Advertisement

‘ಪ್ಲಾಸ್ಟಿಕ್‌ ಮುಕ್ತ ರಾಮನಗರ’ಕ್ಕೆ ಸಹಕಾರ ಅವಶ್ಯ

02:13 PM Sep 15, 2019 | Suhan S |

ರಾಮನಗರ: ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯನ್ನು ನಿಲ್ಲಿಸಿ, ಪ್ಲಾಸ್ಟಿಕ್‌ ಮುಕ್ತ ರಾಮನಗರಕ್ಕಾಗಿ ಸಹಕರಿಸಬೇಕು ಎಂದು ನಗರಸಭೆ ಆಯುಕ್ತೆ ಬಿ.ಶುಭಾ ವ್ಯಾಪಾರಿಗಳಿಗೆ ಸಲಹೆ ನೀಡಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ರಾಮನಗರ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಕೌಶಲ್ಯ ಮಿಷನ್‌ ಹಾಗೂ ರಾಮನಗರ ನಗರಸಭೆ ಸಂಯಕ್ತಾಶ್ರಯದಲ್ಲಿ ಡೇ-ನಲ್ಮ್ ಯೋಜನೆಯ ನಗರ ಬೀದಿ ವ್ಯಾಪಾರಸ್ಥರಿಗೆ ತರಬೇತಿ, ಗುರುತಿನ ಕಾರ್ಡ್‌ ಹಾಗೂ ಮಾರಾಟ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ತಮ್ಮ ಬಳಿಗೆ ಆಗಮಿಸುವ ಗ್ರಾಹಕರಿಗೆ ತಾವೇ ಬಟ್ಟೆ ಅಥವಾ ಪೇಪರ್‌ ಬ್ಯಾಗ್‌ಗಳನ್ನು ತರುವಂತೆ ಸಲಹೆ ನೀಡಬೇಕು ಎಂದು ತಿಳಿಸಿದರು.

ಅರ್ಹರಿಗೆ ಸೌಲಭ್ಯ ತಲುಪಿಸಿ: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹರು ಗೋಗೆರೆದು ಪಡೆಯುವ ಅವಶ್ಯಕತೆ ಇಲ್ಲ. ಅದನ್ನು ಪಡೆದುಕೊಳ್ಳುವ ಹಕ್ಕು ನಿಮ್ಮದಾಗಿದೆ. ಅಧಿಕಾರಿಗಳು ಸಹ ಅರ್ಹರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು. ಸರ್ಕಾರದ ಸವಲತ್ತುಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

17ಕ್ಕೆ ಸದಸ್ಯತ್ವ ಕಾರ್ಡ್‌ ರದ್ದು: ರಾಮನಗರ ನಗರಸಭಾ ಡೇ-ನಲ್ಮ್ನ ಸ್ವ-ಸಹಾಯ ಗುಂಪುಗಳ ಅಭಿಯಾನ ವ್ಯವಸ್ಥಾಪಕ ಡಾ.ನಟ ರಾಜೇಗೌಡ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರ ಜಾರಿ ಮಾಡಿರುವ ಡೇ-ನಲ್ಮ್ನ ಸ್ವ-ಸಹಾಯ ಗುಂಪುಗಳ ಬಗ್ಗೆ ಮಾಹಿತಿ ನೀಡಿದರು. ನಗರಸಭೆಯಲ್ಲಿ ಅಧಿಕೃತ ವಾಗಿ 913 ಸದಸ್ಯರು ಬೀದಿ ಬದಿಯ ವ್ಯಾಪಾರ ನಡೆಸುವವರು ಸದಸ್ಯತ್ವವನ್ನು ಪಡೆದಿದ್ದಾರೆ. ಈ ಸದಸ್ಯರ ಬಳಿ ಇರುವ ಸದಸ್ಯತ್ವ ಕಾರ್ಡ್‌ಗಳು ಸೆ.17ರಂದು ರದ್ದಾಗಲಿವೆ ಎಂದು ಎಚ್ಚರಿಸಿದರು.

ನೂತನ ಕಾರ್ಡ್‌ ಪಡೆದುಕೊಳ್ಳಿ: ನೂತನ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಸದಸ್ಯರು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿಯ ಛಾಯಾ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ತುಂಬಿ, ನಗರಸಭೆಗೆ ತಲುಪಿಸ ಬೇಕಾಗಿದೆ. ಇದಕ್ಕೆ ಆರು ದಿನಗಳ ಅವಕಾಶವಿದೆ. ಅರ್ಜಿ ಸಲ್ಲಿಸಲು ಬಂದವರು ತಮ್ಮ ವ್ಯಾಪಾರ ಕಳೆದುಕೊಳ್ಳುವ ಆತಂಕ ಬೇಡ. ತಲಾ ಒಬ್ಬರಿಗೆ 270 ರೂ. ಸಹಾಯಧನ ನೀಡಲಾಗುವುದು. ಅಲ್ಲದೆ, ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಸಹಾಯಧನಕ್ಕಾಗಿ ವ್ಯಾಪಾರಿಗಳು ತಮ್ಮ ಬ್ಯಾಂಕ್‌ ಪಾಸ್‌ಬುಕ್‌ ಛಾಯಾ ಪ್ರತಿಯನ್ನು ಕೊಡಬೇಕಾಗಿದೆ. ಆರ್‌.ಟಿ.ಜಿ.ಎಸ್‌ ಮೂಲಕ ಸಹಾಯಧನ ರವಾನಿಸಲಾಗುವುದು ಎಂದರು.

Advertisement

ಗುರುತಿನ ಕಾರ್ಡ್‌ ಕಡ್ಡಾಯ: ನೋಂದಾಯಿತ ಬೀದಿ ಬದಿಯ ವ್ಯಾಪಾರಿಗಳ ಸಂಘದ ಚುನಾವಣೆ ನಡೆಸಬೇಕಾಗಿರುವುದರಿಂದ ನೂತನ ಸದಸ್ಯತ್ವದ ನೋಂದಾವಣೆ ಮತ್ತು ನಗರಸಭಾ ವತಿಯಿಂದ ಬೀದಿ ಬದಿಯ ವ್ಯಾಪಾರಿ ಗುರುತಿನ ಕಾರ್ಡ್‌ ಹೊಂದುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಈ ವೇಳೆ ಬೀದಿ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬೈರಲಿಂಗಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಶ್ರೀನಿವಾಸ್‌, ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಯಲ್ಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಮ್ಮ, ಸಂಚಾಲಕಿ ಶಾರದಮ್ಮ, ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್‌, ಗೋವಿಂದರಾಜ್‌ ಉಪಸ್ಥಿತರಿದ್ದರು. ಸಮಾಜ ಸೇವಕಿ ಗಾಯಿತ್ರಿದೇವಿ ಪ್ರಾರ್ಥಿಸಿದರು. ಸಮುದಾಯ ಸಂಘಟನಾಧಿಕಾರಿ ಎಂ.ಸಿ. ರಾಮಕೃಷ್ಣಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next