ನಾಗಮಂಗಲ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಂದ ಗಿಡ ನೆಡಿಸುವ ಮೂಲಕ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕುಂಟಾನಕೊಪ್ಪಲು ಗ್ರಾಮದ ವರ ರಘು ಹಾಗೂ ಬಂಡಳ್ಳಿ ಗ್ರಾಮದ ವಧು ಉಮಾ ಜೋಡಿಯ ಕೈಯಲ್ಲಿ ಕಲ್ಯಾಣ ಮಂಟಪದ ಹೊರಗಡೆ ಗಿಡ ನೆಡಿಸುವ ಮೂಲಕ ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನದ ಸಂಸ್ಥಾಪಕರಾದ ಯೋಗ ಗುರು ಲಕ್ಷ್ಮಣ್‌ಜೀ ವಿಶಿಷ್ಠವಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ವಾರ್ಷಿಕೋತ್ಸವದಲ್ಲಿ 100 ಗಿಡ ನೆಡಿ: ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಪ್ರತಿಯೊಬ್ಬರೂ ಗಿಡ ಮರ ನೆಡುವ ಮೂಲಕ ಪರಿಸರ ಸಂರಕ್ಷಿಸಲು ಪ್ರಯತ್ನಿಸಬೇಕು. ಪ್ರತಿಯೊಬ್ಬರೂ ತಮ್ಮ ಮದುವೆ ವಾರ್ಷಿಕೋತ್ಸವ, ಹುಟ್ಟು ಹಬ್ಬಗಳಲ್ಲಿ ಒಂದೊಂದು ಗಿಡವನ್ನು ಪರಿಸರಕ್ಕೆ ಉಡುಗೊರೆಯಾಗಿ ನೀಡುತ್ತಿದ್ದರೂ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕನಿಷ್ಠ 100 ಗಿಡ ನೆಟ್ಟು ಪೋಷಿಸಲು ಸಾಧ್ಯವೆಂದರು. ಇದೇ ವೇಳೆ ಸೀತಾಫಲ ಹಣ್ಣಿನ ಗಿಡವನ್ನು ಉಡುಗೊರೆಯಾಗಿ ನೀಡಿ ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವಕ್ಕೆ ಒಂದೊಂದು ಗಿಡ ನೆಟ್ಟು ಪೋಷಿಸುವ ಹೊಣೆ ನಿಮ್ಮದು ಎಂದು ತಿಳಿಸಿದರು.
ಸ್ವಾಸ್ಥ್ಯ ಮಾರ್ಗದ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾ ಸಿದರು. ಅಲ್ಲದೇ, ಈ ಕಾರ್ಯಕ್ಕೆ ಯೋಗ ಬಂಧುಗಳಾದ ಸತೀಶ್, ಮೂರ್ತಿ ಸೇರಿದಂತೆ ವಧು ವರರ ಸಂಬಂಧಿಕರು, ಸಾರ್ವಜನಿಕರು ಸಾಕ್ಷಿಯಾದರು. ಡೀಸಿ ದಂಪತಿ: ಮಂಡ್ಯ ಮತ್ತು ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ದಂಪತಿ ಆದಿಚುಂಚನಗಿರಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ಶ್ರೀಗಳ ಸಾನ್ನಿಧ್ಯ:ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ, ಮೈಸೂರಿನ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಸಸಿ ನೆಟ್ಟರು. ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವ ಚನ ನೀಡಿ, ವಿಶ್ವ ಪರಿಸರ ದಿನಾಚರಣೆ ದಿನದಂದು ಮಾತ್ರ ಸಸಿಗಳನ್ನು ನೆಡದೆ ನಿರಂತರವಾಗಿ ಗಿಡಮರ ಪೋಷಿಸುವ ಕೆಲಸವಾಗಬೇಕೆಂದರು. ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿ: ಪ್ರಾಥಮಿಕ ಶಾಲಾ ತರಗತಿಗಳಿಂದಲೇ ಪಠ್ಯಗಳಲ್ಲಿ ಪರಿಸರದ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ತನ್ಮೂಲಕ ಮಕ್ಕಳ ದಿಸೆಯಿಂದಲೇ ಪರಿಸರ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಬೇಕು ಎಂದರು. ಮಾಲಿನ್ಯ ಸೇರಿದಂತೆ ಇನ್ನಿತರ ರೀತಿಯಲ್ಲಿ ಪರಿಸರ ಹಾಳು ಮಾಡುವುದನ್ನು ನಿಲ್ಲಿಸಬೇಕು. ಆ ಮೂಲಕ ಪರಿಸರಕ್ಕಾಗುವ ನಮ್ಮ ಜೀವನದಲ್ಲಿ ಪರಿಸರದ ಪಾತ್ರವೂ ಬಹುಮುಖ್ಯವಾಗಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಐಎಎಸ್ ಅಧಿಕಾರಿ ಶ್ರೀಧರ್, ಮಠದ ಭಕ್ತರು ಉಪಸ್ಥಿತರಿದ್ದರು.