ಬೆಂಗಳೂರು: ನಿಷೇಧದ ನಡುವೆಯೂ ರಾಜಧಾನಿಯಲ್ಲಿ ಪ್ಲಾಸ್ಟಿಕ್ ಧ್ವಜಗಳ ಭರಾಟೆ ಹೆಚ್ಚಾಗಿದೆ. ರಾಷ್ಟ್ರಧ್ವಜಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸುವಂತಿಲ್ಲ ಎಂಬ ನಿಯಮ ಇದೆಯಾದರೂ, ನಗರದಲ್ಲಿ ಅವುಗಳ ಮಾರಾಟ ನಿಂತಿಲ್ಲ. ಬಿಬಿಎಂಪಿ ಪ್ಲಾಸ್ಟಿಕ್ ಬಳಸದಂತೆ ವಿದ್ಯಾರ್ಥಿಗಳ ಮೂಲಕ ಜಾಥಾ, ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಅರಿವು ಮೂಡಿಸುತ್ತಿದೆ. ಆದರೂ, ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಿಂತಿಲ್ಲ.
ಯಾವುದೇ ಗುಣಮಟ್ಟದ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡಬಾರದೆಂದು ಆದೇಶವಿದ್ದರೂ, ಅಂಗಡಿ ಮತ್ತು ಬೀದಿಬದಿ ವ್ಯಾಪಾರಿಗಳು ಯಾವುದನ್ನು ಲೆಕ್ಕಿಸದೇ, ಮಾರಾಟ ಮುಂದುವರಿಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಮಾಣಿಕ್ ಷಾ ಪರೇಡ್ ಮೈದಾನದ ಬಳಿ, ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಕೊಳ್ಳುತ್ತಿದ್ದಾರೆ. ಜತೆಗೆ, ಶಾಲೆಗಳ ಸಮೀಪದ ಅಂಗಡಿಗಳಲ್ಲೂ ಇವೇ ಧ್ವಜಗಳು ಮಾರಾಟವಾಗುತ್ತಿವೆ.
ಪ್ಲಾಸ್ಟಿಕ್ ಬಳಕೆ ನಿಯಂತ್ರಿಸದಿದ್ದರೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಪಾಲಿಕೆ ವಿರುದ್ಧ ದೂರು ನೀಡುವುದಾಗಿ ಇತ್ತೀಚೆಗೆ ರಾಜ್ಯ ಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಅಡಿ ಅವರು ಮೇಯರ್ ಮತ್ತು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಪಾಲಿಕೆ ವಿಶೇಷ ತಂಡ ರಚಿಸಿಲ್ಲ.
ಆರೋಗ್ಯಾಧಿಕಾರಿಗಳೇ ವಾರ್ಡ್‌ಗಳಲ್ಲಿ ದಾಳಿ ನಡೆಸಿ, ಪ್ಲಾಸ್ಟಿಕ್ ಧ್ವಜ ವಶಪಡಿಸಿಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳಿಗೂ ಬಟ್ಟೆ ಧ್ವಜ ಬಳಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದರೆ ಕನಿಷ್ಠ 500 ರೂ. ದಂಡ ಹಾಕಲಾಗುವುದು ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಬಟ್ಟೆ ಧ್ವಜಗಳ ಬಳಕೆಗೆ ಮಾತ್ರ ಅವಕಾಶ ನೀಡುವಂತೆ ಜು.20ರ ಸಭೆಯಲ್ಲಿ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೂ, ಮಾರುಕಟ್ಟೆಗೆ ಪ್ಲಾಸ್ಟಿಕ್ ಧ್ವಜಗಳು ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯಿಂದ ಮಾಹಿತಿ ಪಡೆದು, ಪ್ಲಾಸ್ಟಿಕ್ ಧ್ವಜ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್