ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದ ಎಂಟು ಜನರು ಪ್ಲಾಸ್ಮಾ ದಾನ ಮಾಡಿದ್ದು, ಈಗಾಗಲೇ ಹತ್ತು ಜನರಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿದೆ. ಅವರಲ್ಲಿ ಮೂರು ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಇನ್ನುಳಿದವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಕಿಮ್ಸ್‌ನ ಕೋವಿಡ್-19 ಕೇಂದ್ರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯಿಂದ ಪ್ಲಾಸ್ಮಾ ಪಡೆದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಕೋವಿಡ್ ಸೋಂಕಿತರೊಬ್ಬರಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಅವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ನಂತರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಐಸಿಎಂಆರ್)ನಿಂದ ಅನುಮತಿ ದೊರೆತ ಮೇಲೆ ಸೋಂಕಿನಿಂದ ಗುಣಮುಖರಾಗಿದ್ದ ಹುಬ್ಬಳ್ಳಿ ಮತ್ತು ಧಾರವಾಡದ ಒಟ್ಟು 4 ಜನರು ಪ್ಲಾಸ್ಮಾ ನೀಡಿದ್ದರು. ಇದರಿಂದ ಮೂವರಿಗೆ ಪದ್ಧತಿ ಅನುಸಾರ ಶಸ್ತ್ರಚಿಕಿತ್ಸೆ ಮೂಲಕ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಇವರಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೊಬ್ಬರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಇದೀಗ ಸೋಂಕಿನಿಂದ ಗುಣಮುಖರಾದ ಮತ್ತೆ ನಾಲ್ವರು ಪ್ಲಾಸ್ಮಾ ನೀಡಿದ್ದು, ಆರು ಜನರಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿದೆ.
ಒಬ್ಬರಿಗೆ ಒಂದು ಯುನಿಟ್: ಕಿಮ್ಸ್ ಕೋವಿಡ್-19 ಕೇಂದ್ರದಲ್ಲಿ ಮೊದಲು ಐಸಿಎಂಆರ್ ಮಾರ್ಗಸೂಚಿ ಅನುಸಾರ ಸೋಂಕಿನಿಂದ ಗುಣಮುಖರಾದವರಿಂದ 400 ಎಂಎಲ್ (ಎರಡು ಯುನಿಟ್) ಪ್ಲಾಸ್ಮಾ ಪಡೆದು, ಅದನ್ನು ಓರ್ವ ಸೋಂಕಿತನಿಗೆ ಪೂರ್ಣವಾಗಿ ಕೊಟ್ಟು ಪ್ಲಾಸ್ಮಾ ಥೆರಪಿ ನೀಡಲಾಗುತ್ತಿತ್ತು. ಈಗ ಐಸಿಎಂಆರ್‌ನ ಪ್ರಯೋಗ ಮುಗಿದಿದೆ. ಕಾರಣ ಕಿಮ್ಸ್‌ನಲ್ಲಿ ಸದ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ ಸೋಂಕಿತರಿಗೆ ಒಂದು ಯುನಿಟ್ (200ಎಂಎಲ್) ಪ್ಲಾಸ್ಮಾ ನೀಡಲಾಗುತ್ತಿದೆ.
ಸೋಂಕಿನಿಂದ ಗುಣಮುಖರಾದ ಓರ್ವರಿಂದ ಎರಡು ಯುನಿಟ್ (400ಎಂಎಲ್) ಪ್ಲಾಸ್ಮಾ ಪಡೆದು, ಅದನ್ನು ಇಬ್ಬರು ಸೋಂಕಿತರಿಗೆ ತಲಾ 200 ಎಂಎಲ್(ಒಂದು ಯುನಿಟ್)ನಂತೆ ನೀಡಿ ಚಿಕಿತ್ಸೆ ಕೊಡಲಾಗುತ್ತಿದೆ. ನಾಲ್ವರು ಗುಣಮುಖರಿಂದ ಪಡೆಯಲಾದ ಪ್ಲಾಸ್ಮಾವನ್ನು ಮೂರು ದಿನಗಳ ಹಿಂದೆ ಮೂವರು ಸೋಂಕಿತರಿಗೆ ನೀಡಲಾಗಿದೆ. ಶನಿವಾರ ಮತ್ತು ರವಿವಾರ ತಲಾ ಒಬ್ಬ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದೆ. ಇನ್ನು ಒಂದು ಯುನಿಟ್ ಪ್ಲಾಸ್ಮಾ ಕೇಂದ್ರದಲ್ಲಿದೆ.
ಐಸಿಎಂಆರ್ ಪ್ರಯೋಗ ಮುಗಿದಿದೆ. ಈಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಲಾಗುತ್ತಿದೆ. ಇದುವರೆಗೆ ಒಟ್ಟು ಎಂಟು ಜನರು ಪ್ಲಾಸ್ಮಾ ಕೊಟ್ಟಿದ್ದಾರೆ. ಅದನ್ನು ಒಟ್ಟು ಹತ್ತು ಜನರಿಗೆ ಕೊಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನುಳಿದವರು ಚೇತರಿಸಿಕೊಳ್ಳುತ್ತಿದ್ದಾರೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. –
ಡಾ| ರಾಮ ಕೌಲಗುಡ್ಡ, ಮೆಡಿಸಿನ್ ವಿಭಾಗ, ಕಿಮ್ಸ್
–ಶಿವಶಂಕರ ಕಂಠಿ