ಅಮೀನಗಡ: ನಿರುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನೇ ಬಳಸಿಕೊಂಡು, ನೂರಾರು ಸಸಿ ಸಂರಕ್ಷಣೆ ಮಾಡುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಹೌದು, ಅಮೀನಗಡ ಹೋಬಳಿ ವ್ಯಾಪ್ತಿಯ ಅರಣ್ಯ ರಕ್ಷಕ ವಿನೋದ ಬೊಂಬ್ಲೇಕರ ಬಳಕೆಯಾದ ನಿರುಪಯುಕ್ತ ಎರಡು ಲೀಟರ್ ಪ್ಲಾಸ್ಟಿಕ್ ಬಾಟಲ್, ಸಿರಿಂಜ್ ಪೈಪ್ ಬಳಕೆ ಮಾಡಿಕೊಂಡು ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಯೂ ಪಡೆದಿದ್ದಾರೆ.
ಸಮೀಪದ ರಾಮಥಾಳ, ಕಳ್ಳಿಗಡ್ಡ ಸೇರಿದಂತೆ ವಿವಿಧೆಡೆ ಹೆದ್ದಾರಿಯ ಪಕ್ಕದಲ್ಲಿರುವ ನೂರಾರು ಗಿಡಗಳಿಗೆ ಬಳಕೆಯಾದ ನಿರುಪಯುಕ್ತ ನೀರಿನ ಖಾಲಿ ಬಾಟಲ್ಗಳನ್ನು ಬಳಕೆ ಮಾಡಿ ಗಿಡಗಳಿಗೆ ಕಟ್ಟಿ ಹನಿ ಹನಿಯಾಗಿ ನೀರು ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
400 ಸಸ್ಯಗಳ ಸಂರಕ್ಷಣೆ: ಐಹೊಳೆ ಮಾರ್ಗವಾಗಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಅಮೀನಗಡ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಸಸಿ ನೆಡಲಾಗಿದೆ. ಅರಣ್ಯ ಇಲಾಖೆಯಿಂದ ನಿತ್ಯವೂ ಸಸಿಗಳಿಗೆ ನೀರು ಹಾಕಲು ನಿಯಮಾನುಸಾರ ಅವಕಾಶವಿಲ್ಲ. ಹೀಗಾಗಿ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ವಿನೋದ ಅವರು, ಉಪಾಯ ಮಾಡಿ, ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಎರಡು ಲೀಟರ್‌ನ ನೀರಿನ ಬಾಟಲ್, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬಳಸಿ, ಎಸೆಯುವ ಸಲೈನ್ ಬಾಟಲ್ಗಳ ಚಿಕ್ಕ ಪೈಪ್ ಬಳಸಿಕೊಂಡು, ಅವುಗಳನ್ನು ಎಲ್ಲ ಗಿಡಗಳಿಗೆ ಕಟ್ಟಿದ್ದಾರೆ. ಬಳಿಕ ಬಾಟಲ್ಗಳಿಗೆ ನೀರು ತುಂಬಿಸುತ್ತಿದ್ದು, ಇದಕ್ಕೆ ಆಯಾ ವ್ಯಾಪ್ತಿಯ ರೈತರು, ಸಾರ್ವಜನಿಕರೂ ಸಹಕಾರ ಕೊಡುತ್ತಿದ್ದಾರೆ. ಹೀಗಾಗಿ 400ಕ್ಕೂ ಹೆಚ್ಚು ಸಸಿಗಳು ಇಂದು ಬೆಳೆದು ಮರವಾಗುತ್ತಿವೆ.
