Advertisement

ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧ ಕೈಬಿಡುವಂತೆ ಒತ್ತಾಯ

12:35 PM Aug 30, 2018 | |

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಬಗೆಯ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಿಸಿರುವ ಸರ್ಕಾರದ ಕ್ರಮದಿಂದ ಪ್ಲಾಸ್ಟಿಕ್‌ ಉದ್ಯಮಕ್ಕೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿರುವ ರಾಜ್ಯ ಪ್ಲಾಸ್ಟಿಕ್‌ ಸಂಘವು ಕೂಡಲೇ ನಿಷೇಧವನ್ನು ಕೈಬಿಡಬೇಕು ಎಂದು ಒತ್ತಾಯಿಸಿದೆ.

Advertisement

ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಂಘವು ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ದಿನವಿಡೀ ಪ್ರತಿಭಟನೆ ನಡೆಸಲು ಮುಂದಾಗಿದೆ. ಇನ್ನೊಂದೆಡೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್ಕೆಸಿಸಿಐ) ಸರ್ಕಾರ ನಿಷೇಧ ನಿರ್ಧಾರದ ಬಗ್ಗೆ ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿದೆ.

ಕಳೆದ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರವು ಎಲ್ಲ ಬಗೆಯ ಪ್ಲಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದನೆ, ಬಳಕೆಯನ್ನು ನಿಷೇಧಿಸಿದೆ. ಇದರಿಂದ ಹೋಟೆಲ್‌, ಆಟೊಮೊಬೈಲ್‌, ಗಾರ್ಮೆಂಟ್ಸ್‌, ರಫ್ತು ವ್ಯವಹಾರ ಸೇರಿದಂತೆ 17 ಉದ್ಯಮ ವಲಯಗಳಲ್ಲಿ ವಹಿವಾಟು ಏರುಪೇರು ಉಂಟಾಗಿದ್ದು, ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪರ್ಯಾಯಗಳನ್ನು ಕಲ್ಪಿಸದೆ, ಸಾಧಕ- ಬಾಧಕ ಪರಿಶೀಲಿಸದೆ ನಿಷೇಧಿಸಿರುವುದರಿಂದ ಉದ್ಯಮಿಗಳು, ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ರಾಜ್ಯ ಪ್ಲಾಸ್ಟಿಕ್‌ ಸಂಘದ ಅಧ್ಯಕ್ಷ ವಿ. ವಿಜಯಕುಮಾರ್‌ ಹೇಳಿದರು.

ನಿಷೇಧ ಎಷ್ಟು ಸರಿ?: ರಾಜ್ಯದಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ಯಂತ್ರೋಪಕರಣಗಳ ಮೇಲೆ 600 ಕೋಟಿ ರೂ. ಹೂಡಿಕೆಯಾಗಿದೆ. 75,000ಕ್ಕೂ ಹೆಚ್ಚು ನೌಕರರು ಈ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಉದ್ಯಮದಿಂದ ವಾರ್ಷಿಕವಾಗಿ 350 ಕೋಟಿ ರೂ.ನಷ್ಟು ತೆರಿಗೆ ಕೂಡ ಸರ್ಕಾರಕ್ಕೆ ಸಂಗ್ರಹವಾಗುತ್ತಿದೆ. ಹೀಗಿರುವಾಗ ಏಕಾಏಕಿ ನಿಷೇಧ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಸದ ವಿಂಗಡನೆಯಲ್ಲಿ ಆಗುವ ತೊಡಕನ್ನು ಸರಿಪಡಿಸಿ ವೈಜ್ಞಾನಿಕ ವಿಲೇವಾರಿಗೆ ಒತ್ತು ನೀಡುವ ಬದಲಿಗೆ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನೇ ನಿಷೇಧಿಸುವುದು ಪರಿಹಾರವಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿಷೇಧ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು. 2016ರ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮಾವಳಿಯಲ್ಲಿ 50 ಮೈಕ್ರಾನ್‌ಗಿಂತ ಹೆಚ್ಚು ಗುಣಮಟ್ಟದ ಪ್ಲಾಸ್ಟಿಕ್‌ ಬಳಕೆಗೆ ಅವಕಾಶವಿದ್ದು, ಅದರಂತೆ ರಾಜ್ಯದಲ್ಲೂ ಇದಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

