ಧಾರವಾಡ: ಏಳುಗುಡ್ಡ ಏಳು ಕೆರೆ ಒಂದು ಗುಪ್ತಗಾಮಿನಿ ನದಿ ಹೊಂದಿದ ಧಾರವಾಡ ನಗರ ಎಂಟು ಹಳ್ಳಗಳು, 8 ಸಾವಿರ ಹೆಕ್ಟೇರ್‌ನಷ್ಟು ದಟ್ಟ ಕಾಡು ಹೊಂದಿದ ಜಿಲ್ಲೆ. ವರ್ಷಕ್ಕೆ ಬರೊಬ್ಬರಿ 40 ಟಿಎಂಸಿ ಅಡಿಯಷ್ಟು ನೀರು ಈ ಕಾಡಿನಲ್ಲಿ ಸುರಿದು ಮುನ್ನಡೆಯುವ ಸ್ವಚ್ಛಂದ ಪರಿಸರ.
ಆಗಲೇ ಎಚ್ಚೆತ್ತುಕೊಂಡ ಸರ್ಕಾರ 1987ರಿಂದ 1992ರ ಅವಧಿಯಲ್ಲಿ ಅಖಂಡ ಧಾರವಾಡ ಜಿಲ್ಲೆಯ 1100 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪುಗಳನ್ನು ನಿರ್ಮಿಸಿತು. ಇದಕ್ಕಾಗಿ ಅಂದಿನ ಕಾಲದಲ್ಲೇ 55ಲಕ್ಷ ರೂ.ಗಳನ್ನು ಖರ್ಚು ಮಾಡಿತು. ಇದೇ ಅವಧಿಯಲ್ಲಿ ಒಟ್ಟು 1.96 ಕೋಟಿ ಸಸಿಗಳನ್ನು ನೆಡಲಾಗಿತ್ತು. ಆದರೆ ಉಳಿದಿದ್ದು ಮಾತ್ರ ಶೇ.23 ಮಾತ್ರವಂತೆ.
Advertisement
ಇದು 50ರ ದಶಕದಲ್ಲಿ ಜಿಲ್ಲೆಯ ಸುಂದರ ಪರಿಸರ ಮತ್ತು ದಟ್ಟ ಅರಣ್ಯದ ಸಂಕೇತಗಳಿವು. ಆದರಿಂದು ಇದಾವುದು ಇಲ್ಲಿ ಉಳಿದಿಲ್ಲ. 1991ರಲ್ಲಿ ಜಿಲ್ಲೆಯಲ್ಲಿ 1271ಚ.ಕಿ.ಮೀ. ಮೀಸಲು ಅರಣ್ಯ ಪ್ರದೇಶವಿತ್ತು. ಈ ಪೈಕಿ 57 ಚ.ಕಿ.ಮೀ. ಖಾಸಗಿ ಅರಣ್ಯ ಕೂಡ ಇತ್ತು. ಆದರೆ ಎಲ್ಲವೂ ಕೇವಲ 20 ವರ್ಷಗಳಲ್ಲಿ ಮಂಗಮಾಯವಾಗಿ ಇಲ್ಲಿನ ಅರಣ್ಯದ ಹಗಲು ದರೋಡೆ ನಡೆಯಿತು.
Related Articles
Advertisement
ಯಾವಾಗ ಇದ್ದ ಅರಣ್ಯ ವಿನಾಶದ ಅಂಚು ತಲುಪಿತೋ ನಗರಗಳು, ರೈತರ ಹೊಲಗಳು, ಸಾರ್ವಜನಿಕ ಉದ್ಯಾನಗಳು ಸೇರಿದಂತೆ ಎಲ್ಲೆಡೆ ಸಸಿ ನೆಟ್ಟು ಸಾಮಾಜಿಕ ಅರಣ್ಯ ಬೆಳೆಸುವ ಪ್ರಯತ್ನ ನಡೆಯಿತು. ದಟ್ಟ ಕಾನನಗಳು ಕಣ್ಮರೆಯಾದಂತೆ ಮತ್ತು ನಗರ ಪ್ರದೇಶಗಳು ದೈತ್ಯವಾಗಿ ಬೆಳೆಯಲಾರಂಭಿಸಿದ ಮೇಲೆ ಸಾಮಾಜಿಕ ಅರಣ್ಯ ಪರಿಕಲ್ಪನೆ ಹುಟ್ಟಿಕೊಂಡಿತು. ಬರಗಾಲದಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೂಲಿಗಾಗಿ ನೆಡುತೋಪು ನಿರ್ಮಾಣ ಯೋಜನೆಗಳು ಜಾರಿಯಾದವು. ಈ ಅವಧಿಯಲ್ಲಿ ಧಾರವಾಡ, ಕಲಘಟಗಿ ತಾಲೂಕಿನ ದಟ್ಟ ಅರಣ್ಯದ ಮಧ್ಯದಲ್ಲಿ ಸಾಗುವಾನಿ ಮರಗಳ ತೋಪುಗಳನ್ನು ಬೆಳೆಸಲಾಯಿತು.
ಸುಜಲ ಜಲಾನಯನ: ಸುಜಲ ಜಲಾನಯನ ಯೋಜನೆಯಡಿ 2001-2004ರ ಜಿಲ್ಲೆಯಲ್ಲಿ ತುಂಬಾ ಉತ್ತಮ ಕೆಲಸ ಕಾರ್ಯ ನಡೆದವು. ರೈತರ ಹೊಲಗಳಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ತೇಗ, ಬೀಟೆ, ಮಾವು, ನುಗ್ಗೆ ಸೇರಿದಂತೆ ಅನೇಕ ಜಾತಿಯ ಗಿಡಗಳನ್ನು ಪೂರೈಸಲಾಗಿತ್ತು. ಅಂದು ನೆಟ್ಟ ಈ ಸಸಿಗಳು ಇಂದು ಮರವಾಗಿ ಬೆಳೆದು ನಿಂತಿವೆ. ಅದರಲ್ಲೂ ಧಾರವಾಡ-ಕಲಘಟಗಿ ತಾಲೂಕಿನಲ್ಲಿ ತೇಗದ ಗಿಡಗಳು ಇಂದು 10 ಮೀಟರ್‌ನಷ್ಟು ಉದ್ದಕ್ಕೆ ಬೆಳೆದು ನಿಂತಿದ್ದು ರೈತರಿಗೆ ಉತ್ತಮ ಆದಾಯದ ಮೂಲವಾಗಿವೆ. ಅಷ್ಟೇಯಲ್ಲ, ಮರ ಆಧಾರಿತ ಕೃಷಿಗೆ ಬೆನ್ನೆಲುಬಾಗಿ ನಿಂತಿವೆ. ಈ ಯೋಜನೆಯಡಿ ಜಿಲ್ಲೆಯಾದ್ಯಂತ 8ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡಲಾಗಿತ್ತು. ಇವುಗಳ ಪೈಕಿ ಶೇ.80 ಸಸಿಗಳು ರೈತರ ಹೊಲಗಳಲ್ಲಿ ಇಂದು ಚೆನ್ನಾಗಿ ಬೆಳೆದು ನಿಂತಿವೆ. ಆದರೆ ಸಾರ್ವಜನಿಕ ಸ್ಥಳಗಳು, ರಸ್ತೆ ಪಕ್ಕದಲ್ಲಿ ಹಾಕಿದ ಸಸಿಗಳು ಮಾತ್ರ ಉಳಿಯಲೇ ಇಲ್ಲ.
ಉತ್ತಮ ಗಿಡ ಬೆಳೆಸುವ ಕಾರ್ಯವಾಗಿಲ್ಲ: ಬಡಾವಣೆಗಳಲ್ಲಿನ ಉದ್ಯಾನಕ್ಕೆ ಮೀಸಲಿದ್ದ ಕಡೆಗಳಲ್ಲಿ ಉತ್ತಮ ಗಿಡ ಬೆಳೆಸುವ ಕಾರ್ಯ ಸರಿಯಾಗಿ ಆಗಿಯೇ ಇಲ್ಲ. ಅದರಲ್ಲೂ ಖಾಸಗಿ ಮಾಲೀಕತ್ವದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಬಡಾವಣೆಗಳಲ್ಲಿ ಉದ್ಯಾನಕ್ಕೆ ಕಡಿಮೆ ಸ್ಥಳಗಳನ್ನು ಮೀಸಲಿಡಲಾಗಿದೆ. 2010ರಿಂದ ಈಚೆಗೆ ಅವಳಿ ನಗರದಲ್ಲಿ ಅಭಿವೃದ್ಧಿ ಹೊಂದಿದ 23 ನೂತನ ಬಡಾವಣೆಗಳಲ್ಲಿ ಅಂದಾಜು 56ಸಾವಿರದಷ್ಟು ಸಸಿಗಳನ್ನು ನೆಡಬೇಕಿತ್ತು. ನಿಯಮಗಳನ್ವಯ ಬಡಾವಣೆ ನಿರ್ಮಿಸುವಾಗಲೇ ಗ್ರೀನ್‌ಬೆಲ್rಗೆ ಜಾಗ ಮೀಸಲಿಡಬೇಕಿದ್ದು, ಕೆಲವು ಬಡಾವಣೆಗಳಲ್ಲಿ ಈ ನಿಯಮಗಳನ್ನು ಕೂಡ ಗಾಳಿಗೆ ತೂರಲಾಗಿದೆ.