ಎರಡು ವರ್ಷಗಳ ಹಿಂದೆ ಮೊಬೈಲ್ಗಳಲ್ಲಿ ಇಂಟರ್‌ನೆಟ್ ಬಳಸಿಕೊಂಡು ಗಿಡಗಳಿಗೆ ಯಾವ ರೀತಿ ನೀರು ಪೂರೈಸಬೇಕು ಎಂಬುದನ್ನು ಸಹಜವಾಗಿ ಗಮನಿಸಿದ್ದೆ. ಅದರಂತೆ ಅಮೀನಗಡ ಹೋಬಳಿ ವ್ಯಾಪ್ತಿಯ ಬಾಂತಿಕೊಳ್ಳದ ಹತ್ತಿರದಲ್ಲಿರುವ ಎರಡು ನೂರು ಗಿಡಗಳಿಗೆ ನಿರುಪಯುಕ್ತ ನೀರಿನ ಬಾಟಲ್ಗೆ ಸಿರಿಂಜ್ ಪೈಪ್ ಅಳವಡಿಸಿ ಬೆಂಡಿಂಗ್ ವೈಯರ್‌ನಿಂದ ಗಿಡಗಳಿಗೆ ಕಟ್ಟಿ ಹನಿ ಹನಿಯಾಗಿ ನೀರು ಪೂರೈಸಿದ್ದೇವೆ. ಅದು ಯಶ್ವಸಿಯಾಗಿದೆ ಎಂದು ವಲಯ ಅರಣ್ಯ ರಕ್ಷಕ ವಿನೋದ ಬೊಂಬ್ಲೇಕರ ಉದಯವಾಣಿಗೆ ತಿಳಿಸಿದರು.
ಈ ಯಶಸ್ವಿ ಪ್ರಯೋಗ ಕಂಡ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು, ಗಿಡಗಳಿಗೆ ನಿರುಪಯುಕ್ತ ನೀರಿನ ಬಾಟಲ್ ಬಳಸಿ ನೀರು ಪೂರೈಸುವಂತೆ ಸೂಚನೆ ನೀಡಿದ್ದರು. ಈ ಬಾರಿ ಕಳ್ಳಿಗುಡ್ಡ, ರಾಮಥಾಳ ಹತ್ತಿರ ಸುಮಾರು 405 ಗಿಡಗಳಿಗೆ ನಿರುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ಹನಿ ಹನಿಯಾಗಿ ನೀರು ಪೂರೈಸುವ ಸಂಕಲ್ಪ ಮಾಡಲಾಗಿದೆ ಎಂದು ಖುಷಿಯಿಂದ ಸಂತಸ ಹಂಚಿಕೊಂಡರು.
ಒಟ್ಟಾರೆ ನಿರುಪಯುಕ್ತ ಪ್ಲಾಸ್ಟಿಕ್ ವಸ್ತು ಎಸೆಯುವ ಬದಲು ಅದನ್ನು ಬಳಸಿಕೊಂಡು ಗಿಡಗಳಿಗೆ ನೀರು ಪೂರೈಸುತ್ತಿರುವ ಅರಣ್ಯ ರಕ್ಷಕ ವಿನೋಧ ಬೊಂಬ್ಲೆಕರ ಕಾರ್ಯ ಕಂಡು ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ಬಾಟಲ್, ಆಸ್ಪತ್ರೆಯ ಸಲೈನ್ ಬಾಟಲ್ಗಳ ಚಿಕ್ಕ ಪೈಪ್ ಬಳಸಿ, ಸಸಿಗಳಿಗೆ ನೀರುಣಿಸಲಾಗುತ್ತಿದೆ. ಎರಡು ಲೀಟರ್ ನೀರು ಒಮ್ಮೆ ತುಂಬಿದರೆ, ಅದು 24 ಗಂಟೆಯವರೆಗೂ ಹನಿ ಹನಿಯಾಗಿ ಸಸಿಗಳಿಗೆ ಬೀಳುತ್ತದೆ. ಹೀಗಾಗಿ ಸಸಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಜನರು, ನಿರುಪಯುಕ್ತ ಬಾಟಲ್ಗಳನ್ನು ಎಲ್ಲೆಂದರಲ್ಲೆ ಎಸೆಯದೇ ಇಂತಹ ಕಾರ್ಯಕ್ಕೆ ಬಳಸಿಕೊಳ್ಳಬೇಕು.
• ವಿನೋದ ಬೊಂಬ್ಲೇಕರ,ವಲಯ ಅರಣ್ಯ ರಕ್ಷಕ, ಅಮೀನಗಡ
•ಎಚ್.ಎಚ್. ಬೇಪಾರಿ