ನರಗುಂದ: ನರಗುಂದ-ರೋಣ ತಾಲೂಕುಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದೀಗ ಪರಿಸರ ಸಂರಕ್ಷಣೆಗೂ ತನ್ನ ಪಾತ್ರ ಕಾಯ್ದುಕೊಂಡಿದೆ. ಯೋಜನೆ 13 ಪ್ಲಾಂಟ್‌ಗಳಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಸ್ಯ ಪಾಲನೆ ಮಾಡಲಾಗುತ್ತಿದೆ.
ಕುಡಿಯುವ ನೀರು ಸರಬರಾಜು ಇಲಾಖೆ ಯೋಜನೆಯಡಿ 2 ತಾಲೂಕುಗಳ 128 ಗ್ರಾಮಗಳಿಗೆ ನವಿಲುತೀರ್ಥ ಜಲಾಶಯದಿಂದ ಪೈಪ್‌ಲೈನ್ ಮೂಲಕ ಶುದ್ಧೀಕರಿಸಿದ ನೀರು ಒದಗಿಸುವ ಯೋಜನೆ ಪಂಪ್‌ಹೌಸ್ ತಾಲೂಕಿನ ಚಿಕ್ಕನರಗುಂದ ಬಳಿ ಸ್ಥಾಪಿಸಲಾಗಿದೆ.
428 ಕೋಟಿ ವೆಚ್ಚದಲ್ಲಿ ಜಲಾಶಯದಿಂದ 25 ಕಿಮೀ ಪೈಪ್‌ಲೈನ್‌ನಿಂದ ನೀರು ತಂದು ತಾಲೂಕಿನ 30, ರೋಣ ತಾಲೂಕಿನ 98 ಗ್ರಾಮಗಳಿಗೆ ಶುದ್ಧ ನೀರು ಪೂರೈಸಲು ಒಟ್ಟು 600 ಕಿಮೀ ಪೈಪ್‌ಲೈನ್ ಜೋಡಣೆ ಮಾಡಲಾಗಿದೆ. 1 ವರ್ಷದಿಂದ ಯೋಜನೆ ಕಾರ್ಯಾರಂಭ ಮಾಡಿದೆ. ಕುಡಿಯುವ ನೀರು ಸರಬರಾಜು ಇಲಾಖೆ ನಿರ್ದೇಶನ ಮೇರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡ ಇಸ್ರೇಲ್ ಮೂಲದ ತಹಾಲ್ ಗ್ರೂಪ್ ಸಸ್ಯಪಾಲನೆ ಕೈಗೊಂಡಿದೆ.
ನವಿಲುತೀರ್ಥ ಜಲಾಶಯ, ಪಂಪ್‌ಹೌಸ್, ತಾಲೂಕಿನ ಚಿಕ್ಕನರಗುಂದ, ಭೈರನಹಟ್ಟಿ, ರೋಣ ತಾಲೂಕಿನ ಮಲ್ಲಾಪುರ, ಅಬ್ಬಿಗೇರಿ, ಕೊತಬಾಳ, ರೋಣ ಪಟ್ಟಣ, ಬೆಳಗೋಡ, ರಾಜೂರ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ ಸೇರಿ 13 ಪ್ಲಾಂಟ್‌ಗಳಲ್ಲಿ 25 ಲಕ್ಷ ವೆಚ್ಚದಲ್ಲಿ 125ಕ್ಕೂ ಹೆಚ್ಚು ತಳಿಗಳ ಸಸ್ಯಪಾಲನೆ ಮಾಡಲಾಗಿದೆ.
ಧಾರವಾಡ ಕೃವಿವಿಯಿಂದ ಹಣ್ಣಿನ ಸಸಿಗಳು, ಹೈದರಾಬಾದ್ ರಾಜಮಂಡ್ರಿಯಿಂದ ಲಾನ್(ಹುಲ್ಲಿನ ಹಾಸು), ನರೇಂದ್ರದ ನಡಕಟ್ಟಿ ಫಾರ್ಮ್ನಿಂದ ಹೂವಿನ ಸಸಿಗಳನ್ನು ತರಲಾಗಿದೆ. 13 ಪ್ಲಾಂಟ್‌ಗಳಲ್ಲಿ 200 ಚಿಕ್ಕು, 100 ಸೀತಾಫಲ, 100 ಪೇರಲ, 100 ಪಪ್ಪಾಯಿ ಸಸಿ ನೆಡಲಾಗಿದೆ. ಎಲ್ಲ ಸಸಿಗಳಿಗೆ ಹನಿ ನೀರಾವರಿ ಮತ್ತು ಕಾರಂಜಿಯಿಂದ ನೀರು ಪೂರೈಸಲಾಗುತ್ತಿದೆ. ಡ್ರಾಗನ್ ಫ್ರುಟ್ಸ್, ಬಾದಾಮಿ, ಬೆಳವಲಕಾಯಿ, ನೇರಳೆ, ಲಿಂಬಿ, ನುಗ್ಗಿ, ಬಿದಿರು, ಅಡಿಕೆ, ಮಾವು, ತೆಂಗು, ಬಾಳೆ, ಚೆರ್ರಿ ಹಾಗೂ ಹೂವಿನ ಸಸಿಗಳಾದ ಕನಗಲಿ, ಆಂಥೋರಿಯಂ, ಪಾಮ್, ಅಶ್ವಗಂಧ, ಪೈಕಾಸ್, ದುಬೈ ಪಾಮ್, ಕ್ರೋಟಾನ್ಸ್, ಮಲ್ಲಿಗೆ ಸಸಿಗಳನ್ನು ನೆಡಲಾಗಿದೆ. ಎಇಇ ಎಸ್.ಬಿ. ಪೊಲೀಸ್‌ಪಾಟೀಲ, ಯುವರಾಜ, ಮಂಜುನಾಥ ಅಗಸಿಮನಿ, ತಹಾಲ್ ಗ್ರೂಪ್‌ನ ಯೋಜನಾ ವ್ಯವಸ್ಥಾಪಕ ದೇವರಾಜ ದೇಸಾಯಿ, ಪ್ಲಾಂಟ್ ಅಭಿಯಂತ ಶಂಕರಾನಂದ ಸಂಕಧಾಳ, ಕೆ. ಮಂಜುನಾಥ, ಸಂತೋಷ ಕಮ್ಮಾರ ಇದ್ದರು.