ಸಾಮಾಜಿಕ ಅರಣ್ಯ ವಿಭಾಗದಲ್ಲಿ ಅತೀ ಹೆಚ್ಚು ಮರಗಳನ್ನು ನೆಡುವುದಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ಬಳಕೆಯಾಗುತ್ತಿದೆ. ಆದರೆ ನೆಟ್ಟ ಸ್ಥಳಗಳಲ್ಲಿಯೇ ಗಿಡಗಳನ್ನು ಪ್ರತಿ ವರ್ಷ ನೆಡುತ್ತಿರುವ ಅನಿಷ್ಠಕ್ಕೆ ಅಧಿಕಾರ ವರ್ಗ ಹೋಗಿದ್ದಕ್ಕೆ ಅನೇಕ ನಿದರ್ಶನಗಳು ಸಾಕ್ಷಿಯಾಗಿ ನಿಂತಿವೆ.
ಶಾಲೆಯಲ್ಲೂ ಹುಟ್ಟಲಿಲ್ಲ ಗಿಡಮರ: ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಲಿ ಎಂದುಅರಣ್ಯ ಇಲಾಖೆ ಶಾಲಾ ಮೈದಾನದಲ್ಲಿ 2016-17ರಿಂದಲೇ ಆರಂಭಗೊಂಡಿದ್ದು, ಈವರೆಗೂ ಶಾಲೆಗಳ ಮೈದಾನದಲ್ಲಿ ನೆಟ್ಟ ಗಿಡಗಳು ಉಳಿದಿದ್ದು ಕೇವಲ ಶೇ.4 ಮಾತ್ರ.
ಜಿಲ್ಲೆಯಲ್ಲಿ 2018ರಲ್ಲಿ 65 ಸಾವಿರ ಸಸಿಗಳನ್ನು ವಿತರಿಸಲಾಗಿತ್ತು. ಕಳೆದ ವರ್ಷದ ಬರಗಾಲಕ್ಕೆ ಮತ್ತು ಶಾಲಾ ಆವರಣದಲ್ಲಿ ಗಿಡಗಳಿಗೆ ರಕ್ಷಣೆ ಸಿಕ್ಕದೇ ಹೋಗಿದ್ದರಿಂದ ಅವುಗಳ ಪೈಕಿ ಬರೀ 8 ಸಾವಿರದಷ್ಟು ಸಸಿಗಳು ಮಾತ್ರ ಬದುಕಿದ್ದು, ಈ ಪೈಕಿ ಮುಂದಿನ ವರ್ಷದವರೆಗೂ ಗಟ್ಟಿಯಾಗಿ ನಿಲ್ಲುವ ಸಸಿಗಳು ಶೇ.50 ಮಾತ್ರ ಎನ್ನುತ್ತಿದೆ ಶಿಕ್ಷಣ ಇಲಾಖೆ. ಇನ್ನು 2019 ರಲ್ಲಿ 80 ಸಾವಿರದಷ್ಟು ಸಸಿಗಳನ್ನು ಈಗಾಗಲೇ ವಿತರಿಸಲಾಗಿದ್ದು, ಇವುಗಳನ್ನು ಕೂಡ ಮತ್ತದೇ ಸ್ಥಳಗಳಲ್ಲಿ ನೆಡಲಾಗಿದೆ.
