Advertisement
ಧರ್ಮಸ್ಥಳಕ್ಕೆ ಶಿವರಾತ್ರಿಗೆ ಪ್ರತೀ ವರ್ಷ 2ರಿಂದ 3 ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುತ್ತಾರೆ. ಕೇವಲ ಕಾಲ್ನಡಿಗಯೊಂದರಲ್ಲೆ 30,000 ಕ್ಕೂ ಅಧಿಕ ಮಂದಿ ಸೇರಿರುವುದರಿಂದ ಈಗಾಗಲೇ ಕ್ಷೇತ್ರ ಹಾಗೂ ಸಂಘ-ಸಂಸ್ಥೆ ವತಿಯಿಂದ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಆದರೂ ರಸ್ತೆ ಬದಿ ಪ್ಲಾಸ್ಟಿಕ್ ಇನ್ನಿತರ ಪರಿಕರ ಎಸೆಯುತ್ತಾ ಸಾಗುವುದರಿಂದ ಅರಣ್ಯ ವ್ಯಾಪ್ತಿಯಲ್ಲಿ ಪ್ರಾಣಿಸಂಕುಲಗಳಿಗೂ ಇದು ತೊಂದರೆಯಾಗಲಿದೆ. ಈ ನೆಲೆಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಚಾರ್ಮಾಡಿ- ಧರ್ಮಸ್ಥಳ 25 ಕಿ.ಮೀ. ರಸ್ತೆ, ಶಿರಾಡಿ -ಗುಂಡ್ಯ-ಪೆರಿಯಶಾಂತಿ- ಧರ್ಮಸ್ಥಳ ರಸ್ತೆ 35 ಕಿ.ಮೀ. ವ್ಯಾಪ್ತಿ, ಬಿಸ್ಲೆ -ಸುಬ್ರಹ್ಮಣ್ಯ- ಪೆರಿಯಶಾಂತಿ- ಧರ್ಮಸ್ಥಳ 45 ಕಿ.ಮೀ. ವಿಸ್ತಾರದಲ್ಲಿ ಸ್ವತ್ಛತೆಗೆ ವಿಶೇಷ ತಂಡ ರಚಿಸಲಾಗಿದೆ.
ಭಕ್ತರು ಪ್ಲಾಸ್ಟಿಕ್ ಬಳಸುವ ಕುರಿತು, ಕಾಡ್ಗಿಚ್ಚು ಮತ್ತು ಆನೆಗಳ ಚಲನವಲನದ ಕುರಿತು ಅರಿವು ಮೂಡಿಸುವ ಸಲುವಾಗಿಯೇ ಇಲಾಖೆಯು 150 ಸ್ವಯಂಸೇವಕರು ಹಾಗೂ ಡಿಸಿಎಫ್, ಎಸಿಎಫ್, ಆರ್‌ಎಫ್‌ಒ ಸಹಿತ ಇಲಾಖೆಯ 100 ಸಿಬಂದಿ ತೊಡಗಿಸಿಕೊಂಡಿದ್ದಾರೆ. ಜಾಗೃತಿ ಅಭಿಯಾನದದಡಿ ಆಂಭದಲ್ಲಿ ರಸ್ತೆ ಬದಿ ಸ್ವತ್ಛತೆ ಕೈಗೊಂಡಿದ್ದು, ಉಳಿದಂತೆ ಅರಣ್ಯ ಇಲಾಖೆಯು ಪ್ರತೀ 200 ಮೀಟರ್‌ಗೆ ಕಸದ ಬುಟ್ಟಿಗಳನ್ನು ಸ್ಥಾಪಿಸಿದೆ. ಮೂರು ಮಾರ್ಗಗಳಲ್ಲೂ ಪ್ರತೀ ಕಿ.ಮೀ.ಗೆ ಒಂದರಂತೆ ಸ್ಟಾಲ್‌ಗಳನ್ನು ನಿರ್ಮಿಸಿ ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಾತ್ರವಲ್ಲದೆ ಭಕ್ತರಿಗೆ ಮಾರ್ಗದರ್ಶನ ನೀಡಲು ಮತ್ತು ನೀರಿನ ವ್ಯವಸ್ಥೆ ಮಾಡಲು ಪ್ರತೀ ಸ್ಟಾಲ್‌ನಲ್ಲಿ ಮೂವರು ಸ್ವಯಂಸೇವಕರು ಮತ್ತು ಇಬ್ಬರು ಇಲಾಖೆ ಸಿಬಂದಿ ನೇಮಿಸಲಾಗಿದೆ. ಫೆ. 27ರಿಂದ ಮೊದಲ್ಗೊಂಡ ಚಟುವಟಿಕೆ ಮಾ. 2ರ ವರೆಗೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ.