Advertisement

ಅಂಗನವಾಡಿ ಕೇಂದ್ರಗಳ ಬಳಿ ಸಸಿಗಳ ನಾಟಿ

09:20 AM Jul 26, 2019 | Team Udayavani |

ಕೋಲಾರ: ಬರಪೀಡಿತ ಜಿಲ್ಲೆ ಕೋಲಾರದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಬೇಕೆಂಬ ಉದ್ದೇಶದಿಂದ ಜಲಶಕ್ತಿ ಅಭಿಯಾನ ಹಮ್ಮಿಕೊಂಡಿದೆ. ಈ ಯೋಜನೆಯಡಿ ಎಲ್ಲಾ ಅಂಗವಾಡಿ ಕೇಂದ್ರಗಳ ಬಳಿ ಸಸಿ ನೆಡಲಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಂ.ಜಿ.ಪಾಲಿ ತಿಳಿಸಿದರು.

Advertisement

ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯ ಪ್ರತಿಯೊಂದು ಅಂಗನವಾಡಿ ಕೇಂದ್ರಗಳ ಬಳಿ ಜಲಶಕ್ತಿ ಯೋಜನೆಯಡಿ ಸಸಿ ನೆಡಬೇಕೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾರ್ಗದರ್ಶನ ನೀಡಿದ್ದರು. ಅದರಂತೆ ಇಲಾಖೆಯಿಂದ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಅದರಂತೆ ಸಸಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

986 ಕೇಂದ್ರಗಳಿಗೆ ಸ್ವಂತ ಕಟ್ಟಡ: ಜಿಲ್ಲೆಯಲ್ಲಿ ಒಟ್ಟು 2061 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 986 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆ. ಇನ್ನೂ ಕೆಲವು ಸರ್ಕಾರದ ಇತರೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಕೇಂದ್ರಗಳ ಬಳಿ ಖಾಲಿ ಇರುವ ಜಾಗದಲ್ಲಿ ಸಸಿಗಳನ್ನು ನೆಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪರಿಸರ ಸ್ನೇಹಿ ಗಿಡ: ಕೆಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದೆ. ಈ ಸ್ಥಳಗಳಲ್ಲಿಯೂ ಸಸಿಗಳನ್ನು ನೆಡಲು ಕ್ರಮ ವಹಿಸಲಾಗಿದೆ. ಅಂಗವಾಡಿ ಮಕ್ಕಳು, ಅವರ ಪೋಷಕರು, ಗ್ರಾಪಂ ಸದಸ್ಯರು, ಸ್ತ್ರೀಶಕ್ತಿ ಸಂಘದವರು ಹಾಗೂ ಗ್ರಾಮದ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಪರಿಸರ ಸ್ನೇಹಿ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಉತ್ತಮ ಪರಿಸರ ನಿರ್ಮಾಣ ಮಾಡುವುದಲ್ಲದೆ ಗ್ರಾಮಸ್ಥರಿಗೂ ಇದರ ಉದ್ದೇಶ ತಿಳಿಯಪಡಿಸಲಾಗುತ್ತಿದೆ ಎಂದು ಹೇಳಿದರು.

ಸಸಿ ನೆಡುವ ಕಾರ್ಯ: ಈಗಾಗಲೇ ಕೋಲಾರದ ಬಾರಂಡಳ್ಳಿ, ಬೇತಮಂಗಲ, ಶ್ರೀನಿವಾಸಸಂದ್ರ, ಮುಳಬಾಗಿಲಿನ ಚಿಕ್ಕಪದ್ಮಘಟ್ಟ, ಕನ್ನಸಂದ್ರ, ಎನ್‌.ವಡ್ಡಹಳ್ಳಿ, ಕೋಗಿಲೇರಿ, ಇರಗಮುತ್ತನಹಳ್ಳಿ, ದೊಡ್ಡಬೇವಹಳ್ಳಿ, ಶಗತ್ತೂರು, ರಮೇಶನಗರ, ಮಾಲೂರಿನ ಕಲ್ಕೆರೆ, ದೊಮ್ಮಲೂರು, ಬಂಗಾರಪೇಟೆ-ಕೆಜಿಎಫ್‌ನ ಗಣೇಶಪುರಂ ಸೇರಿ ಸಾಕಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಉಳಿದ ಅಂಗನವಾಡಿ ಕೇಂದ್ರಗಳಲ್ಲಿಯೂ ಈ ಸಸಿ ನೆಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಉತ್ತಮ ಪರಿಸರ: ಜಲ ಶಕ್ತಿ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಯ ಬಗ್ಗೆ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಉತ್ತಮ ಪರಿಸರ ದೊರೆಯಬೇಕಾದರೆ ಹಾಗೂ ಮುಂದಿನ ಪೀಳಿಗೆಗೆ ಸೂಕ್ತ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ನೀರನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಇದಕ್ಕಾಗಿ ಮರಗಳನ್ನು ನೆಟ್ಟು ಉತ್ತಮ ಮಳೆಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಮಳೆ ಕೊಯ್ಲು ಅಳವಡಿಸಿ: ಸಸಿ ನೆಟ್ಟು ಕೋಲಾರವನ್ನು ಹಸಿರನ್ನಾಗಿಸಿದ್ದೇ ಆದರೆ, ಉತ್ತಮ ಮಳೆಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಈ ನೀರನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಬೇಕು. ಜಲಪಾತ್ರೆಗಳನ್ನು ನಿರ್ಮಿಸಿ ನೀರು ಇಂಗುವಂತೆ ಮಾಡಬೇಕು. ಇದರಿಂದ ಅಂತರ್ಜಲಮಟ್ಟವೂ ಸಹ ಅಭಿವೃದ್ಧಿಯಾಗಲಿದೆ. ಅಷ್ಟೇ ಅಲ್ಲದೆ, ಮನೆಯ ಚಾವಣಿಗಳ ಮೇಲೆ ಬೀಳುವ ನೀರನ್ನು ಸಂಗ್ರಹಿಸಲು ಮಳೆ ನೀರಿನ ಕೊಯ್ಲನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಪರಿಸರವನ್ನು ಸಂರಕ್ಷಿಸುವ ಕೆಲಸ ಕೇವಲ ಒಬ್ಬರಿಂದ ಇಬ್ಬರಿಂದ ಸಾಧ್ಯವಾಗುವುದಲ್ಲ. ಇದನ್ನು ಬಲವಂತದಿಂದ ಮಾಡಿಸಲೂ ಆಗುವುದಿಲ್ಲ. ಮುಂದಿನ ಭವಿಷ್ಯದ ಒಳಿತಿಗಾಗಿ ಪ್ರತಿಯೊಬ್ಬರೂ ಸ್ವ ಪ್ರೇರಣೆಯಿಂದ ಮಾಡಲೇಬೇಕಾದ ಜವಾಬ್ದಾರಿಯಾಗಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next