ದೇಶಿ ಸಸ್ಯಗಳೇ ಇಲ್ಲ: 90ರ ದಶಕದವರೆಗೂ ರಸ್ತೆ ಪಕ್ಕದಲ್ಲಿ ನೇರಳೆ, ಹೊಂಗೆ, ಮಾವಿನ ಮರಗಳನ್ನು ನೆಟ್ಟು ಪೋಷಿಸಲಾಗಿದೆ. ಆದರೆ ನಂತರದ ವರ್ಷಗಳಲ್ಲಿ ಮಾತ್ರ ಎಲ್ಲೆಂದರಲ್ಲಿ ಆಕೇಶಿಯಾ-ನೀಲಗಿರಿ ಸಸಿಗಳನ್ನೇ ನರ್ಸರಿಗಳು ಅಭಿವೃದ್ಧಿಪಡಿಸಿವೆ. ಇವುಗಳಿಂದ ಪರಿಸರಕ್ಕೆ ಹಾನಿ ಎಂಬುದು ಗೊತ್ತಾಗಿ 2017ರಲ್ಲಿ ಸರ್ಕಾರ ಇವುಗಳನ್ನು ನಿಷೇಧಿಸಿದ್ದರೂ ಈಗಾಗಲೇ ನೆಟ್ಟ ಸಸಿಗಳು ಮತ್ತು ಈಗಾಗಲೇ ಬೆಳೆದು ನಿಂತ ಗಿಡಗಳನ್ನು ತೆಗೆಯುವುದು ತುಂಬಾ ಕ್ಲಿಷ್ಟಕರ. ನೀಲಗಿರಿಯಂತೂ ಜಿಲ್ಲೆಯಲ್ಲಿನ ಸರ್ಕಾರಿ ಬಂಗಲೆಗಳು, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಹುಟ್ಟಿ ನಿಂತಿವೆ. ಅತೀ ಹೆಚ್ಚು ಅಂತರ್ಜಲ ಹೀರುವ ಈ ಗಿಡಗಳ ತೆರುವಿನ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ಮಾಡಿಲ್ಲ.
ಕಳೆದ ನಾಲ್ಕು ವರ್ಷಗಳಿಂದ ಬರೀ ಸಿಂಗಪೂರ ಚೆರಿ ಮತ್ತು ಕಾಡು ಬಾದಾಮಿ ಗಿಡಗಳೇ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಈ ಎರಡೂ ಗಿಡಗಳ ಆಯುಸ್ಸು ಬರೀ ಹತ್ತು ವರ್ಷಗಳು ಮಾತ್ರ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ, ನೀರು ಹಾಕಿ, ರಕ್ಷಾ ಕವಚಗಳನ್ನು ಅಳವಡಿಸಿ ಬೆಳೆಸಿದ ಗಿಡಗಳು ಬರೀ ಎಂಟು ವರ್ಷಕ್ಕೆ ಸತ್ತು ಹೋಗುತ್ತಿದ್ದು, ಸಾಮಾಜಿಕ ಅರಣ್ಯ ಯೋಜನೆ ದೂರಾಲೋಚನೆ ಎಷ್ಟೆಂಬುದು ಅರ್ಥವಾಗುತ್ತದೆ. ಇನ್ನು ದೇಶಿಯವಾಗಿ ಸಿಕ್ಕುವ ಮಾವು, ಬೇವು, ಹಲಸು, ಹುಣಸೆ, ನೇರಳೆ, ಬಿಲ್ವಪತ್ರಿ, ಅತ್ತಿ, ಮುತ್ತುಗದ ಗಿಡಗಳತ್ತ ಅರಣ್ಯ ಇಲಾಖೆ ಇನ್ನು ಸರಿಯಾಗಿ ದೃಷ್ಟಿಯನ್ನೇ ನೆಟ್ಟಿಲ್ಲ. ಇದಕ್ಕಾಗಿ ಸರ್ಕಾರ ಕೋಟಿ ಕೋಟಿ ರೂ.ಗಳನ್ನು ಜಿಲ್ಲೆಗೆ ವ್ಯಯಿಸಿದೆ. ಇತ್ತ ಗಿಡಗಳು ಸರಿಯಾಗಿ ಹುಟ್ಟಲಿಲ್ಲ… ಅತ್ತ ಸರ್ಕಾರ ನೀಡಿದ ಅನುದಾವೂ ಉಳಿಯಲಿಲ್ಲ…
ಗಿಡ ನೆಡಲು ಇನ್ನೂ ಜಾಗವಿದೆ:
