Advertisement

ಕೀಟ ಸಿಕ್ಕಿದ್ರೆ ಗುಳುಂ

09:31 AM Apr 19, 2019 | mahesh |

ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಅಂತ ಹೇಳ್ಳೋದನ್ನು ಕೇಳಿದ್ದೇವೆ. ಆದರೆ, ಕೆಲವು ಸಸ್ಯಗಳು ಕೀಟಗಳನ್ನು ಹಿಡಿದು ಗುಳುಂ ಮಾಡುತ್ತವೆ. ದ್ಯುತಿ ಸಂಶ್ಲೇಷಣೆ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಆ ಸಸ್ಯಗಳ ಮಾಂಸಾಹಾರಕ್ಕೆ, ಬಾಯಿ ಚಪಲ ಕಾರಣವಲ್ಲ. ಬದಲಾಗಿ, ಸಸಾರಜನಕ ಹಾಗೂ ಪಾಸ್ಪರಸ್‌ ಕೊರತೆ ನಿವಾರಿಸಿಕೊಳ್ಳಲು ಸಸ್ಯಗಳು, ಹುಳು-ಹುಪ್ಪಟೆಗಳನ್ನು ಹಿಡಿದು ತಿನ್ನುತ್ತವೆ. ದೇಹದಲ್ಲಿ ವಿಟಮಿನ್‌ ಕೊರತೆಯಾದಾಗ, ಡಾಕ್ಟರ್‌ ಕೊಡುವ ವಿಟಮಿನ್‌ ಮಾತ್ರೆಗಳನ್ನು ತೆಗೆದುಕೊಳ್ತೀವಲ್ಲ, ಹಾಗೆ. ಭಾರತದಲ್ಲಿ ಕಂಡು ಬರುವ ಅಂಥ ಕೆಲವು ಕೀಟ ಭಕ್ಷಕ ಸಸ್ಯಗಳ ವಿವರ ಇಲ್ಲಿದೆ.

Advertisement

1. ಡ್ರಾಸ್ಸೆರ
ಸಾಮಾನ್ಯವಾಗಿ sundews ಅಂತ ಕರೆಯಲ್ಪಡುವ ಈ ಸಸ್ಯ ಕುಬ್ಜವಾಗಿ ನೆಲಕ್ಕೆ ಅಂಟಿಕೊಂಡೇ ಬೆಳೆಯುತ್ತದೆ. ಇದರ ಎಲೆಗಳು ಅಗಲವಾಗಿ ಚಾಚಿಕೊಂಡಿರುತ್ತವೆ. ಎಲೆಯ ತುದಿಗೆ ಆಕರ್ಷಕವಾದ ವರ್ಣಗ್ರಂಥಿಗಳಿರುತ್ತವೆ. ಇವು ಬಿಸಿಲಿನಲ್ಲಿ ಇಬ್ಬನಿಯಂತೆ ಹೊಳೆಯುವುದರಿಂದ ಇದಕ್ಕೆ sundews ಎಂಬ ಹೆಸರು ಬಂದಿದೆ. ಕೀಟವು ಇದರ ಎಲೆಯ ಮೇಲೆ ಬಂದು ಕುಳಿತಾಗ ಅದರ ಕಾಲುಗಳು ಎಲೆಗೆ ಅಂಟಿಕೊಳ್ಳುತ್ತವೆ. ನಂತರ ಎಲೆಗಳು ನಿಧಾನವಾಗಿ ಸುರುಳಿಯಾಕಾರದಲ್ಲಿ ಸುತ್ತುತ್ತಾ ಹುಳು/ಬೇಟೆಯನ್ನು ಜೀರ್ಣ ಮಾಡಿಕೊಳ್ಳುತ್ತವೆ. ಈ ಸಸ್ಯ ಮರಳ ದಂಡೆಯಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

2. ಹೂಜಿ ಗಿಡ (ನೆಪೆಂಥಸ್‌ /ಪಿಚರ್‌)
ಇದು ಅತಿ ಸಾಮಾನ್ಯವಾಗಿ ಕಂಡು ಬರುವ ಮಾಂಸಾಹಾರಿ ಸಸ್ಯಗಳಲ್ಲೊಂದು. ಭಾರತದಲ್ಲಿಯೇ ಸುಮಾರು 90 ಪ್ರಭೇದದ ಪಿಚರ್‌ ಸಸ್ಯಗಳಿವೆ. ಇದರ ಎಲೆಗಳು ಜಗ್‌ (ಹೂಜಿ) ಆಕಾರದಲ್ಲಿರುತ್ತವೆ. ಇದರ ಒಳಗಡೆ ನೀರಿನಂಥ ದ್ರವವಿರುತ್ತದೆ. ಹುಳುಗಳನ್ನು ಆಕರ್ಷಿಸಲು ಕೊಳೆತು ನಾರುವ ದುರ್ಗಂಧವನ್ನು ಪಸರಿಸುವ ಗಿಡ, ಆಕರ್ಷಿತವಾಗಿ ಬರುವ ಹುಳುಗಳು ಎಲೆಯ ಮೇಲಿರುವ ಅಂಟಿನಿಂದಾಗಿ ಕಾಲು ಜಾರಿ ಹೂಜಿಯೊಳಗೆ ಬೀಳುವಂತೆ ಮಾಡುತ್ತದೆ. ಒಂದು ಸಲ ಇದರಲ್ಲಿ ಬಿದ್ದ ಹುಳಕ್ಕೆ ಹೊರ ಬರಲಾಗುವುದೇ ಇಲ್ಲ. ಆ ದ್ರವದಲ್ಲಿರುವ ಎಂಜೈಮ್‌ಗಳು ಹುಳುವನ್ನು ಜೀರ್ಣಿಸಿಕೊಳ್ಳುತ್ತವೆ. ಇಲಿ ಮತ್ತು ಚಿಕ್ಕ ಕಪ್ಪೆಗಳನ್ನು ಕೂಡ ಈ ಗಿಡ ಬೇಟೆಯಾಡುತ್ತದೆ.

3. ಬಟರ್‌ವರ್ಟ್‌
ಈ ಕೀಟಾಹಾರಿ ಸಸ್ಯವು ಹಿಮಾಲಯ, ಕಾಶ್ಮೀರ, ಸಿಕ್ಕಿಂನಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ತೊರೆ, ಹಳ್ಳಗಳ ಪಕ್ಕದಲ್ಲಿ ಬೆಳೆಯುತ್ತದೆ. ಎಲೆಯ ಮೇಲೆ ಬಂದು ಕೂರುವ ಕೀಟಗಳು, ಎಲೆಯ ಮೇಲಿರುವ ಅಂಟಾದ ವಸ್ತುವಿಗೆ ಸಿಕ್ಕಿಕೊಂಡು ಬಿಡುತ್ತವೆ. ಆಗ ಸಸ್ಯದ ಎಲೆ ಸುರುಳಿಯಾಗಿ ಸುತ್ತಿ, ಕೀಟವನ್ನು ಸ್ವಾಹ ಮಾಡುತ್ತದೆ. ಕೀಟದ ದೇಹದಿಂದ ತನಗೆ ಬೇಕಾದ ಅಂಶಗಳನ್ನು ಹೀರಿಕೊಳ್ಳುತ್ತದೆ.

4. ವೀನಸ್‌ ಫ್ಲೈ ಟ್ರ್ಯಾಪ್‌
ಚೂಪಾದ ಹಲ್ಲುಗಳಿರುವ ಪ್ರಾಣಿಯೊಂದು ಬಾಯಿ ತೆಗೆದು ಕುಳಿತಂತೆ ಕಾಣುವ ವೀನಸ್‌ ಫ್ಲೈ ಟ್ರ್ಯಾಪ್‌ ಎಂಬ ಈ ಸಸ್ಯ ನೋಡಲು ಸುಂದರವಾಗಿದೆ. ಈ ಸಸ್ಯಗಳ ಮೂಲ ಅಮೆರಿಕಾದ ಉತ್ತರ ಮತ್ತು ದಕ್ಷಿಣ ಕ್ಯಾರೊಲಿನಾ ಪ್ರಾಂತ್ಯ. ಇವು ಶಿಕಾರಿ ಮಾಡುವ ಬಗೆಯೂ ಕುತೂಹಲಕಾರಿ. ಬಾಯಿ ತೆರೆದುಕೊಂಡಿರುವ ಎಲೆ, ಸುವಾಸನಾಭರಿತ ಮಕರಂದವನ್ನು ಸೂಸುತ್ತಿರುತ್ತದೆ. ಕೀಟಗಳು ಅದರ ಮೇಲೆ ಬಂದು ಕುಳಿತೊಡನೆ ಅದು ಎಲೆಯನ್ನು ಮುಚ್ಚುವುದಿಲ್ಲ. ಬದಲಿಗೆ, ಕೀಟದ ಚಲಿಸುವಿಕೆಯನ್ನು ಗಮನಿಸುತ್ತಿರುತ್ತದೆ! ಕಸ ಕಡ್ಡಿಯನ್ನು ಕೀಟವೆಂದು ನಂಬಿ ಮೋಸ ಹೋಗಬಾರದೆಂದು ಮಾರ್ಪಾಡುಗೊಂಡಿರುವ ಜೈವಿಕ ವಿಧಾನ ಇದು! ಪ್ರತಿ 20 ಸೆಕೆಂಡುಗಳಲ್ಲಿ 2 ಚಲನೆಗಳಾದರೆ ಮಾತ್ರ ಎಲೆಯನ್ನು ಮುಚ್ಚಿ , ಕೀಟವನ್ನು ಬಂಧಿಸುತ್ತದೆ. ನಂತರ ಕೆಲವು ದಿನಗಳಾದ ಮೇಲೆ ಎಲೆ ಪುನಃ ತೆರೆದುಕೊಳ್ಳುತ್ತದೆ ಮತ್ತು ಕೀಟದ ತ್ಯಾಜ್ಯವನ್ನು ಕೆಳಗೆ ಬೀಳಿಸುತ್ತದೆ.

Advertisement

ಅನುಪಮಾ ಕೆ. ಬೆಣಚಿನಮರ್ಡಿ

Advertisement

Udayavani is now on Telegram. Click here to join our channel and stay updated with the latest news.

Next