ಬೆಟಗೇರಿ: ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭವಾಗುತ್ತಿದಂತೆ ಗೋಕಾಕ ವಲಯ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಗೋಕಾಕ ತಾಲೂಕಿನ ಹಳ್ಳಿಗಳಿಗೆ ಹೋಗುವ ಮುಖ್ಯ ರಸ್ತೆಗಳ ಎರಡೂ ಬದಿಗೆ ಹಾಗೂ ಶಾಲಾ ಕಾಲೇಜುಗಳ ಆವರಣಗಳಲ್ಲಿ ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ.
ಗೋಕಾಕ ತಾಲೂಕಿನ ಮಮದಾಪುರ ಕ್ರಾಸ್-ಹೂಲಿಕಟ್ಟಿ, ಮೆಳವಂಕಿ-ಬಿಲಕುಂದಿ ದಂಡಿನ ಮಾರ್ಗ ಹಾಗೂ ಕಳ್ಳಿಗುದ್ದಿ, ವೆಂಕಟಾಪುರ, ಗೋಸಬಾಳ ಸೇರಿದಂತೆ ಹಲವು ಹಳ್ಳಿಗಳ ಮುಖ್ಯ ರಸ್ತೆಗಳ ಎರಡೂ ಬದಿಗೆ ಪ್ರಸಕ್ತ ವರ್ಷ ಗೋಕಾಕ ಸಾಮಾಜಿಕ ಅರಣ್ಯ ವಲಯ ಸಸಿಗಳೆನ್ನಟ್ಟು ಪರಿಸರ ಬೆಳೆಸುವ ಮತ್ತು ಪ್ರಯಾಣಿಕರಿಗೆ ರಸ್ತೆಯ ಪಕ್ಕ ಬೇಸಿಗೆ ದಿನಗಳಲ್ಲಿ ನೆರಳು ನೀಡಲು ಮುಂದಾಗಿದೆ. ಈಗ 15 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವುದರಿಂದ ಪರಿಸರ ಪ್ರೇಮಿಗಳಿಗೆ ಸಂತಸ ತಂದಿದೆ.
ಗೋಕಾಕ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದ ಹೂಲಿಕಟ್ಟಿ ಮತ್ತು ಶಿಂಗಾಳಾಪುರ ಸಸಿ ಪಾಲನಾ ಕೇಂದ್ರದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಸಸಿಗಳನ್ನು ಪೋಷಣೆ ಮಾಡಿ ಬೆಳಸಲಾಗಿದೆ. ಅದರಲ್ಲೂ ಒಂದು ಲಕ್ಷದಷ್ಟು ರೇಷ್ಮೆ ಸಸಿಗಳನ್ನು ಬೆಳಸಲಾಗಿದೆ. ರೇಷ್ಮೆ ಸೇರಿದಂತೆ ರಕ್ತ ಚಂದನ, ಸಾಗವಾಣಿ, ಶ್ರೀಗಂಧ, ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗಿರೀಶ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಗೋಕಾಕ ತಾಲೂಕಿನ ಹಲವು ಮುಖ್ಯ ರಸ್ತೆಗಳ ಎರಡೂ ಬದಿಗೆ, ಅರಣ್ಯ ಪ್ರದೇಶದಲ್ಲಿ ಇನ್ನೂ 15 ಸಾವಿರಕ್ಕೂ ಹೆಚ್ಚು ಸಸಿಗಳನ್ನೆಡಲು ಪ್ರಯತ್ನಿಸಲಾಗುವುದು
.• ಗಿರೀಶ ಸಂಕರಿ, ಗೋಕಾಕ ಅರಣ್ಯ ವಲಯ ಅರಣ್ಯಾಧಿಕಾರಿ.
•ಅಡಿವೇಶ ಮುಧೋಳ