Advertisement

ಬೆಳಂದೂರಿನ 10 ಸೆಂಟ್ಸ್‌ ಜಾಗದಲ್ಲಿ ತರಹೇವಾರಿ ಕೃಷಿ

10:14 AM Jan 09, 2019 | |

ಬೆಳಂದೂರು : ಇಲ್ಲೊಬ್ಬರು ಕೇವಲ 10 ಸೆಂಟ್ಸ್‌ ಜಾಗದಲ್ಲಿ ತರಾವರಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈಗ ಹಲವು ಎಕ್ರೆ ಜಾಗವಿದ್ದರೂ ಹಾಗೆಯೇ ಹಡೀಲು ಬಿಡುವವರು ಇರುವ ಸಂದರ್ಭದಲ್ಲಿ ಕುದ್ಮಾರಿನ ವೆಂಕಪ್ಪ ಪೂಜಾರಿ ಅವರ ಕೃಷಿಯ ಉತ್ಸಾಹ ಮಾದರಿಯಾಗಿ ಕಾಣುತ್ತದೆ.

Advertisement

ವೆಂಕಪ್ಪ ಪೂಜಾರಿ ಅವರು ತಮ್ಮ 10 ಸೆಂಟ್ಸ್‌ ಜಾಗದಲ್ಲಿ ಹಲವು ಬಗೆಯ ಕೃಷಿ ಮಾಡಿದ್ದಾರೆ. ಜಾಂಗಿ, ಚಂದ್ರ ಬಾಳೆ, ಜಿ9, ಕ್ಯಾವೆಂಡೀಸ್‌, ಮೈಸೂರು, ಕದಳಿ, ನೇಂದ್ರ ಬಾಳೆಗಿಡಗಳು ಒಟ್ಟು 50, ತೆಂಗು 5, ತೈವಾನ್‌ ಪಪ್ಪಾಯಿ 5, ನುಗ್ಗೆ 10 ಗಿಡಗಳಲ್ಲದೆ ಬನಾರಸ್‌, ಸೇಲಂ ಹಾಗೂ ಊರಿನ ತಳಿಯ ವೀಳ್ಯದೆಲೆ ಬೆಳೆಸಿದ್ದಾರೆ.

ತರಹೇವಾರಿ ತರಕಾರಿ
ಸೋರೆಕಾಯಿ, ಹೀರೆ ಕಾಯಿ, ಬದನೆ, ತೊಂಡೆ, ಬೆಂಡೆ ಕಾಯಿ, ಬಸಳೆ, ಅಲ ಸಂಡೆ, ಮೆಣಸು ಹೀಗೆ ತರಹೇವಾರಿ ತರಕಾರಿಗಳ ಕೃಷಿ ಮಾಡಿದ್ದಾರೆ. ಹಳೆಯ ಗೋಣಿ ಚೀಲಗಳನ್ನು ಬಳಸಿಕೊಂಡು ಅವುಗಳಲ್ಲಿ ತರಕಾರಿ ಬೆಳೆಸಿದ್ದಾರೆ. ಮನೆಯ ಗೋಡೆಗೆ ವೀಳ್ಯದೆಲೆಯ ಬಳ್ಳಿಗಳನ್ನು ಹರಿಯಬಿಟ್ಟಿದ್ದಾರೆ. ಚಿಕ್ಕು, ಸೀತಾಫಲ ಗಿಡಗಳೊಂದಿಗೆ ಮಲ್ಲಿಕಾ ತಳಿಯ ಮಾವಿನ ಮರವೂ ಇಲ್ಲಿದೆ.

