Advertisement

ಹೇಮಗಿರಿ ದನಗಳ ಜಾತ್ರೆಯಲ್ಲಿ ಪ್ಲಾಸ್ಟಿಕ್‌ ನಿಷೇಧ

03:30 PM Jan 20, 2017 | Team Udayavani |

ಕೆ.ಆರ್‌.ಪೇಟೆ: ತಾಲೂಕಿನ ಹೇಮಗಿರಿಯ ಸುಪ್ರಸಿದ್ಧ ದನಗಳ ಜಾತ್ರೆಯಲ್ಲಿ ಪರಿಸರ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧ ಮಾಡಲಾಗಿದೆ. 40 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್‌ ಬಳಸಬಾರದು ಎಂದು ತಹಶೀಲ್ದಾರ್‌ ಕೆ.ರತ್ನಾ ಸೂಚನೆ ನೀಡಿದರು. 

Advertisement

ಹೇಮಗಿರಿಯಲ್ಲಿ ಜ.26ರಿಂದ ಫೆ. 8ರವರೆಗೆ ನಡೆಯ ಲಿರುವ ದನಗಳ ಜಾತ್ರೆ ಪ್ರಯುಕ್ತ ಪಟ್ಟಣದ ಮಿನಿವಿಧಾನ ಸೌಧದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಾತ್ರಾ ಕಾಲದ ಸುಂಕ ಹರಾಜು ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ರೆಗೆ ಬರುವ‌ ಜಾನುವಾರುಗಳಿಗೆ ಕುಡಿಯುವ ನೀರು, ವಿದ್ಯುತ್‌ ಪೂರೈಕೆ, ಜಾನುವಾರುಗಳೊಂದಿಗೆ ಬರುವ ರೈತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಗಳಿಗೆ ತುರ್ತು ಚಿಕಿತ್ಸೆ ನೀಡಲು ಸಂಚಾರಿ ಪಶು ಚಿಕಿತ್ಸಾ ಕೇಂದ್ರ ತೆರೆಯಲಾಗುವುದು. ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು. ಜಾತ್ರೆಗೆ ಬರುವ ರೈತರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಶೈಲಿಯ ಮನರಂಜನಾ ಕಾರ್ಯಕ್ರಮ ಆಯೋ ಜಿಸಲಾಗುವುದು. ಇದಕ್ಕೆ ಹೇಮಗಿರಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರ ನೀಡಬೇಕು ಎಂದು ಕೆ.ರತ್ನಾ ಮನವಿ ಮಾಡಿದರು.

ಫೆ.3ಕ್ಕೆ ಬ್ರಹ್ಮರಥೋತ್ಸವ: ರಥೋತ್ಸವದ ವರೆಗೆ ಜಾತ್ರಾ ಮಾಳದಲ್ಲಿರುವ ಉತ್ತಮ ರಾಸುಗಳು ಬಹುಮಾನ ನೀಡ ಲಾಗುವುದು. ಜಾತ್ರೆಯ ಅಂಗವಾಗಿ ಫೆ. 3ರಂದು ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವವ ನಡೆಯಲಿದೆ ಎಂದು ತಿಳಿಸಿದರು.

Advertisement

ಯಾವುದಕ್ಕೆ ಎಷ್ಟು ಸುಂಕ: ಹರಾಜು ಪ್ರಕ್ರಿಯೆಯಲ್ಲಿ ಅಂಗಡಿ ಮೇಲಿನ ಸುಂಕವು 1.79 ಲಕ್ಷ ರೂ.ಗೆ ಹರಾಜಾಯಿತು. ದನಗಳ ಸುಂಕವು 75 ಸಾವಿರ ರೂ., ಗೊಬ್ಬರ ಸುಂಕವು 13 ಸಾವಿರ ರೂ., ವಾಹನಗಳ ಸುಂಕ 40 ಸಾವಿರ ರೂ., ಹಣ್ಣು-ಕಾಯಿ ಸುಂಕವು 5 ಸಾವಿರ ರೂ., ಗೋಲಕ 4 ಸಾವಿರ ರೂ., ಹುಣಸೇಮರದ ಸುಂಕ 9 ಸಾವಿರ ರೂ., ಹುಲ್ಲುಗಾವಲು ಸುಂಕವು 2 ಸಾವಿರ ರೂ.ಗಳಿಗೆ ಹರಾಜು ಕೂಗಲಾಯಿತು. ಬರಗಾಲದ ಹಿನ್ನೆಲೆಯಲ್ಲಿ ನಿರೀಕ್ಷಿತ ಹರಾಜು ನಡೆಯದೇ ಇದ್ದರೂ ಸ್ಥಳೀಯರು ಹರಾಜು ಪ್ರಕ್ರಿಯೆಗೆ ಶಕ್ತಿ ಮೀರಿ ಸಹಕರಿಸುವ ಮೂಲಕ ಜಾತ್ರೆಯ ಅಭಿವೃದ್ಧಿಗೆ ಸಹಕರಿಸಿದರು.

ಮುಜರಾಯಿ ಶಿರಸ್ತೇದಾರ್‌ ಮಹದೇವೇಗೌಡ, ಮರಿಸಿದ್ದೇಗೌಡ, ಚಂದ್ರಿಕಾ, ಗ್ರಾಮ ಲೆಕ್ಕಾಧಿಕಾರಿ ಹರೀಶ್‌, ಬಂಡಿಹೊಳೆ ಕಾವೇರಿ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕ ಜಗದೀಶ್‌, ಟಿಎಪಿಸಿಎಂಎಸ್‌ ನಿರ್ದೇಶಕ ಅಶೋಕ್‌, ಯಜಮಾನ್‌ ರಾಜಶೇಖರ್‌, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಮಂಜುನಾಥ್‌, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ದೇವರಸೇಗೌಡ, ವಿಶ್ವನಾಥ್‌, ಬಂಡಿಹೊಳೆ ಜಯರಾಂ, ರಾಜಶೇಖರ್‌, ಸುರೇಶ್‌, ದೇವಾಲಯ ಪ್ರಧಾನ ಅರ್ಚಕ ರಾಮಭಟ್‌, ಪಾರುಪತ್ತೇಗಾರ್‌ ರಂಗರಾಜ್‌ ಮತ್ತಿತರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪಟ್ಟಣ ಠಾಣೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಶಿವಣ್ಣ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next