ಬಾಳೆಹೊನ್ನೂರು: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಿಂದ ಜನ ದೂರ ಸರಿಯುತ್ತಿರುವ ಇಂದಿನ ದಿನಗಳಲ್ಲಿ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾಟುಕುಡಿಗೆ ಬಸವನಕೋಗು ಗ್ರಾಮದಲ್ಲಿ ಇಂದಿಗೂ ಮುಯ್ನಾಳು ಪದ್ಧತಿಯಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಬಿ. ಕಣಬೂರು ಗ್ರಾಪಂ ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್ ತಿಳಿಸಿದರು.
ಬಸವನಕೋಗು ಭತ್ತ ನಾಟಿ ಮಾಡುತ್ತಿದ್ದ ಗದ್ದೆಗೆ ಬೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಕೃಷಿ ಕಾಯಕಕ್ಕೆ ಕೂಲಿ ಕಾರ್ಮಿಕರ ಕೊರತೆ ಉಂಟಾಗುವುದಿಲ್ಲ. ಸಣ್ಣ ಸಣ್ಣ ರೈತ ಕುಟುಂಬಗಳು ಪರಸ್ಪರ ಸಹಕಾರದಿಂದ ಭತ್ತದ ಸಸಿ ನಾಟಿ ಮಾಡಲು ದಿನ ನಿಗದಿ ಮಾಡಿ ಸರತಿಯಂತೆ ನಾಟಿ ಮಾಡಲಾಗುತ್ತದೆ. ಪ್ರತಿ ಮನೆಯಿಂದ ಒಂದೆರಡು ಜನರು ನಾಟಿ ಮಾಡಲು ಬರುತ್ತಾರೆ.
ಮಲೆನಾಡು ಗಿಡ್ಡ ತಳಿಗಳನ್ನು ಉಳುಮೆ ಮಾಡಲು ಬಳಸಿಕೊಳ್ಳಲಾಗುತ್ತದೆ. 5ರಿಂದ 6 ಜೊತೆ ಎತ್ತುಗಳನ್ನು ಬಳಸಿ ಉಳುಮೆ ಮಾಡಲಾಗುತ್ತದೆ. ಟ್ರಾÂಕ್ಟರ್, ಟಿಲ್ಲರ್ ಅವಶ್ಯಕತೆಯಿಲ್ಲ. ಹಿಂದಿನಿಂದಲೂ ಮುಯ್ನಾಳು ಪದ್ಧತಿಯಲ್ಲೇ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದು ಈಗಲೂ ಅದೇ ಪದ್ಧತಿಯಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಪರಸ್ಪರ ಸಹಕಾರದಿಂದ ಕೆಲಸ ಮಾಡುವುದರಿಂದ ದಿನಗೂಲಿ ಪ್ರಶ್ನೆಯೇ ಬರುವುದಿಲ್ಲ. ವಾಟುಕುಡಿಗೆ, ಮಠದ ಕಾಲೋನಿ ಹಾಗೂ ಕಂಚಿಕುಡಿಗೆ ಭಾಗದಲ್ಲಿ ಇಂದಿಗೂ ಈ ಕೃಷಿ ಚಟುವಟಿಕೆಯಲ್ಲಿ ಮುಯ್ನಾಳು ಪದ್ಧತಿ ಇದ್ದು ಗ್ರಾಮಕ್ಕೆ ಮಾದರಿಯಾಗಿದೆ. ಮಹಿಳೆಯರು ಜಾನಪದ ಹಾಡುಗಳನ್ನು ಹಾಡುತ್ತಾ ನಾಡಿ ಮಾಡುವುದು ವಿಶೇಷ ಹಾಗೂ ಗದ್ದೆ ಬದುವಿನಲ್ಲಿ ಮಧ್ಯಾಹ್ನದ ಉಪಾಹಾರ ಸೇವಿಸಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಸಾರುವಂತಿದೆ ಎಂದರು.
ಕೃಷಿಕ ಯಜ್ಞಪುರುಷ ಭಟ್ ಮಾತನಾಡಿ, ಸಹಬಾಳ್ವೆಯ ಕಾಯಕ ಶ್ಲಾಘನೀಯ. ಮಲೆನಾಡು ಪ್ರದೇಶದಲ್ಲಿ ಶೇ.70ರಷ್ಟು ಜಮೀನಿನಲ್ಲಿ ಭತ್ತ ಬೆಳೆಯುವುದನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಕ್ಕಲುತನ ಮರೆಯಾಗಿದ್ದು, ಭತ್ತದ ಕಣಜವಾಗಿದ್ದ ಬಿ. ಕಣಬೂರು ಗ್ರಾಮ ವಾಣಿಜ್ಯ ಬೆಳೆಗಳ ಕೇಂದ್ರವಾಗಿದೆ. ಗ್ರಾಪಂ ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್ ಅವರ ಇಂತಹ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದರು