳ್ಳಬೇಕು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿ, ಪರ್ಯಾಯ ಬಳಕೆಯ ಬಗ್ಗೆ ತಿಳವಳಿಕೆ ಮೂಡಿಸಬೇಕು ಎಂದು ಹೇಳಿದರು.
ಅಂತರ್ಜಲ ವೃದ್ಧಿಗೆ ಮಳೆ ಕೊಯ್ಲು ಅನಿವಾರ್ಯ: ಅಂತರ್ಜಲ ವೃದ್ಧಿಗಾಗಿ ಮಳೆ ಕೊಯ್ಲು ಪದ್ಧತಿ ಅನಿವಾರ್ಯವಾಗಿದೆ. ಮಳೆ ಕೊಯ್ಲು ಪದ್ಧತಿಯನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಕೆಯಾಗಬೇಕು. ಸಾರ್ವಜನಿಕರಿಗೆ ಮಾದರಿಯಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 2 ಸರ್ಕಾರಿ ಕಟ್ಟಡಗಳಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ನವೆಂಬರ್ ಮಾಸದ ಅಂತ್ಯದೊಳಗೆ ಅಳವಡಿಸಬೇಕು. ಹೀಗೆ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಕನಿಷ್ಠ 50 ಸಾವಿರ ಲೀಟರ್ ನೀರನ್ನು ಶೇಖರಿಸಿ, ಗಿಡ, ಮರಗಳಿಗೆ ಹಾಯಿಸುವುದು, ಸ್ವಚ್ಛತೆಗೆ ಬಳಸಿ, ಹೆಚ್ಚುವರಿ ನೀರನ್ನು ಕೊಳವೆ ಬಾವಿಗಳ ರೀಚಾರ್ಜ್‌ಗೆ ಬಳಸಿ ಎಂದು ಸಲಹೆ ನೀಡಿದರು.
ತೆರಿಗೆ ಸಂಗ್ರಹಕ್ಕೆ ಸೂಚನೆ: ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ 12 ಕೋಟಿ ರೂ. ತೆರಿಗೆ ಸಂಗ್ರಹ ಬಾಕಿ ಇತ್ತು. ಸೆಪ್ಟಂಬರ್‌ನಲ್ಲಿ ಆಂದೋಲನ ಹಮ್ಮಿಕೊಂಡು ಸುಮಾರು 3 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದರು.
ಇ-ಖಾತೆ ಶೇ.97ರಷ್ಟು ಮುಕ್ತಾಯ: ಪಂಚಾಯ್ತಿಗಳಲ್ಲಿ ಇ-ಖಾತೆಗಳಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಶೇ.97ರಷ್ಟು ಕಾರ್ಯ ಮುಗಿದಿದೆ. ಉಳಿದವುಗಳನ್ನು ಸಹ ಶೀಘ್ರದಲ್ಲಿಯೇ ಮುಗಿಸಿಕೊಡುವುದಾಗಿ ತಿಳಿಸಿದರು. ಇ-ಖಾತಾ ಅರ್ಜಿಗಳ ವಿಲೇವಾರಿಗೆ ಶ್ರಮಿಸಿದ ಪಿಡಿಒಗಳಿಗೆ ಅಧ್ಯಕ್ಷರು ಶ್ಲಾಘಿಸಿದರು. ಸಭೆಯಲ್ಲಿ ಇಒ ಶಿವಕುಮಾರ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.