Advertisement

ನದಿಪಾತ್ರದಲ್ಲಿ ವಿವಿಧ ಜಾತಿ ಸಸಿ

01:05 PM Mar 28, 2017 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹರಿದು ಬರುವ ತಾಲೂಕಿನ ಜೀವನದಿ ಲಕ್ಷಣತೀರ್ಥದಲ್ಲಿ ನಿರಂತರ ನೀರು ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 80 ಕಿ.ಮೀ ಉದ್ದದ ನದಿಪಾತ್ರದ ಹಳ್ಳಿಗರ ಸಹಕಾರದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಹೇಳಿದರು.

Advertisement

ಹುಣಸೂರು ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಕಲುಷಿತಗೊಂಡಿರುವ ಲಕ್ಷ್ಮಣನದಿಯನ್ನು ಪುನರ್‌ಜೀವನಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ವಿವಿಧ ಸಂಘಸಂಸ್ಥೆಗಳ ಸಭೆಯಲ್ಲಿ ಮಾತನಾಡಿ, ನದಿಪಾತ್ರದಲ್ಲಿ ಮಣ್ಣಿನ ಸವಕಳಿ ತಪ್ಪಿಸುವ ಹಾಗೂ ಗಿಡಗಳನ್ನು ನೆಟ್ಟುಬೆಳೆಸಿ, ಪರಿಸರ ಕಾಪಾಡುವ ಹಾಗೂ ನದಿಯ ಹಿಂದಿನ ಗತ ವೈಭವ ಮರುಕಳಿಸಿ, ಜೀವಂತನದಿಯನ್ನಾಗಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

80 ಕಿ.ಮೀ ಅರಣ್ಯೀಕರಣ: ಪ್ರಾದೇಶಿಕ ಅರಣ್ಯ ಇಲಾಖೆಯ ಡಿಸಿಎಫ್ ನೇತತ್ವದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆರಂಭಿಸಿ ನದಿ ಪಾತ್ರದ ಕೆಆರ್‌ಎಸ್‌ ಹಿನ್ನೀರಿನವರೆಗಿನ 80 ಕಿ.ಮೀ ಉದ್ದಕ್ಕೂ ಅರಣ್ಯೀಕರಣಪಡಿಸಲು ಯೋಜನೆ ಸಿದ್ದವಾಗಿದೆ ಎಂದು ತಿಳಿಸಿದರು.

ಚೆಕ್‌ಡ್ಯಾಂ ನಿರ್ಮಿಸಿ: ಜಲಾನಯನ ಅಭಿವೃದ್ಧಿ ಯೋಜನೆಯಿಂದ ನದಿ ಹಾಗೂ ಕೆರೆಗಳಿಗೆ ನೀರು ಹರಿದು ಬರುವ ಹೊಲಗಳ ಅಲ್ಲಲ್ಲಿ ಚೆಕ್‌ ಡ್ಯಾಂ ನಿರ್ಮಿಸುವುದರಿಂದ ನದಿ ಹಾಗೂ ಕೆರೆಕಟ್ಟೆಗಳಿಗೆ ಮಣ್ಣು ಸೇರುವುದಿಲ್ಲ, ಇದರಿಂದ ಹೂಳು ಸೇರುವುದು ತಪ್ಪಲಿದೆ. ಈ ಬಗ್ಗೆ ಕಾರ್ಯಕ್ರಮ ರೂಪಿಸುವಂತೆ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್‌ರಿಗೆ ಸೂಚಿಸಿದರು.

ಜಾಗೃತಿ ಸಭೆ ಆಯೋಜಿಸಲಾಗುವುದು: ನದಿ ಪಾತ್ರದಲ್ಲಿ ಬರುವ 100 ಹಳ್ಳಿಗಳ  ರೈತರನ್ನು ಬಳಸಿಕೊಂಡು ವಿವಿಧ ಯೋಜನೆಯಡಿ ಗಿಡಬೆಳೆಸುವ ಮೂಲಕ ನದಿ ಸಂರಕ್ಷಿಸುವುದು ಹಾಗೂ ಪರಿಸರ ಹಾನಿ ತಪ್ಪಿಸಬಹುದಾಗಿದೆ. ನದಿಯ ಪಾತ್ರದ ಎಲ್ಲಾ ಗ್ರಾಪಂಗಳಲ್ಲಿ ಸಭೆ ನಡೆಸಿ, ಮೊದಲ ಹಂತವಾಗಿ ನದಿಯನ್ನು ಸ್ವತ್ಛಗೊಳಿಸುವುದು. ನದಿಗೆ ಅನುಪಯುಕ್ತ ಪದಾರ್ಥಸೇರದಂತೆ ನೋಡಿಕೊಳ್ಳುವ ಹಾಗೂ ನದಿಯ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಅತ್ಯವಶ್ಯ ಎಂದರು.

Advertisement

26 ಜಲದಕಣ್ಣುಗಳು ಒತ್ತುವರಿ: ಡೀಡ್‌ ಸಂಸ್ಥೆಯ ಮುಖ್ಯಸ್ಥ ಡಾ.ಎಸ್‌.ಶ್ರೀಕಾಂತ್‌ ಮಾತನಾಡಿ, ಲಕ್ಷಣತೀರ್ಥ ನದಿಗೆ ಈ ಭಾಗದಲ್ಲಿ 26 ಜಲಮೂಲಗಳಿದ್ದು, ಅವು ಗಳೀಗ ಒತ್ತುವರಿ, ಮರಳುಗಾರಿಕೆಧಿಯಿಂದಾಗಿ ನೀರಿನ ಹರಿವು ನಿಂತು ಹೋಗಿದೆ, ಈ ಬಗ್ಗೆ ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ನದಿ ರಕ್ಷಣೆಗೆ ಗಿಡ ನೆಡುವ ಕಾರ್ಯ ಜೂನ್‌ನಲ್ಲೇ ಆರಂಭಿಸುವಂತೆ ಕೋರಿದರು.

99 ಕೋಟಿ ಪ್ರಸ್ತಾವನೆ ನೆನೆಗುದಿಗೆ: ಸೇವ್‌ ಅವರ್‌ ಅರ್ಥ್ಕ್ಲಬ್‌ನ ಅಧ್ಯಕ್ಷ ಸಂಜಯ್‌ ಮಾತನಾಡಿ, ನದಿ ರಕ್ಷಣೆಗಾಗಿ ನಗರದ ತ್ಯಾಜ್ಯ ನೀರು ನದಿಗೆ ಸೇರದಂತೆ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಸಂಬಂಧ 99 ಕೋಟಿ ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಸಂಬಂಧ ಅಗತ್ಯ ಕಾರ್ಯಕ್ರಮ ರೂಪಿಸಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರಿಗೂ ಸಹ ಮನವಿ ಸಲ್ಲಿಸಿರುವ ಬಗ್ಗೆ ಸಭೆಗೆ ತಿಳಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರುಕಷ್ಣಕುಮಾರ್‌, ಸ್ಪೂರ್ತಿ ಸಂಸ್ಥೆಯ ಬಸವರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಬೆಟ್ಟೇಗೌಡ, ತಾಲೂಕು ಕರವೇ ಅಧ್ಯಕ್ಷ ಪುರುಷೋತ್ತಮ್‌, ಡೀಡ್‌ ಸಂಸ್ಥೆಯ ಜಗದೀಶ್‌, ಅರಣ್ಯ ಇಲಾಖೆಯ ವ್ಯವಸ್ಥಾಪಕ ಆಧಿಶೇಷ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next