ಕೆ.ಆರ್.ಪುರ: ಈಗಾಗಲೇ ಮುಂಗಾರು ಮಳೆಗಾಲ ಶುರುವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೂ ಸೃಷ್ಟಿಯಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಲೇ ಇಲ್ಲ. ರಾಜಾಕಾಲುವೆಗಳಲ್ಲಿ ಆಳೇತ್ತರದ ಗಿಡಗಳು ಬೆಳೆದಿರುವುದು ಒಂದೆಡೇಯಾದರೇ, ಮತ್ತೂಂದೆಡೆ ಯತೇಚ್ಚವಾಗಿ ಹೂಳು ತುಂಬಿಕೊಂಡು, ಮಳೆ ಬಂದಾಗ ನೀರು ಸರಾಗವಾಗಿ ಹರಿಯದೇ ತಗ್ಗು ಪ್ರದೇಶಗಳಿಗೆ ನುಗ್ಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ನಗರದ ಕೆ.ಆರ್. ಪುರಂನ ದೇವಸಂದ್ರ ವಾರ್ಡ್‌ನಲ್ಲಿ ಬರುವ ನೇತ್ರಾವತಿ ಬಡಾವಣೆ, ವೆಂಕಟೇಶ್ವರ ಟೆಂಟ್ ರಸ್ತೆ ಹಾಗೂ ರಾಜೀವ್ ಗಾಂಧಿ ಕೊಳಗೇರಿ ಹಾಗೂ ಬಸವನಪುರ ವಾರ್ಡ್‌ನ ಗಾಯತ್ರಿ ಬಡಾವಣೆ, ಮಂಜುನಾಥ ಬಡಾವಣೆ ರಾಮಮೂರ್ತಿನಗರ ವಾರ್ಡ್ ಅಂಬೇಡ್ಕರ್ ನಗರ, ವಿಶೇಶ್ವರನಗರ, ಕಲ್ಕೆರೆ, ರಿಚ್ಚಸ್ ಗಾರ್ಡನ್, ವಿಜಿನಾಪುರ ವಾರ್ಡ್, ಆರ್.ಆರ್.ನಗರ, ನಾಗಪ್ಪರೆಡ್ಡಿ ಬಡಾವಣೆ, ಹೊರಮಾವು ಸೇರಿದಂತೆ ಹಲವು ಬಡಾವಣೆಗಳಲ್ಲಿ ಹಾದು ಹೋಗಿರುವ ರಾಜಕಾಲುವೆಗಳಲ್ಲಿ ಜಂಬು ನಾರು, ಹತ್ತಿ, ಹರಳೆ ಮುಂತಾದ ಗಿಡಗಳು ಆಳೆತ್ತರಕ್ಕೆ ಬೆಳೆದಿವೆ, ಸಾಕಷ್ಟು ಹೂಳು ಕೂಡಾ ತುಂಬಿಕೊಂಡಿವೆ. ಅಲ್ಲದೇ ಮಳೆ ಬಂದಾಗ ಇದೇ ಪ್ರದೇಶಗಳು ನೀರಿನಿಂದ ಮುಳುಗಡೆಯಾಗುತ್ತವೆ.