ನವಲೂರು ಗುಡ್ಡ, ಬೂದನಗುಡ್ಡ, ಕಲಘಟಗಿ ರಸ್ತೆಯಲ್ಲಿನ ಕಂದಾಯದ ಪಾಳು..,ದಡ್ಡಿ ಕಮಲಾಪೂರ, ಕ್ಯಾರಕೊಪ್ಪ, ಮಲ್ಲೂರು, ಬಾಡ, ಸಲಕಿನಕೊಪ್ಪ, ಮನಸೂರು, ಮನಗುಂಡಿ, ಬೆಳ್ಳಿಗಟ್ಟಿ, ನಿಗದಿ, ಬೆನಕನಕಟ್ಟಿ,ಅಂಬ್ಲಿಕೊಪ್ಪ, ಮುರಕಟ್ಟಿ, ಹೊಲ್ತಿಕೋಟಿ, ಬನದೂರು, ಕನ್ನಿಕೊಪ್ಪ, ಕಳಸನಕೊಪ್ಪ, ಜೋಡಳ್ಳಿ, ಕಣವಿ ಹೊನ್ನಾಪೂರ, ಗುಡಿಹಾಳ, ದಾಸ್ತಿಕೊಪ್ಪ, ಮಡಿಕೆಹೊನ್ನಳ್ಳಿ, ಶಿಗ್ಗಟ್ಟಿ ತಾಂಡಾ, ದೇವಿಕೊಪ್ಪ, ಬೈಸವಾಡ, ಗುಂಗಾರಗಟ್ಟಿ, ಡೋರಿ, ಬೆಣಚಿ, ಮುರಕಟ್ಟಿ, ಹಳ್ಳಿಗೇರಿ, ಹೆಬ್ಬಳ್ಳಿ, ಶಿವಳ್ಳಿ, ಉಣಕಲ್, ಹಿರೇನರ್ತಿ ಸೇರಿದಂತೆ ಒಟ್ಟು 74 ಗ್ರಾಮಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗೆ 4 ಸಾವಿರ ಹೆಕ್ಟೇರ್ (10 ಸಾವಿರ ಎಕರೆ ) ಪಾಳು ಭೂಮಿ ಇದ್ದು, ಇಲ್ಲಿಯೇ 25ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟು ಚೆನ್ನಾಗಿ ಬೆಳೆಸಲು ಸಾಧ್ಯವಿದೆ.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಸಂಘ-ಸಂಸ್ಥೆಗಳು ಹಾಗೂ ರಾಯಾಪೂರ, ಗಾಮನಗಟ್ಟಿ, ಗುಂಗಾರಗಟ್ಟಿ ಕೈಗಾರಿಕೆ ಅಭಿವೃದ್ಧಿ ಪ್ರದೇಶಗಳಲ್ಲಿಯೇ ಅತೀ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅವುಗಳ ಪೈಕಿ ಅತೀ ಹೆಚ್ಚು ಸಸಿಗಳು ಬೆಳೆದು ನಿಂತಿವೆ. ಕಲಘಟಗಿ ಎಪಿಎಂಸಿ, ಬಸ್‌ಡಿಪೋ, ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ಹೆಚ್ಚಿನ ಗಿಡಮರ ಸಾಮಾಜಿಕ ಅರಣ್ಯ ಯೋಜನೆಯಡಿ ಬೆಳೆಸಲಾಗಿದೆ. • ಮಹೇಶಕುಮಾರ್, ಡಿಎಫ್‌ಒ, ಧಾರವಾಡ
25 ವರ್ಷದಿಂದಲೂ ಕೋಟಿ ಸಸಿ ನೆಟ್ಟಿದ್ದರೆ, ಇಷ್ಟೊತ್ತಿಗೆ ಧಾರವಾಡದಲ್ಲಿ ಅತೀ ಹೆಚ್ಚು ಮಳೆ ಸುರಿಯಬೇಕಿತ್ತು. ಆದರೆ ಇಲ್ಲಿ ಅಷ್ಟು ಸಸಿಗಳು ಕಾಣುತ್ತಲೇ ಇಲ್ಲ. ನೆಟ್ಟ ಸಸಿಗಳು ಎಲ್ಲಿ ಹೋದವು ? ಎಂಬ ಲೆಕ್ಕ ಸಾರ್ವಜನಿಕರ ಎದುರು ಬರಬೇಕಿದೆ. • ಹರ್ಷವರ್ಧನ ಶೀಲವಂತ, ಪರಿಸರ ತಜ್ಞ, ಧಾರವಾಡ
•ಬಸವರಾಜ ಹೊಂಗಲ್