Advertisement

ಕಚೇರಿ ಪಕ್ಕದಲ್ಲೇ “ತೋಟ’ಗಾರಿಕೆ ಬೀಳು

06:46 PM Apr 17, 2021 | Team Udayavani |

ಸಿಂಧನೂರು: ತಾಲೂಕಿನ ತೋಟಗಾರಿಕೆ ಇಲಾಖೆಯ ಕಾರ್ಯವೈಖರಿಯನ್ನು ಗಮನಿಸಲು ಇಲಾಖೆ ಕಚೇರಿ ಹಿಂಭಾಗದ ತೋಟಕ್ಕೆ ಕಾಲಿಟ್ಟರೆ ಸಾಕು! ಸಮೃದ್ಧವಾಗಿ ಬೆಳೆದ ಸಪೋಟಾ ತೋಟವೇ ಕೇಳ್ಳೋರಿಲ್ಲದೇ ಬೀಳು ಬಿದ್ದಿದೆ.

Advertisement

ನಗರದ ಹೃದಯ ಭಾಗದಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಹೊಂದಿದ ಏಕೈಕ ಇಲಾಖೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿನ ಜಮೀನು ಬಳಸಿಕೊಂಡು ಉತ್ತಮ ಉದ್ಯಾನ ನಿರ್ಮಿಸಬೇಕೆಂಬ ಉದ್ದೇಶವೂ ಇದೆ. ಇದಕ್ಕೂ ಪೂರ್ವದಲ್ಲಿ ಇಲಾಖೆ ಮುಖ್ಯವಾಗಿ ತನ್ನ ಪಕ್ಕದಲ್ಲೇ ಕಣ್ಣಿಗೆ ಬೀಳುತ್ತಿರುವ ತೋಟವನ್ನೇ ಮರೆತಿದೆ.

ಸ್ಥಿತಿಗತಿ ಏನು?: ಹಲವು ವರ್ಷಗಳ ಹಿಂದೆಯೇ ಇಲ್ಲಿ 150ಕ್ಕೂ ಹೆಚ್ಚು ಸಪೋಟಾ ಸಸಿಗಳನ್ನು ಹಾಕಲಾಗಿತ್ತು. ಅವುಗಳು ಬೆಳೆದ ಹಲವು ವರ್ಷಗಳ ಕಾಲ ಫಲ ಕೊಟ್ಟಿವೆ. 50 ರಿಂದ 80 ಸಾವಿರ ರೂ. ವರೆಗೆ ಟೆಂಡರ್‌ ಕರೆದು ಹಣ್ಣುಗಳನ್ನು ಮಾರಾಟ ಮಾಡಿದ ಹಿನ್ನೆಲೆಯೂ ಇಲಾಖೆಗೆ ಇದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಣ್ಣಿನ ಗಿಡಗಳನ್ನು ಕಡೆಗಣಿಸಲಾಗಿದೆ. ಈ ಹಿಂದೆ ಕಾಲುವೆ ನೀರು ಪೂರೈಕೆಯಾಗುತ್ತಿತ್ತು. ನಂತರದಲ್ಲಿ ನೀರು ಬರುತ್ತಿಲ್ಲವೆಂದು ಕೈ ಬಿಡಲಾಗಿದೆ. ಸದ್ಯ 100 ಗಿಡಗಳಲ್ಲಿ ಸಪೋಟಾ ಹಣ್ಣುಗಳಿವೆ. ಆದರೆ, ಇಲಾಖೆಯೇ ಕೈ ಚೆಲ್ಲಿರುವುದರಿಂದ ಈ ಹಣ್ಣುಗಳು ಕಂಡವರ ಪಾಲಾಗುತ್ತಿವೆ. ಜತೆಗೆ, ಗಿಡಗಳನ್ನು ಕಡಿದು ಕಟ್ಟಿಗೆಗೆ ಉಪಯೋಗಿಸುವವರ ಸಂಖ್ಯೆಯೂ ಹೆಚ್ಚಿದೆ.

