Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿನ ಅನಧೀಕೃತ ಜಾಹಿರಾತು ಫಲಕಗಳ ತೆರವು, ರಾಜಕಾಲುವೆಗಳ ನಿರ್ವಹಣೆ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತಂತೆ ಸಲ್ಲಿಕೆಯಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಎಸ್.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಬೆಂಗಳೂರಿನ ಸ್ವತ್ಛತೆ ಮತ್ತು ಅದರ ಗತವೈಭವ ಮರಳಿಸಲು ಸರ್ಕಾರ, ಸಾರ್ವಜನಿಕ ಸೇವೆಗಳನ್ನು ಒದಗಿಸುವ ಸರ್ಕಾರಿ ಸಂಸ್ಥೆಗಳು ಬದ್ಧತೆ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿತು.
Related Articles
Advertisement
ಈ ಮಧ್ಯೆ ಸಿಐಪಿಇಟಿಯ ನಿರ್ಲಕ್ಷ್ಯದ ಕುರಿತು ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಈ ರೀತಿಯ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ನ್ಯಾಯಾಲಯದಿಂದ ನಿರ್ದೇಶನ ಪಡೆದುಕೊಂಡು ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿ ಎಂದು ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಸಾಲಿಸಿಟರ್ ಜನರಲ್, ಮಾಲಿನ್ಯ ನಿಯಂತ್ರಣ ಮಂಡಳಿ ಬರೆದ ಪತ್ರದಲ್ಲಿ “ತುರ್ತು ವಿಷಯ’ ಅಥವಾ “ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ’ ಎಂದು ಪ್ರಸ್ತಾಪಿಸಿದ್ದರೆ, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿದ್ದರು ಎಂದರು.
ಇದರಿಂದ ಅಸಮಧಾನಗೊಂಡ ನ್ಯಾಯಪೀಠ, ನ್ಯಾಯಾಲಯ ಹೇಳಿದರಷ್ಟೇ ನಿಮ್ಮ ಅಧಿಕಾರಿಗಳು ಕೆಲಸ ಮಾಡುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಿ ಎಂದು ಸಹಾಯಕ ಸಾಲಿಸಿಟರ್ ಜನರಲ್‌ಗೆ ಹೇಳಿತು.
ಈ ವೇಳೆ ಈಗಾಗಲೇ ಪರೀಕ್ಷೆಗೆಂದು ಮಾದರಿಗಳನ್ನು ಕೊಟ್ಟ ಜಾಹಿರಾತು ಸಂಸ್ಥೆಗಳಲ್ಲದೇ ಉಳಿದವರು ತಮ್ಮ ಮಾದರಿಗಳನ್ನು (ಸ್ಯಾಂಪಲ್) ಬಿಬಿಎಂಪಿ ಆಯುಕ್ತರಿಗೆ ಸಲ್ಲಿಸಿ, ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಚೈನ್ನೈಗೆ ಕಳಿಸಿಕೊಡಲಿ. ಮಾದರಿ ಪರೀಕ್ಷೆಗೆ ತಗಲುವ ವೆಚ್ಚವನ್ನು ಸದ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಭರಿಸಲಿ ಎಂದು ನ್ಯಾಯಪೀಠ ಹೇಳಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು.
ನೌಕರಿಯಲ್ಲಿ “ಕೆಲಸ’ ಮಾಡಿ ತೋರಿಸಿ: “ನೌಕರಿ ಮಾಡುವುದು ಬೇರೆ, ಕೆಲಸ ಮಾಡುವುದು ಬೇರೆ. ನನ್ನ ಮಾತಿನ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಿ. ನೀವು ಮಾಡುವ ನೌಕರಿಯಲ್ಲಿ ಕೆಲಸ ಮಾಡಿ ತೋರಿಸಿ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಿಗೆ ತೀಕ್ಷ ¡ವಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿಗಳು, “ಈ ಮಾತು ಸಾರ್ವಜನಿಕ ಸೇವೆ ಒದಗಿಸುವ ಎಲ್ಲ ಇಲಾಖೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅನ್ವಯವಾಗುತ್ತದೆ’ ಎಂದು ಹೇಳಿದರು.
ಸ್ಟ್ರಕ್ಚರ್‌ಗಳು ಬೆಂಗಳೂರಿಗೆ ಭೂಷಣವಲ್ಲ: ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು ತೆರವುಗೊಳಿಸಲು ಬಾಕಿ ಇದ್ದ 86 ಅಕ್ರಮ ಹೋರ್ಡಿಂಗ್ ಮತ್ತು ಸ್ಟ್ರಕ್ಚರ್ಗಳ ಪೈಕಿ 28ನ್ನು ಕಂಪನಿಯವರೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದಾರೆ. ಮೂರನ್ನು ಬಿಬಿಎಂಪಿ ತೆರವುಗೊಳಿಸಿದೆ.
ಇನ್ನುಳಿದ 56ನ್ನು ಮೂರ್‍ನಾಲ್ಕು ದಿನಗಳಲ್ಲಿ ತೆರುವುಗೊಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅನಧಿಕೃತ ಜಾಹಿರಾತು ಫಲಕಗಳ ಬಗ್ಗೆ ದಯೆ, ದಾಕ್ಷಿಣ್ಯ ಬೇಡ. ಆದರೆ, ಕಾನೂನುಬದ್ಧ ಹೋರ್ಡಿಂಗ್ಸ್‌ಗಳಿಗೆ ಬಾಧೆ ಆಗದಂತೆ ನೋಡಿಕೊಳ್ಳಿ. “ಅಸ್ಥಿ ಪಂಜರಗಳಂತೆ’ ಕಾಣುವ ಸ್ಟ್ರಕ್ಚರ್‌ಗಳು ಬೆಂಗಳೂರಿಗೆ ಭೂಷಣವಲ್ಲ ಎಂದು ನ್ಯಾಯಪೀಠ ಕಿವಿಮಾತು ಹೇಳಿತು.