Advertisement

“ಸಸ್ಯ’ಗಣಪತಿ! : ಬೆಳೆಯುವ ಸಿರಿ ಗಣೇಶನಲ್ಲಿ…

12:58 PM Sep 15, 2018 | |

 ಗಣಪತಿ ಹೊಸ ಅವತಾರ ಎತ್ತಿದ್ದಾನೆ. ಅವನ ಹೆಸರು “ಸಸ್ಯ ಗಣಪತಿ’. ಇವನನ್ನು ವಿಸರ್ಜಿಸಿದರೆ ಗಿಡವಾಗುತ್ತಾನೆ. “ಸಸ್ಯ ಗಣಪತಿ’ಯ ರೂವಾರಿಗಳಾದ ಪುನೀತ್‌ ಮತ್ತು ವಿವೇಕ್‌ ಇಬ್ಬರಿಗೂ ಈ ಬಾರಿಯ ಗಣೇಶ ಚತುರ್ಥಿ ವಿಶೇಷವಾಗಿತ್ತು. ಏಕೆಂದರೆ…

Advertisement

ಗಣೇಶ ಚತುರ್ಥಿ ಮನೆ ಮಂದಿ, ಊರು ಕೇರಿಯವರನ್ನೆಲ್ಲಾ ಒಂದುಗೂಡಿಸುವ ಹಬ್ಬ. ಹಾಗೆಯೇ ಇದೀಗ ಅದು ಪರಿಸರಪ್ರೇಮಿಗಳನ್ನು ಒಂದುಗೂಡಿಸುವ ಹಬ್ಬವೂ ಹೌದು. ಗಣೇಶ ಹಬ್ಬವನ್ನು ಪರಿಸರಸ್ನೇಹಿಯನ್ನಾಗಿಸಲು ಶ್ರಮಿಸುವವರಲ್ಲಿಬ್ಬರು ಗೆಳೆಯರಾದ ಪುನೀತ್‌ ಮತ್ತು ವಿವೇಕ್‌. ಸಾಮಾನ್ಯವಾಗಿ ಬಾಲ ಗಣಪತಿ, ಸಿದ್ಧಿ ಗಣಪತಿ, ಉಚ್ಚಿಷ್ಟ ಗಣಪತಿ, ಲಕ್ಷ್ಮಿ ಗಣಪತಿ ಹೀಗೆ…ನಾನಾ ರೂಪ, ನಾನಾ ಹೆಸರುಗಳುಳ್ಳ ಗಣಪನನ್ನು ನೋಡಿರುತ್ತೀರಾ, ಇಲ್ಲವೇ ಕೇಳಿರುತ್ತೀರಾ. ಅದೇ ರೀತಿ ನಾಲ್ವರು ಗೆಳೆಯರು ಸೇರಿ ಪರಿಸರಸ್ನೇಹಿ ಗಣಪನನ್ನು ಜನರಿಗೆ ಒದಗಿಸುತ್ತಾ ಬಂದಿದ್ದಾರೆ. ಈ ಗಣಪನ ಹೆಸರು “ಸಸ್ಯ ಗಣಪತಿ’.

ಬದಲಾವಣೆಯ ಗಾಳಿ ಬೀಸಿದೆ
ಹಿಂದೆಲ್ಲಾ ರಾಸಾಯನಿಕಯುಕ್ತ ಗಣೇಶ ವಿಗ್ರಹಗಳ ಬಗ್ಗೆ ಹೆಚ್ಚಿನ ಒಲವನ್ನು ಗ್ರಾಹಕರು ಹೊಂದಿದ್ದರು. ಅಲಂಕಾರ ಮತ್ತು ಬಣ್ಣಗಳಿಂದಾಗಿ ಚೆನ್ನಾಗಿ ಕಾಣುತ್ತದೆ ಎನ್ನುವುದು ಹೆಚ್ಚಿನವರ ಅನಿಸಿಕೆಯಾಗಿತ್ತು. ಹಾಗಾಗಿ ಮಣ್ಣಿನ ಗಣಪತಿಯನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಬದಲಾವಣೆಯ ಗಾಳಿ ಬೀಸುತ್ತಿದೆ. ಸಸ್ಯ ಗಣಪತಿಯನ್ನು ಕಳೆದೆರಡು ವರ್ಷಗಳಿಂದ ಜನರಿಗೆ ಒದಗಿಸುತ್ತಿರುವ ಪುನೀತ್‌ರನ್ನು ಕೇಳಿದರೆ ಇದು ಸ್ಪಷ್ಟವಾಗುತ್ತದೆ. ಕಳೆದ ವರ್ಷ 700 ಮಂದಿ ಸಸ್ಯ ಗಣಪತಿಯನ್ನು ಕೊಂಡಿದ್ದರು. ಅದೇ ಈ ವರ್ಷ 1000 ಮಂದಿ ಬೆಂಗಳೂರಿಗರು ಸಸ್ಯ ಗಣಪತಿಯನ್ನು ತಮ್ಮ ಮನೆಗಳಿಗೆ ಕೊಂಡೊಯ್ದಿದ್ದಾರೆ. ಸಸ್ಯ ಗಣಪತಿಯ ಖ್ಯಾತಿ ಹೊರರಾಜ್ಯಗಳಿಗೂ ತಲುಪಿದೆ. ದೆಹಲಿ, ಹರಿಯಾಣ ಮುಂತಾದೆಡೆಗಳಿಂದ ಕರೆಗಳು ಬಂದಿರುವುದು ಅದಕ್ಕೆ ಸಾಕ್ಷಿ. ಹೀಗಾಗಿ ಮುಂದಿನ ವರ್ಷ ಮಿಕ್ಕ ರಾಜ್ಯಗಳ ಗ್ರಾಹಕರಿಗೂ ಸಸ್ಯ ಗಣಪತಿಯನ್ನು ತಲುಪಿಸುವ ಯೋಜನೆಯನ್ನು ಇಬ್ಬರೂ ಗೆಳೆಯರು ಹೊಂದಿದ್ದಾರೆ. 

