ಮಹಾನಗರ : ನೇತ್ರಾವತಿ ಮತ್ತು ಪಲ್ಗುಣಿ ನದಿಗಳ ದಂಡೆಗಳಲ್ಲಾಗುವ ಮಣ್ಣಿನ ಸವಕಳಿ ತಡೆಯುವ ನಿಟ್ಟಿನಲ್ಲಿ ಮಂಗಳೂರು ಸಿಟಿ ಮತ್ತು ಗ್ರಾಮಾಂತರ ಭಾಗದ ವ್ಯಾಪ್ತಿಯಲ್ಲಿ ಬಿದಿರು ನೆಡಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಅದರಂತೆ ಸದ್ಯ ಗಿಡಗಳ ನಾಟಿ ಕೆಲಸ ಆರಂಭಗೊಂಡಿದೆ.
ಅರಣ್ಯ ಇಲಾಖೆ ಯಿಂದ ಒಟ್ಟು 25,000 ಬಿದಿರು ಗಿಡ ನೆಡಲು ಯೋಜನೆ ರೂಪಿಸಲಾಗಿದ್ದು, ಸದ್ಯ ಸುಮಾರು 15,000 ಗಿಡ ನಾಟಿ ಮಾಡಲಾಗಿದೆ. ನಗರದ ಮತ್ತು ಗ್ರಾಮಾಂತರ ಭಾಗದ ಫಲ್ಗುಣಿ ನದಿ ದಂಡೆಯಲ್ಲಿ ಬಂಗ್ರಕೂಳೂರು, ಗಂಜಿಮಠ, ಮಳಲಿ, ಗುರುಪುರ ಕುದ್ರು, ಕಾವೂರು ಕುದ್ರು, ಮೂಡುಶೆಡ್ಡೆ ಕುದ್ರು ಮಣೇಲು, ಅಡ್ಯಾರು ಮುಂತಾದ ಕಡೆಗಳಲ್ಲಿ ಗಿಡ ನೆಡುವ ಕಾರ್ಯ ಆರಂಭಗೊಂಡಿದೆ. ಸದ್ಯ ಮಳೆ ಆರಂಭಗೊಂಡಿದ್ದು, ಮಳೆ ಕಡಿಮೆಯಾದ ಬಳಿಕ ಅಡ್ಯಾರ್ ಬಳಿಯ ಕುದ್ರುವಿನಲ್ಲಿ ಸುಮಾರು 10,000 ಬಿದಿರು ನೆಡಲು ಯೋಜನೆ ರೂಪಿಸಲಾಗಿದೆ.
ಕೇಂದ್ರ ಸರಕಾರದ ರಾಷ್ಟ್ರೀಯ ಬಿದಿರು ಮಿಷನ್‌ನಡಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಬಿದಿರು ನೆಟ್ಟು ಪೋಷಿಸುವುದರಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ. ಬಿದಿರಿನಿಂದ ಉದುರಿದ ಎಲೆ ತನ್ನ ಸುತ್ತಲಿನ ಭೂಪ್ರದೇಶದ ತೇವಾಂಶ ಹಿಡಿದಿಟ್ಟುಕೊಳ್ಳಲು ಮಹತ್ವದ ಪಾತ್ರ ವಹಿಸುತ್ತದೆ. ಈ ಎಲೆಗಳಿಗೆ ಪ್ರಬಲ ಸೂರ್ಯ ಕಿರಣ ತಡೆಯುವ ಶಕ್ತಿ ಇರುತ್ತದೆ. ಬಿದಿರಿನ ಕಾಂಡಗಳು ಮಳೆ ನೀರನ್ನು ತನ್ನ ಬೇರುಗಳ ಮೂಲಕ ಭೂಮಿಯ ಒಳಕ್ಕೆ ಕೊಂಡೊಯ್ಯುತ್ತದೆ. ಅಲ್ಲದೆ, ಮಣ್ಣಿನ ಸವಕಳಿ ತಡೆಯುವಲ್ಲಿಯೂ ಇದರ ಬೇರು ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನದಿ ದಂಡೆಯಲ್ಲಿ ಬಿದಿರು ಗಿಡ ನೆಡಲು ಅರಣ್ಯ ಇಲಾಖೆ ಮುಂದಾಗಿದೆ.
25,000 ಬಿದಿರು ಗಿಡ
ಫಲ್ಗುಣಿ ಮತ್ತು ನೇತ್ರಾವತಿ ನದಿಗಳಲ್ಲಿ ಮಣ್ಣಿನ ಕೊರೆತ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಯೋಜನೆಯಂತೆ 25,000 ಬಿದಿರು ಗಿಡ ನೆಡಲು ಯೋಜನೆ ರೂಪಿಸಲಾಗಿದೆ. ಸದ್ಯ ಮೊದಲನೇ ಹಂತದಲ್ಲಿ 15,000 ಗಿಡ ನೆಡಲಾಗಿದ್ದು, ಮಳೆ ಕಡಿಮೆಯಾದ ಬಳಿಕ ಮತ್ತೆ 10,000 ಗಿಡ ನಾಟಿ ಮಾಡಲಿದ್ದೇವೆ. –
ಪ್ರಶಾಂತ್ ಪೈ, ಮಂಗಳೂರು ವಲಯ ಅರಣ್ಯಾಧಿಕಾರಿ