Advertisement

ಸಮೃದ್ಧ ಮೇವು ಗೋವುಗಳ ನಲಿವು ಯೋಜನೆ ಜಾರಿ

07:26 AM Feb 22, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಆರು ತಾಲ್ಲೂಕುಗಳು ಈ ವರ್ಷ ತೀವ್ರ ಬರಗಾಲಕ್ಕೆ ತುತ್ತಾಗಿ ಮಳೆಯ ಅಭಾವದಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮೇವಿನ  ಕೊರತೆ ನೀಗಿಸಲು ಜಿಲ್ಲಾಡಳಿತವು ಕೋಚಿಮುಲ್‌ ಸಹಯೋಗದೊಂದಿಗೆ ಸ್ಥಳೀಯವಾಗಿ ಹಸಿರು ಮೇವು ಬೆಳೆಸಲು ಸಮೃದ್ಧ ಮೇವು ಗೋವುಗಳ ನಲಿವು ಎಂಬ ವಿನೂತನ ಯೋಜನೆಯನ್ನು ರೂಪಿಸಿ ರೈತರ ಕೈ ಹಿಡಿಯುವ ಕಾಯಕಕ್ಕೆ ಮುಂದಾಗಿದೆ.

Advertisement

ನೀರಾವರಿ ಇದ್ದರೆ ಸಾಕು: ಕನಿಷ್ಠ 0-20 ಗುಂಟೆ ನೀರಾವರಿ ಸೌಲಭ್ಯವುಳ್ಳ ಜಮೀನು ಹೊಂದಿದ್ದ ರೈತರು ಈ ಯೋಜನೆಗೆ ಅರ್ಹರಾಗಿದ್ದು, ಅರ್ಜಿಗಳನ್ನು ಸ್ಥಳೀಯ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮತ್ತು ಗ್ರಾಪಂಗಳ ಕಚೇರಿಗಳಲ್ಲಿ ಆನ್‌ಲೈನ್‌ ಮೂಲಕ ಮಾ.6 ರ ಒಳಗಾಗಿ ಸಲ್ಲಿಸಬಹುದಾಗಿದೆ. 

ಸ್ವೀಕೃತವಾದ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ 3 ದಿನಗಳ ಒಳಗಾಗಿ ಅಭಿವೃದ್ಧಿಪಡಿಸಿದ ಆ್ಯಪ್‌ ಮೂಲಕ ಸ್ಥಳ ಪರಿಶೀಲನೆ ಮಾಡಿ, ಅರ್ಹ ರೈತರಿಗೆ ಉಚಿತವಾಗಿ ಮೇವಿನ ಬೀಜವನ್ನು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಯೋಜನೆ ಅನುಷ್ಠಾನಕ್ಕೆ ಆ್ಯಪ್‌: ಮೇವಿನ ಬೀಜ ಬಿತ್ತನೆಯಾದ 30 ಹಾಗೂ 50 ನೇ ದಿನಗಳಲ್ಲಿ ಬೆಳೆಯ ಬೆಳವಣಿಗೆಯ ಬಗ್ಗೆ ಇಲಾಖಾ ವತಿಯಿಂದಲೇ ಅಭಿವೃದ್ಧಿಪಡಿಸಿದ ತಂತ್ರಾಶದ ಮೂಲಕ ಛಾಯಾಚಿತ್ರದೊಂದಿಗೆ ಸ್ಥಳ ಪರಿಶೀಲಿಸಲಾಗುವುದು. 

ರೈತರ ಖಾತೆಗೆ ಜಮಾ: ಪೂರ್ಣ ಪ್ರಮಾಣದಲ್ಲಿ ಮೇವು ಬೆಳೆದ ರೈತರಿಗೆ ಕೋಚಿಮುಲ್‌ ವತಿಯಿಂದ ಡೇರಿ ಸದಸ್ಯರಿಗೆ ತಲಾ ಎರಡು ಸಾವಿರ ರೂ. ಮತ್ತು ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಣ್ಣ ಜೋಳ ಬೆಳೆದ ರೈತರಿಗೆ 3,000 ಹಾಗೂ ಮುಸುಕಿನ ಜೋಳ ಬೆಳೆದಂತಹ ಎಲ್ಲಾ ರೈತರಿಗೆ 2,500 ರೂ. ಪ್ರೋತ್ಸಾಹಧನವನ್ನು ನೇರವಾಗಿ ಆರ್‌.ಟಿ.ಜಿ.ಎಸ್‌ ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿದೆ. 

Advertisement

ರೈತರು ತಾವು ಬೆಳೆದ ಮೇವನ್ನು ಸ್ವಂತಕ್ಕೆ ಆದರೂ ಬಳಸಬಹುದು, ಇಲ್ಲ ಮಾರಾಟ ಮಾಡಬಹುದಾಗಿದೆ. ಈ ಯೋಜನೆಯಿಂದ ಬರಗಾಲದಲ್ಲಿಯೂ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗಿ ಆರೋಗ್ಯ ಕಾಪಾಡುವುದರ ಜೊತೆಗೆ ಹಾಲು ಉತ್ಪಾದನೆಯೊಂದಿಗೆ ರೈತರ ಆದಾಯವನ್ನು ಹೆಚ್ಚಿಸುವ ಮಹತ್ವಕಾಂಕ್ಷೆ ಹೊಂದಿ ಈ ಯೋಜನೆಯನ್ನು ಜಿಲ್ಲಾಡಳಿತ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದೊಂದಿಗೆ ರೂಪಿಸಿದೆ. 

