Advertisement

ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ

10:05 PM Oct 08, 2020 | mahesh |

ಮಂಡ್ಯ: ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ.

Advertisement

ಸಹಕಾರ ಸಂಘದಿಂದ ಅನ್ನಭಾಗ್ಯ ಯೋಜನೆಯ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಅದರಂತೆ ಗುರುದೇವರಹಳ್ಳಿ ಕಾಲೋನಿಯ ನಿವಾಸಿಗಳಾದ ಹೋಟೆಲ್ ಪುಟ್ಟೇಗೌಡ, ಮಧು, ಸತ್ಯಮ್ಮ ಸೇರಿದಂತೆ ನೂರಾರು ಮಂದಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಅಕ್ಕಿಯನ್ನು ತೆಗೆದುಕೊಂಡು ಹೋಗಿದ್ದ ನಿವಾಸಿಗಳಿಗೆ ಅಚ್ಚರಿ ಕಾದಿತ್ತು. ಮನೆಗೆ ಹೋಗಿ ನೋಡಲಾಗಿ ಪ್ಲಾಸ್ಟಿಕ್ ರೀತಿಯ ಅಕ್ಕಿಕಾಳುಗಳು ಕಂಡು ಬಂದಿದೆ.

ತಕ್ಷಣವೇ ಗ್ರಾಮಸ್ಥರು ಆಹಾರ ಇಲಾಖೆಯ ರಾಜಣ್ಣ ಎಂಬುವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿ ಪರಿಶೀಲಿಸಿ ಅಕ್ಕಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ತೆಗೆದುಕೊಂಡು ಹೋಗಿದ್ದು, ಅಕ್ಕಿ ಬಳಸದಂತೆ ತಿಳಿಸಿದ್ದಾರೆ.

ನಂತರ ಕೃಷಿ ಪತ್ತಿನ ಸಹಕಾರ ಸಂಘಕ್ಕೂ ಭೇಟಿ ನೀಡಿದ ಅಧಿಕಾರಿಗಳು ಅಕ್ಕಿಯನ್ನು ಪರಿಶೀಲನೆ ನಡೆಸಿದರು. ಸಹಕಾರ ಸಂಘದ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕರ ಸಮ್ಮುಖದಲ್ಲಿ ಪರಿಶೀಲನೆ ನಡೆದಿದ್ದು, ವಿತರಿಸದಂತೆ ಸೂಚಿಸಲಾಗಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ವಿವಿಧೆಡೆ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಘಟನೆಗಳು ನಡೆದಿದ್ದನ್ನು ಸ್ಮರಿಸಬಹುದು.

ರೈತಸಂಘ ಕಿಡಿ
ಚಿಕ್ಕರಸಿನಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರದಾರರಿಗೆ ವಿತರಣೆ ಮಾಡಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಅಕ್ಕಿಯನ್ನು ಪರಿಶೀಲಿಸಿದರು. ನಂತರ ನಾಗರೀಕ ಆಹಾರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next