15 ದಿನಗಳ ಪ್ರಾಜೆಕ್ಟ್
ಎಲೆಕ್ಟ್ರಾನಿಕ್ಸ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪುನೀತ್‌ ಮತ್ತು ವಿವೇಕ್‌ ಗಣೇಶ ಚತುರ್ಥಿಯ ಸಮಯದಲ್ಲಿ 15 ದಿವಸ ಕೆಲಸದಿಂದ ಬಿಡುವು ತೆಗೆದುಕೊಳ್ಳುತ್ತಾರೆ. ಸಸ್ಯ ಗಣಪತಿಯ ಪ್ರಾಜೆಕ್ಟ್‌ನಲ್ಲಿ ಬಿಜಿಯಾಗುತ್ತಾರೆ. ಆರ್ಡರ್‌ ತೆಗೆದುಕೊಳ್ಳುವುದು, ಗಣಪತಿಯನ್ನು ಸುರಕ್ಷಿತವಾಗಿ ಪ್ಯಾಕ್‌ ಮಾಡುವುದು. ಹೀಗೆ ಎಲ್ಲಾ ಕೆಲಸಗಳನ್ನೂ ಹಂಚಿಕೊಳ್ಳುತ್ತಾರೆ. ಗ್ರಾಹಕರ ಒತ್ತಾಯದ ಮೇರೆಗೆ ಈ ಬಾರಿ ಸಸ್ಯ ಗಣಪನ ಎತ್ತರವನ್ನು 12 ರಿಂದ 15 ಇಂಚುಗಳವರೆಗೆ ಹೆಚ್ಚಿಸಿದ್ದರು. “ಎನ್‌.ಜಿ.ಒ ಅಥವಾ ಯಾವುದೇ ಸಂಸ್ಥೆ ತಮ್ಮ ಜೊತೆ ಕೈಜೋಡಿಸಲು ಮುಂದೆ ಬಂದರೆ, ಸಹಕರಿಸಲು ಸಿದ್ಧ’ ಎನ್ನುತ್ತಾರೆ ವಿವೇಕ್‌. 

ಏನಿದು ಸಸ್ಯ ಗಣಪತಿ?
ಕಿಟ್‌ನಲ್ಲಿ ದೊರೆಯುವ ಸಸ್ಯಗಣಪತಿಯ ಜೊತೆಗೆ, ಗೊಬ್ಬರದ ಇಟ್ಟಿಗೆ, ಗಣಪತಿಯನ್ನು ವಿಸರ್ಜಿಸಲು ಕುಂಡ ಮತ್ತು ಬೆಂಡೆ, ಟೊಮೇಟೊ, ತುಳಸಿ ಬೀಜಗಳ ಪ್ಯಾಕೆಟ್‌ ಇರುತ್ತವೆ. ಗಣಪನ ವಿಗ್ರಹವನ್ನು ವಿಶೇಷವಾಗಿ ತಯಾರಿಸಲಾಗಿದೆ. ಕುಂಡದಲ್ಲಿ ವಿಸರ್ಜಿಸಿದ 2- 3 ಗಂಟೆಗಳಲ್ಲೇ ಮಣ್ಣು ಕರಗಿ ತಳ ಸೇರುತ್ತದೆ. ನಂತರ ಇಟ್ಟಿಗೆ ಗೊಬ್ಬರವನ್ನು ಮೇಲಕ್ಕೆ ಇಡಬೇಕು. ಈ ಎರಡು ಲೇಯರ್‌ಗಳ ಮೇಲೆ ಬೀಜವನ್ನು ಹಾಕಬೇಕು. ಕೆಲವೇ ದಿನಗಳಲ್ಲಿ ಬೀಜ ಮೊಳಕೆಯೊಡೆದು ಗಣೇಶ ಸಸಿಯ ರೂಪದಲ್ಲಿ ಮನೆಯಲ್ಲೇ ನೆಲೆಸುತ್ತಾನೆ.

Advertisement

ಕಳೆದ ವರ್ಷಕ್ಕಿಂತ ಈ ಬಾರಿ ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಅನೇಕರು ಕರೆ ಮಾಡಿ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದನ್ನೆಲ್ಲಾ ನೋಡಿದಾಗ ಖುಷಿಯಾಗುತ್ತೆ. ನಾವು ಲಾಭಕ್ಕಾಗಿ ಈ ಕೆಲಸವನ್ನು ಮಾಡುತ್ತಿಲ್ಲ. ಬಂದ ಅಷ್ಟಿಷ್ಟು ಲಾಭವನ್ನೂ ಈ ಪ್ರಾಜೆಕ್ಟ್ಗೇ ಹಾಕುತ್ತಿದ್ದೇವೆ. ಜನರಲ್ಲಿ ಪರಿಸರ ಕಾಳಜಿ ಬೆಳೆಯುವಂತೆ ಮಾಡಬೇಕು ಎಂಬುದೇ ನಮ್ಮ ಉದ್ದೇಶ.
– ಪುನೀತ್‌, ಸಸ್ಯ ಗಣಪತಿ ತಂಡದ ಸದಸ್ಯ 

– ಹವನ

Advertisement

Udayavani is now on Telegram. Click here to join our channel and stay updated with the latest news.

Next