ಇಂಡಿ: ನರೇಗಾ ಯೋಜನೆಯಡಿ ರೈತರು ಬದುಗಳಲ್ಲಿ ಸಸಿ ನೆಟ್ಟು ಸಾಮಾಜಿಕ ಅರಣ್ಯೀಕರಣಕ್ಕೆ ಒತ್ತು ನೀಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಹೇಳಿದರು.
ಬೆನಕನಹಳ್ಳಿ ಮತ್ತು ತೆನ್ನಿಹಳ್ಳಿ ಗ್ರಾಪಂಗೆ ಗುರುವಾರ ಭೇಟಿ ನೀಡಿ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಬರಗಾಲ ಪೀಡಿತವಾಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮಳೆ ನೀರು ಹಿಡಿದಿಟ್ಟು ಇಂಗಿಸಲು 2021-22ರ ನರೇಗಾ ಯೋಜನೆಯ ಅಂದಾಜು ಪತ್ರಿಕೆ ಅನುಸಾರ ಇಂಡಿ ತಾಲೂಕಿನಲ್ಲಿ 2120 ಕಂದಕ ಬದು, 1757 ಕೃಷಿ ಹೊಂಡ, 339 ಬಸಿಗಾಲುವೆ, 346 ಕೆರೆ ಮತ್ತು ಹಳ್ಳದ ಹೂಳೆತ್ತುವುದು, 80 ಮರುಪೂರಣ ಘಟಕಗಳ ನಿರ್ಮಾಣದ ಗುರಿ ಹೊಂದಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಕ್ರಿಯಾಯೋಜನೆಗೂ ಅನುಮೋದನೆ ನೀಡಲಾಗುತ್ತಿದೆ ಎಂದರು.
ಜಿಪಂ ಎಪಿಒ ಅರುಣಕುಮಾರ ದಳವಾಯಿ ಮಾತನಾಡಿ, ಮಳೆಗಾಲ ಆರಂಭವಾಗಿದ್ದು ರೈತರು ಸಸಿ ನೆಟ್ಟು ಹಸಿರೀಕರಣ ಮಾಡಬೇಕು. ಇದರಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು ಎಂದರು. ನಂತರ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎನ್‌ಆರ್‌ಎಲ್‌ಎಂ ಶೆಡ್, ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಪೌಷ್ಟಿಕ ತೋಟ, ಎರೆಹುಳು ತೊಟ್ಟಿ, ಕೃಷಿಹೊಂಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೆಚ್ಚುಗೆ: ತೆನ್ನಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 3 ಎಕರೆ ನಿವೇಶನದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಸುಮಾರು 800 ವಿವಿಧ ಸಸಿ ನೆಟ್ಟು, ಹನಿ ನಿರಾವರಿ ಪದ್ಧತಿ ಅಳವಡಿಸಿ ಪೋಷಿಸಲಾಗುತ್ತಿದ್ದು, ಸಸಿಗಳಿಗೆ ಗೊಬ್ಬರ ಒದಗಿಸಲು ಎರೆ ಹುಳು ತೊಟ್ಟಿಯನ್ನೂ ನಿರ್ಮಿಸಲಾಗಿದೆ. ಇದೊಂದು ಮಾದರಿ ಘಟಕವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗೆ ಭೇಟಿ: ಬೆನಕನಹಳ್ಳಿ ಮತ್ತು ತೆನ್ನಿಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟ ವಿತರಣೆ ಬಗ್ಗೆ ಪರಿಶೀಲಿಸಿದರು. ಬಿಸಿಯೂಟದ ಹಂಚಿಕೆ ಮತ್ತು ಸ್ಟಾಕ್ ರಜಿಸ್ಟರ್ ಸರಿಯಾಗಿ ನಿರ್ವಹಣೆ ಮಾಡುವಂತೆ ಸೂಚಿಸಿದರು. ಈ ವೇಳೆ ಜಿಪಂ ಎಡಿಪಿಸಿ ಪೃಥ್ವಿರಾಜ ಪಾಟೀಲ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ಪಿಡಿಒ ಪಿ.ಎಲ್. ರಾಠೊಡ, ಬಿಎಫ್‌ಟಿ ಶಿವಾನಂದ ವರವಂಟಿ, ಗ್ರಾಪಂ ಅಧ್ಯಕ್ಷ ಕಾಶಿನಾಥ ಹಚಡದ, ಸಿ.ಆರ್. ಮಸಳಿ ಸೇರಿದಂತೆ ಗ್ರಾಪಂ ಸದಸ್ಯರು, ಶಾಲೆ ಮುಖ್ಯ ಗುರುಗಳು ಇದ್ದರು.