ನಾಟಿಕೋಳಿ, ರಿಕ್ಷಾ
ಬಹು ವಿಧದ ಕೃಷಿಯ ಜತೆಗೆ ನಾಟಿಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ನಾಟಿ ಕೋಳಿಗಳಿಗೆ ಹಬ್ಬ ಹರಿದಿನಗಳಲ್ಲೂ ಹೆಚ್ಚು ಹೆಚ್ಚು ಬೇಡಿಕೆ ಇದೆ. ಸ್ವಂತ ರಿಕ್ಷಾ ಹೊಂದಿದ್ದು, ರಿಕ್ಷಾ ಚಾಲಕನಾಗಿ, ಸೈಕಲ್‌ ರಿಪೇರಿ, ಸಾರಣೆ ಕೆಲಸ, ಬಾವಿ ರಚನೆ ಹಾಗೂ ಬಾವಿಗೆ ರಿಂಗ್‌ ಅಳವಡಿಕೆ, ಎಲೆಕ್ಟ್ರಿಶಿಯನ್‌ ಆಗಿ ಹಾಗೂ ಸಂಜೆ ಹೊತ್ತಲ್ಲಿ ಸವಣೂರಿನಲ್ಲಿ ಫಾಸ್ಟ್‌ಫುಡ್‌ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ತನ್ನ ಫಾಸ್ಟ್‌ಫುಡ್‌ ಅಂಗಡಿಯ ಆವರಣದಲ್ಲೂ ತರಕಾರಿ ಕೃಷಿ ಮಾಡಿದ್ದಾರೆ.

ಹವ್ಯಾಸಿ ಕಲಾವಿದ
ವೆಂಕಪ್ಪ ಪೂಜಾರಿ ಅವರು ಹವ್ಯಾಸಿ ಕಲಾವಿದರೂ ಆ ದ್ದಾರೆ. ಜನಪದ, ಸಿನಿಮಾ ಹಾಡುಗಳಿಗೆ ನೃತ್ಯ, ಅತಿಥಿ ಕಲಾವಿದನಾಗಿ ಯಕ್ಷಗಾನ ಹಾಗೂ ನಾಟಕಗಳಲ್ಲಿ ಹಾಸ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರ ಎಲ್ಲ ಕೆಲಸ- ಕಾರ್ಯಗಳಿಗೆ ಪತ್ನಿ ಸುಜಾತಾ, ಪುತ್ರ ಹರ್ಷಿತ್‌ ಸಾಥ್‌ ನೀಡುತ್ತಿದ್ದಾರೆ.

Advertisement

ಜೇನು ಕೃಷಿಕ
ಕಡಿಮೆ ಜಾಗದಲ್ಲಿ ಹೆಚ್ಚು ಕೃಷಿ ಮಾಡುತ್ತಿರುವ ವೆಂಕಪ್ಪ ಪೂಜಾರಿ ಅವರು ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ. ತಮ್ಮ ಮನೆಯ ಸುತ್ತ ಸುಮಾರು 20 ಜೇನುಪೆಟ್ಟಿಗೆ ಇಟ್ಟು ಜೇನು ಸಾಕಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇತರರ ಜಾಗದಲ್ಲೂ ಅಂದಾಜು 50 ಪೆಟ್ಟಿಗೆ ಇರಿಸಿ, ಜೇನುಕೃಷಿ ಮಾಡುತ್ತಿದ್ದಾರೆ. ಹೆಚ್ಚು ಔಷಧೀಯ ಗುಣವುಳ್ಳ ಮೊಜೆಂಟಿ ಜೇನನ್ನೂ ಸಾಕಿದ್ದಾರೆ. ಜೇನು ಕೃಷಿಗೆ ಪೂರಕವಾಗಿ ಕಾಡುಜಾತಿಯ ಹೂವಿನ ಗಿಡಗಳನ್ನೂ ಬೆಳೆಸಿದ್ದಾರೆ. ಜೇನು ಕೃಷಿಯ ಜತೆಗೆ ಆಸಕ್ತರಿಗೆ ಜೇನು ಕೃಷಿ ಮಾಹಿತಿ, ತರಬೇತಿ ನೀಡುತ್ತಾರೆ. ಜೇನಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಯಷ್ಟು ಜೇನು ಉತ್ಪಾದನೆ ಮಾಡಲಾಗುತ್ತಿಲ್ಲ. ಪ್ರತೀ ವರ್ಷ ಪೆಟ್ಟಿಗೆಯಲ್ಲಿ ಮಾಡಿದ ಜೇನಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ ಎಂದು ಹೇಳುತ್ತಾರೆ ವೆಂಕಪ್ಪ ಪೂಜಾರಿ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next