Advertisement

ಸ್ವಂತ ಖರ್ಚಿನಲ್ಲಿಯೇ ಮನೆ-ಮನೆಗೆ ತೆರಳಿ ಗಿಡ ನೆಡುವ ಕಾಯಕ!

03:22 PM Jul 04, 2018 | Team Udayavani |

ಮಹಾನಗರ : ವಾರಾಂತ್ಯ ಎಂದರೆ ಮಾಲ್‌, ಸಿನೆಮಾ, ಪ್ರವಾಸ ಎಂದು ಸಮಯ ಕಳೆಯುವ ಯುವ ಜನರ ನಡುವೆ ಈ ತಂಡ ವಿಭಿನ್ನವಾಗಿ ಗುರುತಿಸಿಕೊಂಡಿದೆ. ವಾರ ಪೂರ್ತಿ ಕೈ ತುಂಬ ಸಂಬಳ ದೊರೆಯುವ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ವಾರಾಂತ್ಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಸೈ ಅನಿಸಿಕೊಂಡಿದ್ದಾರೆ.

Advertisement

ಪರಿಸರದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಬ್ರಿಗೇಡ್‌ ವತಿಯಿಂದ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಗಿಡನೆಡುವ ವಿನೂತನ ಕಾರ್ಯಕ್ರಮ ‘ಮನೆ ಮನೆಗೆ ಪೃಥ್ವಿ ಯೋಗ’ ಕಾರ್ಯಕ್ರಮ ಕಳೆದ ವಾರದಿಂದ ಆರಂಭಗೊಂಡಿದೆ. ರಸ್ತೆ ಬದಿಗಳಲ್ಲಿ ಗಿಡ ನೆಟ್ಟರೆ ರಸ್ತೆ ವಿಸ್ತರಣೆ ಅಥವಾ ಇನ್ಯಾವುದೇ ಕಾಮಗಾರಿ ವೇಳೆ ನಾಶವಾಗುವ ಸಾಧ್ಯತೆ ಇರುವುದರಿಂದ ನಗರದ ಮನೆ ಮನೆಗಳಿಗೆ ತೆರಳಿ ಗಿಡ ನೆಟ್ಟು ಅದರ ಆವಶ್ಯಕತೆ, ಪೋಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು 15 ಜನ ಯುವಕರ ತಂಡವೊಂದು ಮಾಡುತ್ತಿದೆ. ಈ ಕಾರ್ಯಕ್ರಮದ ಮೂಲಕ ಈಗಾಗಲೇ 500 ಮನೆಗಳಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಸ್ವಂತ ಖರ್ಚಿನಲ್ಲಿ ಗಿಡ ಖರೀದಿ
ಸ್ವತ್ಛ ರಾಜಮಾರ್ಗ, ನೇತ್ರಾವದಿ, ನಂದಿನಿ, ಕಾವೇರಿ ನದಿಗಳ ಸ್ವತ್ಛತೆ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಯುವಕರ ತಂಡ ತಮ್ಮ ಸ್ನೇಹಿತರ ಬಳಗದಿಂದ ಹಣ ಸಂಗ್ರಹಿಸಿ, ಅರಣ್ಯ ಇಲಾಖೆಯಿಂದ ಗಿಡಗಳನ್ನುಖರೀದಿಸಲಾಗುತ್ತದೆ. ಬಳಿಕ ವಾರಾಂತ್ಯದಲ್ಲಿ ಮನೆಗಳಿಗೆ ಭೇಟಿ ನೀಡಿ ಗಿಡ ನೆಟ್ಟು ಪೋಷಣೆಯ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಅದರೊಂದಿಗೆ ಪರಿಸರ ಸಂರಕ್ಷಣಗೆಯ ಬಗ್ಗೆ ಜಾಗೃತಿ ಮತ್ತು ಕರಪತ್ರ ವಿತರಿಸುವರು. ಈ ತಂಡದ ಯುವಕರು ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ವಾರಾಂತ್ಯದಲ್ಲಿ ಈ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

15,000 ವರೆಗೆ ದೇವರ ಹಳೆ ಫೋಟೋಗಳ ಸಂಗ್ರಹ
ಯುವ ಬ್ರಿಗೇಡ್‌ ವತಿಯಿಂದ ಕಣ ಕಣದಲ್ಲೂ ಶಿವ ಎಂಬ ಹೆಸರಿನಲ್ಲಿ ಕಟ್ಟೆಗಳಲ್ಲಿ ಇಟ್ಟ ದೇವರ ಹಳೆ ಫೋಟೋಗಳನ್ನು ಸಂಗ್ರಹಿಸುವ ಕೆಲಸವಾಗುತ್ತಿದೆ.

ಜಿಲ್ಲೆಯಾದ್ಯಂತ ಈವರೆಗೆ ಸುಮಾರು 15,000 ದೇವರ ಹಳೆ ಫೋಟೋಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಫೋಟೊಗಳನ್ನು ತಂದು ಗ್ಲಾಸ್‌ ಬೇರೆ, ಫೋಟೊ ಬೇರೆಯಾಗಿ ವಿಂಗಡಿಸಲಾಗುತ್ತದೆ ಬಳಿಕ ಗ್ಲಾಸ್‌ಗಳನ್ನು ಮನೆಯ ಕಾಂಪೌಂಡ್‌ಗಳಿಗೆ ಇಡಲು ಇತರ ಉಪಯೋಗಗಳಿಗೆ ಬಳಸಿದರೆ ದೇವರ ಹಳೆ ಫೋಟೊಗಳನ್ನು ಗುಂಡಿ ತೆಗೆದು ಹೂಳಲಾಗುತ್ತದೆ. ಅದೇ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸವನ್ನು ಯುವ ಬ್ರಿಗೇಡ್‌ ಮಾಡುತ್ತಿದೆ.

Advertisement

ಗಿಡ ನೆಟ್ಟು ಪೋಷಿಸುವುದು ಪ್ರತಿಯೊಬ್ಬರ ಹೊಣೆ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಬಿಗ್ರೇಡ್‌ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಮನೆ ಮನೆಗೆ ತೆರಳಿ ಗಿಡನೆಟ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಗಿಡ ನೆಟ್ಟು ಕೆಲವು ತಿಂಗಳ ಬಳಿಕ ಆ ಮನೆಗೆ ತೆರಳಿ ಅದರ ಪೋಷಣೆಯನ್ನು ಗಮನಿಸಲಾಗುತ್ತದೆ.
 -ತಿಲಕ್‌ ಶಿಶಿಲ
ಯುವ ಬಿಗ್ರೇಡ್‌ ಜಿಲ್ಲಾ ಸಂಚಾಲಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next