ಕಾವಲು ಕಾಯುವವರಿಲ್ಲ: ತೋಟಗಾರಿಕೆ ಇಲಾಖೆಗೆ 21 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 10 ಹುದ್ದೆಗಳು ಭರ್ತಿಯಾಗಿವೆ. ರಾಜ್ಯ ವಲಯದಲ್ಲಿನ ಸಿಬ್ಬಂದಿಯೊಬ್ಬರು ಇದ್ದಾರೆ. ಈ ಹಿಂದೆ ಈ ತೋಟವನ್ನು ಸಂರಕ್ಷಿಸಲು 11 ಜನ ಗಾರ್ಡನರ್‌ ಗಳಿದ್ದರು. ಅವರೆಲ್ಲ ಒಬ್ಬೊಬ್ಬರಾಗಿ ನಿವೃತ್ತಿಯಾಗಿ ಹೋದ ನಂತರ ಆ ಸ್ಥಾನಗಳನ್ನು ತುಂಬಿಲ್ಲ. ಅಲ್ಲಿಂದ ತೋಟಗಾರಿಕೆ ಇಲಾಖೆ ಕಾವಲುಗಾರರಿಲ್ಲದಂತಾಗಿದೆ.

ಇಲಾಖೆ ಕಚೇರಿಯ ಹಿಂಭಾಗದಲ್ಲಿರುವ ತೋಟವನ್ನು ಕೂಡ ಮರೆಯಲಾಗಿದ್ದು, ಇಲ್ಲಿನ ತೋಟ ಬಯಲು ಬಹಿರ್ದೆಸೆ ತಾಣವಾಗಿದೆ. ನೀರು ಪೂರೈಕೆ ಮಾಡದಿದ್ದರೂ ಮಳೆಗಾಲದಲ್ಲಿ ಸಂಗ್ರಹವಾದ ನೀರನ್ನು ಆಧರಿಸಿ, ಸಪೋಟಾ ಗಿಡಗಳು ಹಣ್ಣು ಬಿಟ್ಟಿವೆ. ಕನಿಷ್ಠ ಬಿಟ್ಟ ಹಣ್ಣಗಳನ್ನಾದರೂ ರಕ್ಷಿಸುವ ಕೆಲಸ ಮಾಡದಿದ್ದರಿಂದ ಇಲಾಖೆಯ ತೋಟ ಪಾಳುಬಿದ್ದಿದೆ. ಗಿಡಗಳಿಗೆ ಕೊಡಲಿ ಏಟು ಬೀಳುತ್ತಿರುವುದರಿಂದ ತೋಟವೂ ಕೂಡ ಕೆಲವೇ ದಿನಗಳಲ್ಲಿ ಇಲ್ಲವಾಗುವ ಮುನ್ಸೂಚನೆಗಳು ದಟ್ಟವಾಗಿವೆ.

Advertisement

ವಿವಾದದಲ್ಲಿ ಜಮೀನು
ಇಲ್ಲಿನ ತೋಟಗಾರಿಕೆ ಇಲಾಖೆ 24 ಎಕರೆ ಜಮೀನು ಹೊಂದಿತ್ತು. 2 ಎಕರೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೋಗಿದ್ದರೆ, ಮತ್ತೆ 2 ಎಕರೆ ಭೂಮಿಯನ್ನು ಎಪಿಎಂಸಿಗೆ ಬಿಟ್ಟು ಕೊಡಲಾಗಿದೆ. ಈ ಜಮೀನಿನ ಮೂಲಕ ಮಾಲೀಕರು ಕೂಡ ತಮಗೆ ಪರಿಹಾರ ಬಂದಿಲ್ಲವೆಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ನಡುವೆ ತೋಟಗಾರಿಕೆ ಇಲಾಖೆಗೆ 2 ಎಕರೆ ಜಾಗ ಬಿಟ್ಟು ಉಳಿದ ಜಮೀನಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಮೊದಲು ನೀರಿತ್ತು. ಈಗ ನೀರಿನ ಸೌಲಭ್ಯವಿಲ್ಲದ್ದರಿಂದ ಸಪೋಟಾ ಗಿಡಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವು ಒಣಗುತ್ತಿದ್ದು, ಹಣ್ಣುಗಳು ಗಿಡದಲ್ಲೇ ಒಣಗುತ್ತಿವೆ. ಉತ್ತಮ ಫಲವೇನು ಬರುವುದಿಲ್ಲ.
ಬಸವರಾಜ್‌ ನಂದಿಬೇವೂರು,
ಹಿರಿಯ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಸಿಂಧನೂರು

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next