ಹುಬ್ಬಳ್ಳಿ: ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ರವಿವಾರ ಇಲ್ಲಿನ ನೆಹರು ಮೈದಾನದಲ್ಲಿ ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ ಪ್ರಯುಕ್ತ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿರ್ಬಂಧಿಸುವ ಕುರಿತು ಆಯೋಜಿಸಿದ್ದ ನಡಿಗೆ ಹಾಗೂ ಸೈಕಲ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಬೇಕು ಎಂದು ಹೇಳಿದರು.
ಎಲ್ಲವೂ ಸರಕಾರದಿಂದಲೇ ಸಾಧ್ಯ ಎನ್ನುವ ಭಾವನೆ ಜನರಲ್ಲಿದೆ. ಸರಕಾರ ಕೇವಲ ಯೋಜನೆಗಳನ್ನು ಜಾರಿಗೆ ತಂದು ಅವುಗಳ ಅನುಷ್ಠಾನಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣಕ್ಕೆ ಕರೆ ನೀಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸುವುದನ್ನು ಜನರು ಸ್ವಯಂ ಪ್ರೇರಣೆಯಿಂದ ಕೈಬಿಡಬೇಕು. ಪ್ಲಾಸ್ಟಿಕ್ ಮುಕ್ತ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ನಡೆಯಬೇಕು ಎಂದರು.
ನಡಿಗೆ-ಸೈಕಲ್ ಜಾಥಾ: ಏಕೆ ಬಳಕೆ ಪ್ಲಾಸ್ಟಿಕ್ ವಸ್ತು ಬಳಕೆ ಹಾಗೂ ಸ್ವತ್ಛತಾ ಹೀ ಸೇವಾ ಅಭಿಯಾನ ಪ್ರಯುಕ್ತ ಆರಂಭವಾದ ನಡಿಗೆ ಹಾಗೂ ಸೈಕಲ್ ಜಾಥಾ ಇಲ್ಲಿನ ನೆಹರು ಕ್ರೀಡಾಂಗಣದಿಂದ ಆರಂಭವಾಗಿ ಕಿತ್ತೂರ ಚನ್ನಮ್ಮ ವೃತ್ತ, ಕೋರ್ಟ್ ವೃತ್ತ, ಸರ್ವೋದಯ ವೃತ್ತದಿಂದ ಗದಗ ರಸ್ತೆ ಮೂಲಕ ನೆಹರು ಕ್ರೀಡಾಂಗಣಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.
ಜನಜಾಗೃತಿ: ಜಾಥಾದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಸೇರಿದಂತೆ ಇನ್ನಿತರರಿದ್ದರು.