Advertisement

ಅಸ್ಸಾಂನ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್‌ ಶುಲ್ಕ!

09:06 AM Jun 07, 2019 | Team Udayavani |

ಭುವನೇಶ್ವರ: ಪರಿಸರ ಸಂರಕ್ಷಣೆಯತ್ತ ವಿಭಿನ್ನ ಹೆಜ್ಜೆಇಟ್ಟಿರುವ ಅಸ್ಸಾಂನ ದಿಸ್‌ಪುರದ ಅಕ್ಷರ್‌ ಫೋರಂ ಶಾಲೆ, ತನ್ನ ವಿದ್ಯಾರ್ಥಿಗಳಿಗೆ ‘ಪ್ಲಾಸ್ಟಿಕ್‌ ಶುಲ್ಕ’ ಎಂಬ ವಿಶೇಷ ಶುಲ್ಕ ಪದ್ಧತಿಯನ್ನು ಆರಂಭಿಸಿದೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಕಡ್ಡಾಯವಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ ಇಡೀ ದಿಸ್‌ಪುರದಲ್ಲಿ ಪರಿಸರ ನೈರ್ಮಲ್ಯ ಕಾಪಾಡುವಲ್ಲಿ ಶಾಲೆ ಮಹತ್ವದ ಪಾತ್ರ ವಹಿಸುತ್ತಿದೆ.

Advertisement

ಏನಿದು ಪ್ಲಾಸ್ಟಿಕ್‌ ಶುಲ್ಕ?: ಶಾಲೆಯಲ್ಲಿರುವ ಸುಮಾರು 110 ವಿದ್ಯಾರ್ಥಿಗಳು ಪ್ರತಿ ವಾರ, ತಮ್ಮ ಮನೆಯಿಂದಾಗಲೀ ಅಥವಾ ತಮ್ಮ ಪ್ರಾಂತ್ಯದಿಂದಾಗಲಿ ಗರಿಷ್ಠ 20 ಪ್ಲಾಸ್ಟಿಕ್‌ ತ್ಯಾಜ್ಯವನ್ನು ತರಬೇಕು. ಹಾಗೆ, ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಬಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ‘ಪರಿಸರ ಸ್ನೇಹಿ ಇಟ್ಟಿಗೆ’ಯನ್ನು ತಯಾರಿಸಲು ಬಳಸಲಾಗುತ್ತಿದ್ದು, ಆ ಇಟ್ಟಿಗೆಗಳಿಂದ ಶಾಲೆಗಳ ಶೌಚಾಲಯ, ಇನ್ನಿತರ ಶಾಲಾ ಸಂಬಂಧಿ ನಿರ್ಮಾಣಗಳಲ್ಲಿ, ಪಾದಚಾರಿ ರಸ್ತೆಗಳನ್ನು ನಿರ್ಮಿಸುವ ಕಾಮಗಾರಿಗಳಲ್ಲಿ ಬಳಸಲಾಗುತ್ತಿದೆ.

34 ಟನ್‌ ಪ್ಲಾಸ್ಟಿಕ್‌!

ಶಾಲೆಯಲ್ಲಿ ಈ ರೀತಿ ನಿತ್ಯವೂ ಪ್ಲಾಸ್ಟಿಕ್‌ ಸಂಗ್ರಹ ಮಾಡಲು ಆರಂಭಿಸಿದಾಗಿನಿಂದ ದಿಸ್‌ಪುರ ವೊಂದರಲ್ಲೇ ದಿನಂಪ್ರತಿ 34 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆಯಾ ಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮನೆ ಮನೆಗೂ ಹೋಗಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಕೇಳುತ್ತಿರುವುದರಿಂದ ಜನರಲ್ಲಿ ಪ್ಲಾಸ್ಟಿಕ್‌ ಬಗ್ಗೆ ಅರಿವೂ ಮೂಡುತ್ತಿದೆ ಎನ್ನುತ್ತಾರೆ ಶಾಲೆಯ ಸಿಬಂದಿ.
ಬಡ ಮಕ್ಕಳಿಗೆ ಅಪೂರ್ವ ಅವಕಾಶ

ಈ ಯೋಜನೆಯಿಂದಾಗಿ, ಶಿಕ್ಷಣದಿಂದ ವಂಚಿತರಾಗಿದ್ದ ಬಡಮಕ್ಕಳಿಗೂ ಸಹಾಯವಾಗಿದೆ. ಕಲ್ಲು ಕ್ವಾರಿಯಲ್ಲಿ ಹಾಗೂ ಇತರ ಕಡೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಾ ಶಾಲೆಯಿಂದ ದೂರವಾಗಿದ್ದ ಮಕ್ಕಳೂ ಪ್ಲಾಸ್ಟಿಕ್‌ ತಂದು ನೀಡಿದರೆ ಸಾಕು, ಪ್ಲಾಸ್ಟಿಕ್‌ ಶುಲ್ಕದಡಿ ಅವರನ್ನು ಶಾಲೆಗೆ ದಾಖಲಾತಿ ಮಾಡಿಸಿಕೊಳ್ಳಲಾಗುತ್ತಿದೆ. ಜತೆಗೆ, ಅಂಥ ಬಡ ಮಕ್ಕಳು ತರುವ ಪ್ಲಾಸ್ಟಿಕ್‌ಗೆ ಪ್ರತಿಯಾಗಿ ಕೂಲಿಯನ್ನೂ ನೀಡಲಾಗುತ್ತದೆ. ಇದರಿಂದ ಅವರಿಗೆ ವಿದ್ಯಾಭ್ಯಾಸ ಸಿಗುವಂತಾಗಿದ್ದು, ಅವರ ಮನೆಗಳಿಗೂ ಒಳಿತಾಗಿದೆ ಎಂದು ಶಾಲೆ ಹೇಳಿದೆ.
Advertisement

Udayavani is now on Telegram. Click here to join our channel and stay updated with the latest news.

Next