Advertisement

ಬರಡು ಭೂಮಿಯಲ್ಲಿ ಕೋಟಿ ನಾಟಿ

12:00 PM Apr 26, 2019 | pallavi |

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದ್ದು, ಪರಿಸರ ಮಾಲಿನ್ಯ ಹಾಗೂ ಬಿಸಿಲ ಧಗೆಯಿಂದಾಗಿ ಜೀವ ಸಂಕುಲಗಳ ಬದುಕಿಗೆ ಕುತ್ತು ಬಂದಿದೆ. ಪರಿಸರಕ್ಕೆ ಆಪತ್ತು ಬಂದ ಹಿನ್ನೆಲೆಯಲ್ಲಿ ಕಾಡಿನ ದೃಷ್ಟಿ ಚುಕ್ಕೆಗಳಾದ ಜಿಂಕೆ, ಆನೆ, ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಕೆಲವು ಕಡೆ ನೀರಿಲ್ಲದೆ ಪ್ರಾಣಿ ಸಂಕುಲ ಪ್ರಾಣ ತೆತ್ತಿವೆ.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್‌ 3190, ‘ಕೋಟಿ ನಾಟಿ’ ಹೆಸರಿನಲ್ಲಿ ಬರಡು ಭೂಮಿಯಲ್ಲಿ ಸಸಿಗಳನ್ನು ನೆಡುವ ಯೋಜನೆ ರೂಪಿಸಿದೆ. 5 ವರ್ಷಗಳಲ್ಲಿ ಸುಮಾರು 1 ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ಇದಾಗಿದೆ.

ಇದಕ್ಕಾಗಿಯೇ ರಾಜ್ಯದಲ್ಲಿರುವ ಬರಡು ಭೂಮಿ ಬಗ್ಗೆ ವೈಜ್ಞಾನಿಕ ಸರ್ವೇ ಮಾಡಲಾಗಿದ್ದು, ಶೀಘ್ರದಲ್ಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇದಾದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ವಿಸ್ತರಿಸುವ ಆಲೋಚನೆ ಹೊಂದಲಾಗಿದೆ.

ಬತ್ತಿ ಹೋಗಿವೆ ಜೀವ ಸೆಲೆಗಳು: ಬಿಸಿಲ ಧಗೆಯಿಂದಾಗಿ ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಏಳು ನದಿಗಳ ಮೂಲ ಸೆಲೆ ಬತ್ತಿ ಹೋಗಿದ್ದು, ಆ ಭಾಗದಲ್ಲಿ ವಾಸವಾಗಿರುವ ಜೀವ ಸಂಕುಲಗಳು ಆಪತ್ತಿನಲ್ಲಿವೆ. ಒಂದು ಕಡೆ ಬಿಸಿಲ ಝಳ, ಮತ್ತೂಂದು ಕಡೆ ನೀರಿಲ್ಲದೆ ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕಿವೆ. ಈ ಎಲ್ಲಾ ಘಟನೆ ಕೇಂದ್ರಿಕರಿಸಿಯೇ ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್‌ 3190, ‘ಕೋಟಿ ನಾಟಿ’ ಪರಿಕಲ್ಪನೆಗೆ ಜೀವ ನೀಡಿದೆ.

ಮಣ್ಣಿನ ವೈಜ್ಞಾನಿಕ ಪರೀಕ್ಷೆ: ನಿವೃತ್ತ ಹಿರಿಯ ಐಎಎಸ್‌ ಅಧಿಕಾರಿ ಅಮರ್‌ ನಾರಾಯಣ್‌ ಅವರ ಕನಸಿನ ಕೂಸು ಕೋಟಿ ನಾಟಿ ಯೋಜನೆಯಾಗಿದೆ. ಬರಡು ನೆಲದಲ್ಲಿ ಮಳೆ ತರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಆ ಹಿನ್ನೆಲೆಯಲ್ಲಿ ಮಣ್ಣಿನ ವೈಜ್ಞಾನಿಕ ಪರೀಕ್ಷೆ ನಡೆಸಲಾಗಿದ್ದು, ಆ ಮಣ್ಣಿಗೆ ಯಾವ ಜಾತಿ ಸಸಿ ನೆಟ್ಟರೆ ಉತ್ತಮ ಎಂಬ ಬಗ್ಗೆಯೂ ವೈಜ್ಞಾನಿಕ ರೀತಿಯಲ್ಲೇ ಮಾಹಿತಿ ಕಲೆಹಾಕಲಾಗಿದೆ ಎಂದು ರೋಟರಿಯ ಹಿರಿಯ ಅಧಿಕಾರಿ ನಾಗೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

Advertisement

‘ಉದಯವಾಣಿ’ ಜತೆ ಮಾತನಾಡಿದ ಅವರು, ‘ಬೆಂಗಳೂರು ರೋಟರಿ ಕ್ಲಬ್‌ನ ಡಿಸ್ಟ್ರಿಕ್‌ 3190, ಮಂಡ್ಯದಿಂದ ತಿರುಪತಿವರೆಗೂ ಸುಮಾರು 5600 ಸದಸ್ಯರನ್ನು ಹೊಂದಿದೆ. ಈ ಸದಸ್ಯರಿಗೆ ಗಿಡಗಳ ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಬೀಜಗಳನ್ನು ಎರಚಿ ಗಿಡ ಬೆಳೆಸುವ ಆಲೋಚನೆ ಇದೆ. ಸರ್ಕಾರಿ ಭೂಮಿ ಇದ್ದರೆ ಸಂಬಂಧಿಸಿದವರಿಂದ ಅನುಮತಿ ಪಡೆದು ಸಸಿಗಳನ್ನು ನೆಡಲಾಗುವುದು. ಯಾವ ಜಾತಿಯ ಗಿಡಗಳನ್ನು ನೆಡಬೇಕೆಂಬ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ,’ ಎಂದು ಮಾಹಿತಿ ನೀಡಿದರು.

ನಟ ಯಶ್‌ ಬೆಂಬಲ

ಮೇ 4ರಂದು ಬೆಂಗಳೂರಿನಲ್ಲಿ ರೋಟರಿ ಕ್ಲಬ್‌ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಅವರು ‘ಕೋಟಿ ನಾಟಿ’ ಸಸಿ ನೆಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಭೂಮಿ ತಾಯಿ ಋಣ ತೀರಿಸುವ ಇಂತಹ ಯೋಜನೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಚಿತ್ರ ನಟ ಯಶ್‌ ಹೇಳಿದ್ದಾರೆ. ‘ಕೋಟಿ ನಾಟಿ’ ಯೋಜನೆ ಉತ್ತಮ ಪರಿಕಲ್ಪನೆ ಹೊಂದಿರುವ ಯೋಜನೆಯಾಗಿದೆ. ಆದರೆ, ಕಾರ್ಯಕ್ರಮ ಗಿಡ ನೆಡುವುದಕ್ಕಷ್ಟೇ ಸೀಮಿತವಾಗಬಾರದು. ಸಸಿ ನೆಟ್ಟು, ಅವು ಮರವಾಗಿ ಬೆಳೆಯುವವರೆಗೂ ಪೋಷಣೆ ಮಾಡಬೇಕು.
● ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರ ತಜ್ಞ
ದೇವೇಶ ಸೂರಗುಪ್ಪ
Advertisement

Udayavani is now on Telegram. Click here to join our channel and stay updated with the latest news.

Next