ರಾಜ್ಯದಲ್ಲಿ ಮೊದಲು: ಈ ಹಿಂದೆ ಕೇವಲ ಕೋಚಿಮುಲ್‌ ವತಿಯಿಂದಲೇ ನೇರವಾಗಿ ರೈತರಿಗೆ ಅದರಲ್ಲೂ ಹಾಲು ಉತ್ಪಾದಕರಿಗೆ ಮಾತ್ರ ಮೇವು ಬೀಜ ಕೊಟ್ಟು ಆರ್ಥಿಕ ನೆರವು ಕೊಡಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾಡಳಿತ ಕೂಡ ಕೋಚಿಮುಲ್‌ನೊಂದಿಗೆ ಕೈ ಜೋಡಿಸಿರುವುದರಿಂದ ಅದರಲ್ಲೂ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿ

ಪಾರದರ್ಶಕವಾಗಿ ಹಸಿರು ಮೇವು ಬೆಳೆಯುವ ನೀರಾವರಿ ಇರುವ ರೈತರಿಗೆ ತಲಾ 5  ಸಾವಿರ ರೂ. ನೆರವು ನೀಡುತ್ತಿರುವುದು ರಾಜ್ಯದಲ್ಲಿ ಮೊದಲ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಬರದ ಸಂದರ್ಭದಲ್ಲಿ ಮೇವಿಗೆ ಕೊರತೆಯಾಗದಂತೆ ಜಿಲ್ಲಾಡಳಿತ ರೂಪಿಸಿರುವ ಸಮೃದ್ಧ ಮೇವು ಗೋವುಗಳ ನಲಿವು ಯೋಜನೆ ರೈತರ ಕೈ ಹಿಡಿಲಿದೆ.

ಪಾರದರ್ಶಕತೆಗೆ ವಿಶೇಷ ಆ್ಯಪ್‌ ಅಭಿವೃದ್ಧಿ: ಸಮೃದ್ಧ ಮೇವು ಗೋವುಗಳ ನಲಿವು ಯೋಜನೆಯಡಿ ರಾಸುಗಳಿಗೆ ನೀರಾವರಿ ಪ್ರದೇಶದಲ್ಲಿ ಮೇವು ಬೆಳೆದು ಕೊಡಲು ರೈತರಿಗೆ 5 ಸಾವಿರ ರೂ. ಆರ್ಥಿಕ ನೆರವು ನೀಡಲು ಮುಂದಾಗಿರುವ ಜಿಲ್ಲಾಡಳಿತ ಯೋಜನೆಯನ್ನು ಪ್ರತಿ ಹಂತದಲ್ಲಿ ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕವಾಗಿ ಆ್ಯಪ್‌  ಅಭಿವೃದ್ಧಿಪಡಿಸಲಾಗಿದೆ. 

ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ರೈತರಿಂದ ಸ್ಪೀಕರಿಸಿ ಅವುಗಳನ್ನು ಸ್ಥಳೀಯ ಗ್ರಾಮ ಲೆಕ್ಕಿಗರ ಪರಿಶೀಲನೆಗೆ 3 ದಿನದಲ್ಲಿ ಒಳಪಡಿಸಿ ಅವರಿಂದ ನೇರವಾಗಿ ಎಂಪಿಸಿಎಸ್‌ ಸಂಘಗಳಿಗೆ ಅರ್ಜಿ ರವಾನಿಸಿ ಅಲ್ಲಿಂದ ಮೇವು ಬೀಜ ಪೂರೈಸಲಾಗುತ್ತದೆ. ರೈತರು ಮೇವು ಬೆಳೆದಿರುವುದನ್ನು ತಂತಾಂಶ್ರದಲ್ಲಿ ದೃಢೀಕರಣಗೊಂಡ ಬಳಿಕ ರೈತರಿಗೆ  ಜಿಲ್ಲಾಡಳಿತ 5 ಸಾವಿರ ರೂ. ಆರ್ಥಿಕ ನೆರವು ವಿತರಿಸಲಿದೆ ಎಂದು ಜಿಲ್ಲಾ ಪಶು ಸಂಗೋಪನಾ ಇಲಾಖೆ ಪ ನಿರ್ದೇಶಕ ಡಾ.ಮಧುರನಾಥರೆಡ್ಡಿ “ಉದಯವಾಣಿ’ಗೆ ತಿಳಿಸಿದರು.

ಜಿಲ್ಲಾದ್ಯಂತ ಸುಮಾರು ಒಂದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ಮೇವು ಬೆಳೆಯಲು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದೊಂದಿಗೆ ಕೈ ಜೋಡಿಸಿ ಮೇವು ಬೆಳೆಯುವ ರೈತರಿಗೆ ತಲಾ 5 ಸಾವಿರ ರೂ, ಆರ್ಥಿಕ ನೆರವು ನೀಡಲಾಗುವುದು. ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕೆಂಬ ಉದ್ದೇಶದಿಂದ ಆ್ಯಪ್‌ನ್ನು ಸಹ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ರೈತರು ಸಮೃದ್ಧ ಮೇವು ಗೋವುಗಳ ನಲಿವು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು.
-ಅನಿರುದ್ದ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next