ಇವರ ಸೇವೆ ಇನ್ನಷ್ಟು ಕಾಲ ಲಭ್ಯವಾಗಿದ್ದಿದ್ದರೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿತ್ತು. ಆದರೆ ಜಿಲ್ಲೆಯ ದುರ ದೃಷ್ಟವೆಂದರೆ ಬರುವ ಎಲ್ಲ ಅಧಿಕಾರಿಗಳ ಕನಸಿನ ಯೋಜನೆ ಗಳು ಸಭೆಗಳಿಗಷ್ಟೇ ಸೀಮಿತವಾಗುತ್ತಿವೆ.ನಿರಂತರವಾಗಿ ಗೆದ್ದು ಬರುತ್ತಿರುವ ಇಬ್ಬರು ಶಾಸಕರಿಗೆ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದು ಪ್ರವಾಸಿತಾಣಗಳ ದುಃಸ್ಥಿತಿಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಪ್ರಕೃತಿ ಸೌಂದರ್ಯದ ನೆಲೆವೀಡು ಕೊಡಗು, ನಾಡಿನೆಲ್ಲೆ ಡೆಯ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತದಾದರೂ ಈ ರೀತಿ ಜಿಲ್ಲೆಗೆ ಆಗಮಿಸುವ ಪ್ರವಾಸಿ ಸಮೂಹಕ್ಕೆ ಮೂಲ ಸೌಲಭ್ಯಗಳಿರಲಿ, ಕನಿಷ್ಟ ಅವರು ತೆರಳಲು ಉದ್ದೇಶಿಸಿರುವ ಪ್ರವಾಸಿ ತಾಣಗಳಿಗೆ ದಾರಿ ತೋರುವ ಮಾರ್ಗ ಸೂಚಿಗಳೇ ಇಲ್ಲವೆನ್ನು ವುದು ವ್ಯವಸ್ಥೆಯ ಔದಾಸೀನ್ಯ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗುತ್ತದೆ.
Advertisement
ಕೊಡಗಿನಲ್ಲಿ ಪ್ರಮುಖವಾಗಿ ಜಿಲ್ಲಾ ಕೇಂದ್ರ ಮಡಿಕೆೇರಿಗೆ ಈ ಹಿಂದೆ ಅಕ್ಟೋಬರ್‌ನಿಂದ ಮಾರ್ಚ್ ವರೆಗೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದರಾದರೆ, ಮುಂಗಾರಿನ ಜೂನ್ ತಿಂಗಳ ಆರಂಭದೊಂದಿಗೆ ಹೊರ ಜಿಲ್ಲೆಯ ಮಂದಿ ಇತ್ತ ತಲೆ ಹಾಕುತ್ತಿರಲಿಲ್ಲ. ಪ್ರಸ್ತುತ ಈ ಚಿತ್ರಣ ಬದಲಾಗಿದ್ದು, ಮಾನ್ಸೂನ್ ಪ್ರವಾಸೋದ್ಯಮ ಎನ್ನುವ ಹೊಸ ಪರಿಕಲ್ಪನೆ ಮೈದಳೆದಿದೆ. ಇದರೊಂದಿಗೆ ವರ್ಷಪೂರ್ತಿ ಪ್ರವಾಸಿಗರ ದಂಡು ಮಡಿಕೇರಿ ಯತ್ತ ಮುಖ ಮಾಡಲಾರಂಭಿಸಿದೆ.ಇನ್ನು ಪ್ರವಾಸೋದ್ಯಮದ ಅಭಿವೃದ್ಧಿ ಎನ್ನುವ ಆಡಳಿತ ವ್ಯವಸ್ಥೆಗೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ದಪ್ಪಾಕ್ಷರಗಳಲ್ಲಿ ಮಾರ್ಗಸೂಚಿ ಹಾಕುವ ಚಿಂತನೆ ಇಲ್ಲಿಯವರೆಗೆ ಬಂದಿಲ್ಲವೆಂದು ಕಾಣುತ್ತದೆ. ಮಾರ್ಗಸೂಚಿ ಇಲ್ಲವೆಂದೇನೂ ಅಲ್ಲ, ಆದರೆ, ಅದು ಸೂಕ್ತ ಸ್ಥಳ ದಲ್ಲಿ ಪ್ರವಾಸಿಗರಿಗೆ ಎದ್ದು ಕಾಣುವ ರೀತಿಯಲ್ಲಿ ಇಲ್ಲ. ಇದರಿಂದ ಇಂದಿಗೂ ಮಡಿಕೇರಿ ಬಸ್ ನಿಲ್ದಾಣದಲ್ಲಿ ಅಬ್ಬಿಫಾಲ್ಸ್, ರಾಜಾಸೀಟು ಎಲ್ಲಿ ಎಂದು ಕೇಳುವ ಸಾಕಷ್ಟು ಮಂದಿ ಇದ್ದಾರೆ.
