ದೇವನಹಳ್ಳಿ: ಜಿಲ್ಲಾದ್ಯಂತ ಕಳೆದ 6 ತಿಂಗಳಲ್ಲಿ ಬರೋಬ್ಬರಿ 5.67 ಟನ್ ಪ್ಲಾಸ್ಟಿಕ್ ಸಂಗ್ರಹವಾಗಿದೆ. ಜಿಲ್ಲೆಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಗಳಲ್ಲಿ ನಡೆದ 931 ದಾಳಿಗಳಲ್ಲಿ ಈ ಪ್ರಮಾಣದಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟ ಅಂಗಡಿ ಮಾಲೀಕರಿಂದ ಸರ್ಕಾರಕ್ಕೆ 3.64 ಲಕ್ಷ ರೂ. ದಂಡ ಸಂಗ್ರಹ ಆಗಿದೆ.
ಸರ್ಕಾರ ಪ್ಲಾಸ್ಟಿಕ್ ಕಡ್ಡಾಯ ನಿಷೇಧ ಎನ್ನುವ ನಿಯಮ ಮಾಡಿದ್ದರೂ, ರಾಜಾರೋಷವಾಗಿ ಬಳಕೆ ಮಾತ್ರ ಮುಂದುವರಿದಿದೆ. ಇಲಾಖೆಗಳು ಮತ್ತಷ್ಟು ಕಟ್ಟು ನಿಟ್ಟಾಗಿ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಬೇಕಿದ್ದು, ಜನರಲ್ಲೂ ಜಾಗೃತಿ ಮೂಡಿಸಬೇಕಿದೆ.
ಅಧಿಕಾರಿಗಳ ಅಮಾನತು?: ಜಿಲ್ಲಾದ್ಯಂತ ಪ್ಲಾಸ್ಟಿಕ್ ಮಾರಾಟ ನಿಯಂತ್ರಣ, ಪ್ಲಾಸ್ಟಿಕ್ ಉತ್ಪಾದಕರು ಹಾಗೂ ಮಾರಾಟಗಾರರಿಗೆ ತಿಳಿವಳಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸೂಚಿಸಲಾಗುತ್ತಿದೆ. ಜತೆಗೆ, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಮಾರಾಟಗಾರರ ಮಳಿಗೆಗೆ ವಾರಕ್ಕೆರಡು ಬಾರಿ ದಾಳಿ ನಡೆಸಿ, ಪ್ರಕರಣ ದಾಖಲಿಸಲಾಗುತ್ತಿದೆ. ಈ ಕಾರ್ಯಾಚರಣೆಗೆ ಸಹಕರಿಸದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ತಿಳಿಸಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಆಯಾ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯಾಗಿರುವ ಪ್ಲಾಸ್ಟಿಕ್ ಬಳಕೆ ತಡೆಗೆ ಜನರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗುತ್ತಿಲ್ಲ. ಸರ್ಕಾರ ಒಂದು ಕಡೆ ಪ್ಲಾಸ್ಟಿಕ್ ಬಳಸಬೇಡಿ ಎಂದು ಹೇಳುತ್ತಿದ್ದರೆ, ತೆರೆಮರೆಯಲ್ಲಿ ಸಣ್ಣಪುಟ್ಟ ಅಂಗಡಿಗಳಿಂದ ದೊಡ್ಡಮಟ್ಟದ ಮಾಲ್‌ಗಳಲ್ಲಿ ಪ್ಲಾಸಿಕ್ ಉತ್ಪನ್ನಗಳ ಬಳಕೆ ನಿರಾತಂಕವಾಗಿ ನಡೆಯುತ್ತಿದೆ. ಹೀಗಾಗಿ, ಸರ್ಕಾರ ಮತ್ತಷ್ಟು ಕಠಿಣ ನಿಯಮ ಜಾರಿಗೆ ತರುವ ಅನಿವಾರ್ಯವಿದೆ ಎನ್ನುವುದು ಪರಿಸರಾಸಕ್ತರ ಒತ್ತಾಯವಾಗಿದೆ.
ಮೂಲಕ್ಕಿಲ್ಲ ಅಂಕುಶ: ಬೆಂಗಳೂರಿನೊಂದಿಗೆ ಗಡಿ ಹಂಚಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೆ ಪ್ಲಾಸ್ಟಿಕ್ ಕವರ್, ಇತರೆ ಉತ್ಪನ್ನಗಳು ನೇರ ಸಾಗಾಟ ನಡೆಯುತ್ತದೆ. ಆದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪರಿಸರ ಅಧಿಕಾರಿ ಗಳು ಮಾತ್ರ ಸಣ್ಣಪುಟ್ಟ ವರ್ತಕರ ಅಂಗಡಿಗಳ ಮೇಲೆ ದಾಳಿ ನಡೆಸುತ್ತಾರೆ. ಈ ಅಂಗಡಿಗಳಿಗೆ ಪ್ಲಾಸ್ಟಿಕ್ ಪೂರೈಸುವ ದೊಡ್ಡ ಡೀಲರ್‌ಗಳ ಶಾಪ್ ಸೇರಿದಂತೆ ಸಾಗಾಟದ ಮಾಹಿತಿ ಮುಂಚಿತವಾಗಿ ಪಡೆಯಲು ಯಾವುದೇ ರೂಪುರೇಷ ಸೃಷ್ಟಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿರುವುದು ಕಾಣಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಮೂಲ ಪೂರೈಕೆದಾರರ ಮೇಲೆ ದಾಳಿ ನಡೆಸಬೇಕಿದೆ ಎಂದು ಜಿಲ್ಲೆಯ ವರ್ತಕರು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಪ್ಲಾಸ್ಟಿಕ್ ಹತೋಟಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.
– ಆರ್.ಶಾಲಿನಿ, ಯೋಜನಾ ನಿರ್ದೇಶಕಿ, ಜಿಲ್ಲಾ ನಗರಾಭಿವೃದ್ಧಿ ಕೋಶ
ಸರ್ಕಾರಿ ಅಧಿಕಾರಿಗಳು ಕೇವಲ ಸಣ್ಣಪುಟ್ಟ ಅಂಗಡಿ ಮಾಲೀಕರಿಗೆ ಮಾತ್ರ ದಂಡ ಪ್ರಯೋಗ ಮಾಡುತ್ತಿದ್ದು, ದೊಡ್ಡವರ ಮೇಲೆ ದಾಳಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.
– ಮುನಿರಾಜು, ದೇವನಹಳ್ಳಿ ವರ್ತಕ