Advertisement

ಹಳ್ಳಿಗಳಲ್ಲೂ ಪ್ಲಾಸ್ಟಿಕ್‌ ಒಣ ಕಸ ಪ್ರತ್ಯೇಕ ಸಂಗ್ರಹ ​​​​​​​

06:00 AM Sep 28, 2018 | Team Udayavani |

ಬೆಂಗಳೂರು: ನಗರ ಮಾತ್ರವಲ್ಲದೇ ಹಳ್ಳಿಗಳಲ್ಲೂ ಎಲ್ಲೆಂದರಲ್ಲಿ ಕಸ ಎಸೆಯುವುದು, ಪ್ಲಾಸ್ಟಿಕ್‌ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಸ ವಿಂಗಡಣೆ ವ್ಯವಸ್ಥೆ ತಂದು ಮನೆ, ಮನೆಗಳಿಂದ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮರುಬಳಕೆ ಮಾಡುವ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಮುಂದಾಗಿದೆ.

Advertisement

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ
ಬೈರೇಗೌಡ, ಸ್ವತ್ಛ ಭಾರತ್‌ ಅಭಿಯಾನದ 2ನೇ ಹಂತದಲ್ಲಿ ಹಳ್ಳಿಗಳಲ್ಲಿ ಸುಸ್ಥಿರ ಕಸ ನಿರ್ವಹಣಾ ವ್ಯವಸ್ಥೆ ಕಲ್ಪಿಸಲು
ನಿರ್ಧರಿಸಲಾಗಿದೆ ಎಂದು ಹೇಳಿದರು.

ಹಳ್ಳಿಗಳಲ್ಲೂ ಎಲ್ಲೆಂದರಲ್ಲಿ ಕಸ ಬಿಸಾಡುವುದು ವಾಡಿಕೆಯಾಗಿದೆ. ಅದರಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯ ವ್ಯಾಪಕವಾಗಿದ್ದು, ಹಳ್ಳಿಗಳ ವಾತಾವರಣ ಹದಗೆಟ್ಟು ಪ್ರಾಕೃತಿಕ ಸಮತೋಲನ ಕೆಡುತ್ತಿದೆ. ಆ ಹಿನ್ನೆಲೆಯಲ್ಲಿ ಸ್ವತ್ಛ ಭಾರತ ಅಭಿಯಾನದಡಿ 2ನೇ ಹಂತದಲ್ಲಿ ಸುಸ್ಥಿರ ಕಸ ನಿರ್ವಹಣೆಗೆ ಗಮನ ನೀಡುವಂತೆ ಸಿಇಒಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಕೆಲ ಜಿಲ್ಲೆಯ ಆಯ್ದ ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಸುಸ್ಥಿರ ಕಸ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಿ ಅದರ ಅನುಭವದ ಆಧಾರದ ಮೇಲೆ ಸರಳ ವ್ಯವಸ್ಥೆ ರೂಪಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರತಿ ತಾಲೂಕಿನಲ್ಲೂ ಒಂದೆರಡು ಗ್ರಾಪಂಗಳ ಗೊಂಚಲ ರಚಿಸಲಾಗುವುದು. ಆ ವ್ಯಾಪ್ತಿಯಲ್ಲಿ ವಾರದಲ್ಲಿ ನಿರ್ದಿಷ್ಟ ದಿನಗಳಂದು ಮನೆ ಮನೆಯಿಂದ ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಮರುಬಳಕೆಗೆ ಒದಗಿಸಲಾಗು ವುದು. ಒಣ ಕಸ ಸಂಗ್ರಹಕ್ಕೆ ಕೆಲವರು ಆಸಕ್ತಿ ತೋರಿದ್ದು, ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಅವರೇ ಒಣ ಕಸ ಸಂಗ್ರಹಿಸಿ ಮಾರಾಟ ಮಾಡಿ ಬಂದ ಹಣವನ್ನು ನಿರ್ವಹಣಾ ವೆಚ್ಚಕ್ಕೆ ನೀಡಲು ಚಿಂತಿಸಲಾಗಿದೆ. ಹಸಿ ಕಸವನ್ನು ರೈತರೇ ಬಳಸಿಕೊಳ್ಳಬಹುದು. ಒಂದೊಮ್ಮೆ ಹಸಿ ಕಸ ನೀಡಿದರೆ ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಿ ನರ್ಸರಿಗಳು ಇಲ್ಲವೇ ರೈತರಿಗೆ ನೀಡಲಾಗುವುದು ಎಂದು ಹೇಳಿದರು.

ಉಡುಪಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಎಲ್ಲೆಡೆ ಅದೇ ರೀತಿಯ ಸ್ಪಂದನೆ ನಿರೀಕ್ಷಿಸುವುದು ಕಷ್ಟ. ಹಾಗಾಗಿ ಸರಳ ಮಾದರಿ ರೂಪಿಸಿ ಹಂತ ಹಂತವಾಗಿ ಎಲ್ಲ ಗ್ರಾಪಂಗಳಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಪೌರಾಡಳಿತ ಆಯುಕ್ತ ಡಾ.ವಿಶಾಲ್‌ ಉಪಸ್ಥಿತರಿದ್ದರು.

Advertisement

ನ.1ಕ್ಕೆ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ
ಕರ್ನಾಟಕವು ನ.1ಕ್ಕೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಲಿದೆ. ಈಗಾಗಲೇ 20 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಅ.2ಕ್ಕೆ ಇನ್ನೂ ಏಳು ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗುವುದು. ಬಾಕಿ ಉಳಿದ ಮೂರು ಜಿಲ್ಲೆಗಳನ್ನು ನ.1ರ ಹೊತ್ತಿಗೆ ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

3 ವರ್ಷದಿಂದ ನಡೆದ ನಿರಂತರ ಪ್ರಯತ್ನದಿಂದಾಗಿ 20 ಜಿಲ್ಲೆಗಳನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗಿದೆ. ತುಮಕೂರು, ಚಿತ್ರದುರ್ಗ, ಕಲಬುರ್ಗಿ,ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಯಾದಗಿರಿ ಯಲ್ಲೂ ಶೌಚಾಲಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಅ.2ರಂದು ಈ 7 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗುವುದು. ಬಾಕಿ ಉಳಿದ ರಾಯಚೂರು,ಬೀದರ್‌, ವಿಜಯಪುರ ಜಿಲ್ಲೆಗಳನ್ನು ನ.1ರಂದು ಮುಕ್ತಗೊಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next