Advertisement

ಶುಕ್ರವಾರ ಪ್ರತಿಭಟನೆ: ರಾಜ್ಯದಲ್ಲಿ 7,500ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಹಾಗೂ ಸಂಬಂಧಿತ ವಸ್ತುಗಳ ಉತ್ಪಾದನಾ ಘಟಕಗಳಿವೆ. ಇದರಲ್ಲಿ ಮೂರನೇ ಎರಡರಷ್ಟು ಘಟಕಗಳು ಬೆಂಗಳೂರಿನಲ್ಲಿವೆ. ಆಯ್ದ ಪ್ಲಾಸ್ಟಿಕ್‌ ಸೇರಿದಂತೆ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧದಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ಉದ್ಯಮಗಳು ಬಂದ್‌ ಆಗಿವೆ. ಉಳಿದ ಉದ್ಯಮಗಳು ಸಂಕಷ್ಟದಲ್ಲಿವೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಉದ್ಯಮಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯ ಕುಮಾರ್‌ ಹೇಳಿದರು.

ಎಫ್ಕೆಸಿಸಿಐ ಮನವಿ: ಉದ್ಯಮಿಗಳು ಪ್ಲಾಸ್ಟಿಕ್‌ ಕೈಗಾರಿಕಾ ವಲಯದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದು, ಪ್ಲಾಸ್ಟಿಕ್‌ ಬ್ಯಾಗ್‌ಗಳ ನಿಷೇಧದಿಂದ ಉದ್ಯಮಗಳಿಗೆ ತೀವ್ರ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ವಾರ್ಷಿಕವಾಗಿ ಸಾವಿರಾರು ಕೋಟಿ ರೂ. ಮೊತ್ತದ ಪ್ಲಾಸ್ಟಿಕ್‌ ಉತ್ಪನ್ನಗಳು ತಯಾರಾಗುತ್ತಿದ್ದು, ಇದರಲ್ಲಿ ಬಹುಪಾಲು ಪ್ಲಾಸ್ಟಿಕ್‌ ಮರುಬಳಕೆಗೆ ಸೂಕ್ತವಾಗಿದೆ. ಹೀಗಿರುವಾಗ ಏಕಾಏಕಿ ನಿಷೇಧ ಸರಿಯಲ್ಲ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಹೇಳಿದ್ದಾರೆ.

ಇನ್ನೊಂದೆಡೆ ರಫ್ತು ಉದ್ಯಮಕ್ಕೂ ಹೊಡೆತ ಬಿದ್ದಿದೆ. ಪ್ಯಾಕೇಜಿಂಗ್‌ಗಾಗಿ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಿಸಿರುವುದರಿಂದ ಸರಕು- ಸೇವೆಗಳ ರಫ್ತು ವಹಿವಾಟಿಗೂ ಅಡ್ಡಿ ಉಂಟಾಗಿದೆ. ಜತೆಗೆ ಕಿರಾಣಿ ಅಂಗಡಿಗಳ ವ್ಯಾಪಾರ ಮೇಲೂ ಪರಿಣಾಮ ಬೀರಿದೆ. ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕವಾಗಿ ಪ್ಲಾಸ್ಟಿಕ್‌ ವಿಲೇವಾರಿಗೆ ಕ್ರಮ ಕೈಗೊಂಡರೆ ಸಮಸ್ಯೆ ನಿವಾರಣೆಯಾಗಲಿದೆ.

ಆ ಹಿನ್ನೆಲೆಯಲ್ಲಿ ಸರ್ಕಾರ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧದ ಬಗ್ಗೆ ಪುನರ್‌ಪರಿಶೀಲಿಸಬೇಕು. ಪರ್ಯಾಯ ಸಾಧನಗಳು ರೂಪುಗೊಳ್ಳುವವರೆಗೆ ಪ್ಲಾಸ್ಟಿಕ್‌ ಉದ್ಯಮಗಳ ರಕ್ಷಣೆಗೆ ಧಾವಿಸಬೇಕು. ಜತೆಗೆ ಪ್ಲಾಸ್ಟಿಕ್‌ ಉತ್ಪಾದಕರು, ವ್ಯಾಪಾರಿಗಳಿಗೆ ಅಧಿಕಾರಿಗಳು ಕಿರುಕುಳ ನೀಡದಂತೆ ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next