ಪ್ರತಿಬಾರಿ ಮುಳುಗಡೆಯಾದಗಲೂ ಕೇವಲ ಭರವಸೆ ನೀಡುವ ಜನಪ್ರತಿನಿಧಿಗಳು, ಅದಿಕಾರಿಗಳು ರಾಜಕಾಲುವೆ ಶುಚಿಗೊಳಿಸುವ ಗೋಜಿಗೆ ಹೋಗಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ನೀರುಗಾಲುವೆಗಳು, ರಾಜಕಾಲುವೆಗಳನ್ನು ಶುಚಿಗೊಳಿಸಬೇಕು ಎನ್ನುವ ನಿಯಮವಿದ್ದರೂ, ಇದು ಪಾಲನೆಯಾಗುತ್ತಿಲ್ಲ, ಅಲ್ಲದೇ ರಾಜಾಕಾಲವೆಗಳು ಒತ್ತುವರಿಯಾಗಿದ್ದರೂ ಮಹಾನಗರ ಪಾಲಿಕೆ ಕಣ್ಮುಚ್ಚಿ ಕುಳಿತಿದೆ. ಇದರಿಂದಾಗಿ ರಾಜಕಾಲುವೆ ದೊಡ್ಡ ಮೋರಿಯಂತೆ ಭಾಸವಾಗುತ್ತಿದೆ. ರಾಜಾಕಾಲುವೆಗಳ ಒತ್ತುವರಿಯಿಂದಲೂ ಕೂಡಾ ಮಳೆ ಬಂದಾಗ ಹೆಚ್ಚಿನ ಅನಾಹುತಗಳಾಗುತ್ತಿವೆ.
ಮನೆಗಳಿಗೆ ಚರಂಡಿ ನೀರು: ಮಳೆ ಬಂದಾಗ ನೀರು ಕಾಲುವೆಗಳಿಗೆ ಹರಿಯದೇ ಮನೆಗಳಿಗೆ ನುಗ್ಗುತ್ತಿವೆ. ರಾಜಕಾಲುವೆಯಲ್ಲಿ ಹೂಳು, ಗಿಡಗಂಟಿಗಳಿಂದಾಗಿ ಚರಂಡಿ ನೀರು ಸಹ ಮನೆಗೆ ನುಗ್ಗುತ್ತಿದೆ. ನೀರಿನಲ್ಲಿ ಹಾವು, ಚೇಳು ಮುಂತಾದ ವಿಷಜಂತುಗಳು ಮನೆ ಸೇರುತ್ತಿವೆ. ಗಲೀಜು ನೀರು ಮನೆ ಸೇರುವುದರಿಂದ ವಾರಗಟ್ಟಲೇ ಶುಚಿಗೊಳಿಸಬೇಕು. ಜತೆಗೆ ದುರ್ನಾತದಲ್ಲಿ ಜೀವನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕಾಲುವೆಯಲ್ಲಿ ತಾಜ್ಯ: ರಾಜಕಾಲುವೆಗೆ ರಾತ್ರೋರಾತ್ರಿ ಕೋಳಿ ತ್ಯಾಜ್ಯ,ಪ್ಲಾಸ್ಟಿಕ್ ಪದಾರ್ಥಗಳು, ಟರ್ಮಕೋಲು, ಬಟ್ಟೆ ಸುರಿಯಲಾಗುತ್ತಿದೆ ಇದರಿಂದ ದುರ್ವಾಸನೆಯ ಜೊತೆಗೆ ನೊಣ, ಸೊಳ್ಳೆಗಳ ಕಾಟ ಶುರುವಾಗಿದೆ. ಸೊಳ್ಳೆಯ ಕಡಿತದಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯೂ ಎದುರಾಗಿದೆ. ಇದೇ ರೀತಿ ಮುಂದುವರಿದರೇ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಅನುಮಾನವಿಲ್ಲ.
ರಾಜಕಾಲುವೆಯಲ್ಲಿ ಸುಮಾರು ವರ್ಷಗಳಿಂದ ಹೂಳೆತ್ತಿಲ್ಲ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ಮಳೆ ಬಂದರೆ ನೀರು ಸರಾಗವಾಗಿ ಹರಿಯದೇ ತಗ್ಗುಪ್ರದೇಶ ಮನೆಗಳಿಗೆ ನುಗ್ಗುತ್ತಿದೆ, ರಾಜಕಾಲುವೆ ಸಮೀಪವಿರುವ ಬಡಾವಣೆಗಳು ಜಲವೃತವಾಗುವುದು ಸಾಮಾನ್ಯವಾಗಿದೆ.
-ವಿಶ್ವನಾಥ್, ರಾಮಮೂರ್ತಿನಗರ ನಿವಾಸಿ
* ಕೆ.ಆರ್.ಗಿರೀಶ್