ಬಾಗಲಕೋಟೆ: ಸೃಷ್ಟಿಯ ಜೀವ ವೈವಿಧ್ಯತೆ ಕುರಿತು ಸೃಷ್ಟಿಯು ಇಡೀ ಮನುಕುಲಕ್ಕೆ ದೇವರು ನೀಡಿದ ವರದಾನ. ಮನುಷ್ಯ ಸೃಷ್ಟಿಯ ಕೂಸು. ಕೋಟ್ಯಂತರ ವರ್ಷಗಳಿಂದ ತನ್ನ ಮಕ್ಕಳನ್ನು ಈ ಸೃಷ್ಟಿ ಜತನದಿಂದ ಕಾಪಾಡುತ್ತಾ ಬಂದಿದೆ. ಕಾಲಕಾಲಕ್ಕೆ ಎಲ್ಲವನ್ನೂ ನೀಡುತ್ತಿದೆ ಎಂದು ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ನಿಟ್ಟಿನಲ್ಲಿ ಮನುಷ್ಯನಷ್ಟೆ ಅಲ್ಲ ತನ್ನ ಮಡಿಲಲ್ಲಿರುವ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿಗೆ ಇದೆ ಪ್ರೀತಿಯನ್ನು ತೋರಿದೆ. ತನ್ನ ಮಡಿಲ ಮಕ್ಕಳು ಆರೋಗ್ಯಕರವಾಗಿ ಬದುಕಬೇಕೆಂಬುದೆ ಈ ಅಮ್ಮನ ಆಶೆ. ಈ ಆಶಯದಂತೆ ಎಲ್ಲ ಜೀವಿಗಳು ಅತ್ಯಂತ ವೈವಿಧ್ಯತೆಯಿಂದ ಸಹಕಾರ ತತ್ವದಿಂದ ಬದುಕುತ್ತ ಬಂದಿವೆ ಎಂದರು.
ಆದರೆ, ವೈಜ್ಞಾನಿಕ ಜಗತ್ತಿನಲ್ಲಿ ಬದುಕುತ್ತಿರುವ ಮನುಷ್ಯ ಮಾತ್ರ ತನ್ನ ಸ್ವಾರ್ಥದಿಂದ ಸೃಷ್ಟಿಯ ಮೇಲೆ ಸವಾರಿ ಮಾಡಿ, ತಾನು ಗೆದ್ದೆ ಎಂಬ ದುರಹಂಕಾರದಿಂದ ಈ ಸೃಷ್ಟಿಯ ಜೀವಸರಪಳಿ ತುಂಡರಿಸಿ ಪ್ರಕೃತಿಯನ್ನು ವಿಕೃತಿಗೊಳಿಸಿದ್ದಾನೆ. ಇದು ಮನುಕುಲದ ಅಂತ್ಯ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಇದರ ಪರಿಣಾಮಗಳು ಅತ್ಯಂತ ಭಯಾನಕವಾದುದು. ಅದನ್ನು ಇದೀಗ ಕೊರೊನಾ ಮಹಾಮಾರಿಯಿಂದ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.
ಸೃಷ್ಟಿಯ ಈ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡು, ಎಲ್ಲರೊಳಗೊಂದಾಗಿ ಬದುಕುವುದನ್ನು ಕಲಿಯಬೇಕಾಗಿದೆ. ನಮ್ಮ ಭೋಗದ ಬದುಕಿಗೆ ವಿದಾಯ ಹೇಳಿ. ಸಹಕಾರ ತತ್ವದಿಂದ ಬದುಕಿ, ಮುಂದಿನ ಜನಾಂಗಕ್ಕೆ ನಾವು ಶುದ್ಧವಾದ ಗಾಳಿಯನ್ನು, ಶುದ್ಧವಾದ ನೀರನ್ನು, ಶುಭ್ರವಾದ ಆಕಾಶವನ್ನು ಬಿಟ್ಟುಹೋಗುವುದು ನಮ್ಮ ಧ್ಯೇಯವಾಗಬೇಕು. ಆಗ ಮಾತ್ರ ಈ ಸೃಷ್ಟಿಯ ಮೇಲೆ ಮನುಕುಲ ಉಳಿದೀತು ಎಂದರು.
ಕಾನೂನು ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ| ವಿ.ಆರ್ ಶಿರೋಳ, ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ|ಎಸ್.ಆರ್ ಕಂದಗಲ್ಲ, ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಎಸ್.ಎಸ್ ಶೆಟ್ಟರ, ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಬೆನಕನಾಳ, ಕಾನೂನು ಕಾಲೇಜಿನ ಪ್ರಾಚಾರ್ಯ ಡಾ|ಚಂದ್ರಿಕಾ ಮುಂತಾದರು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ|ವಿ.ಎಸ್ ಕಟಗಿಹಳ್ಳಿಮಠ ಸ್ವಾಗತಿಸಿದರು. ಪ್ರಾಚಾರ್ಯ ಡಾ|ಎಸ್.ಆರ್ ಕಂದಗಲ್ಲ ವಂದಿಸಿದರು.