ಧಾರವಾಡ: ಸಾಧನಕೇರಿ ಕೆರೆಯ ಬಂಡ್ ಮೇಲೆ ಹಾದು ಹೋಗಿರುವ ಕಾಂಟನ್‌ಮೆಂಟ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸ್ಥಳೀಯರು ರಸ್ತೆ ಗುಂಡಿಗಳಲ್ಲಿ ಶುಕ್ರವಾರ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಬೆಳ್ಳಂಬೆಳಗ್ಗೆ ಬೀದಿಗಿಳಿದು ಸಾಂಕೇತಿಕ ಹೋರಾಟ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರು.
ಬೆಳಗ್ಗೆ ವಾಯುವಿಹಾರಕ್ಕೆ ಬಂದ ಹಿರಿಯ ನಾಗರಿಕರು, ಜನಜಾಗೃತಿ ಸಂಘದ ಸದಸ್ಯರು ರಸ್ತೆ ಪಕ್ಕದ ಕಂಟಿಗಳನ್ನು ಗುಂಡಿಗಳಲ್ಲಿ ನಿಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಈ ರಸ್ತೆ ವರಕವಿ ದ.ರಾ. ಬೇಂದ್ರೆಯವರು ನಡೆದಾಡಿದ ರಸ್ತೆಯಾಗಿದ್ದು, ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಿಂದ ದಿನನಿತ್ಯ ನೂರಾರು ಪ್ರವಾಸಿಗರು ಬಾರೋ ಸಾಧನಕೇರಿ ಪ್ರವಾಸಿ ತಾಣ ವೀಕ್ಷಿಸಲು ಆಗವಿಸುತ್ತಾರೆ. ಇದು ಜಿಲ್ಲಾಡಳಿತದ ಗಮನಕ್ಕೆ ಇದ್ದರೂ ಜಾಣ ಕುರುಡುತನ ತೋರಿಸುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ದೂರಿದರು.
ಹೈಕೋರ್ಟ್ ವಕೀಲ ನೀಲೇಂದ್ರ ಗೂಂಡೆ, ಅರವಿಂದ ದೇಶಮುಖ, ಪರಪ್ಪ ಎಸ್.ಕೆ., ಆನಂದ ದೀಕ್ಷಿತ್, ವಸಂತ ಅಣ್ವೇಕರ, ಜನ ರಾಘವೇಂದ್ರ ಶೆಟ್ಟಿ ಮೊದಲಾದವರಿದ್ದರು.