ಮಂಜಿನ ಅರಮನೆಯ ಮಡಿಕೇರಿ ನಗರಿಯನ್ನು ಪ್ರವೇಶಿಸಿ ಮುಖ್ಯ ಹಾದಿಯಲ್ಲಿ ಸಾಗುವಾಗ ಸುದೂರದ ಬೆಟ್ಟ ಪ್ರದೇಶದಲ್ಲಿ ಗುಮ್ಮಟವನ್ನು ಒಳಗೊಂಡಂತೆ ಕಾಣುವ ಆಕರ್ಷಕ ಕಟ್ಟಡವೆ ರಾಜರ ಆಳ್ವಿಕೆಯ ಕುರುಹಾಗಿರುವ ರಾಜರ ಗದ್ದುಗೆಗಳು.
Related Articles
Advertisement
ಕೊಡಗನ್ನಾಳಿದ ಹಾಲೇರಿ ರಾಜವಂಶದ ಕುರುಹಾಗಿ ನಿಂತಿರುವ ರಾಜರ ಗದ್ದುಗೆಗಳ ವ್ಯಾಪ್ತಿಗೆ ಸಾಕಷ್ಟು ಜಾಗ ಒಳಪಡುತ್ತಿತ್ತಾದರು, ಹಲ ದಶಕಗಳ ಹಿಂದೆಯೆ ಬಹುಪಾಲು ಜಾಗ ಒತ್ತುವರಿಯಾಗಿ ಮನೆಗಳು ನಿರ್ಮಾಣವಾಗಿವೆೆ. ಪ್ರಸ್ತುತ ಸ್ಮಾರಕದ ಸುತ್ತಲು ಇರುವ ಪ್ರದೇಶವನ್ನು ಕೆಲ ವರ್ಷಗಳ ಹಿಂದೆ ಅಂದಿನ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಜಿಲ್ ಕೃಷ್ಣನ್ ವಿಶೇಷ ಕಾಳಜಿ ವಹಿಸಿ, ಲಕ್ಷಾಂತರ ರೂ. ವ್ಯಯಿಸಿ ಸುಂದರ ಉದ್ಯಾನವನ ರೂಪುಗೊಳ್ಳಲು ಕಾರಣರಾಗಿದ್ದರು.
ಉದ್ಯಾನವೇನೋ ಸುಂದರವಾಗಿ ರೂಪುಗೊಂಡು ಪ್ರವಾಸಿಗರಾದಿಯಾಗಿ ಎಲ್ಲರನ್ನು ಆಕರ್ಷಿಸಲಾರಂಭಿಸಿತ್ತು. ಅಷ್ಟರಲ್ಲೆ ಕಾಣಿಸಿಕೊಂಡಿದ್ದು, ನಿರ್ವಹಣೆಯ ಸಮಸ್ಯೆ. ಗದ್ದುಗೆ ಪರಿಸರವನ್ನು ಒಪ್ಪವಾಗಿಡುವ ಸದಭಿಪ್ರಾಯದಿಂದ ಮೂಡ ದಿಂದ ಉದ್ಯಾನ ನಿರ್ಮಾಣವಾಯಿತಾದರೆ, ಅದನ್ನು ನಿರ್ವಹಿಸುವಲ್ಲಿ ಗದ್ದುಗೆಯ ನಿರ್ವಹಣೆ ಜವಾಬ್ದಾರಿ ಹೊತ್ತ ಪ್ರಾಚ್ಯ ವಸ್ತು ಇಲಾಖೆಯಾಗಲಿ, ಪುರದ ಕಾಳಜಿ ಹೊತ್ತ ಮಡಿಕೆೇರಿ ನಗರ ಸಭೆಯಾಗಲಿ ವಿಶೇಷ ಆಸಕ್ತಿಯನ್ನು ತಾಳಲಿಲ್ಲ.
ಸುಂದರವಾಗಿ ರೂಪುಗೊಂಡಿದ್ದ ಉದ್ಯಾನವನ ನಿರ್ವಹ ಣೆಯ ಕೊರತೆಯಿಂದ ನಿಧಾನವಾಗಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತ ಪ್ರಸ್ತುತ ಅನಾಥವಾಗಿದೆ. ಮಡಿಕೆೇರಿ ಎಂದರೆ ಕೇವಲ ರಾಜಾಸೀಟು, ಕೋಟೆ ಮಾತ್ರವಲ್ಲ, ಗದ್ದುಗೆ ಮತ್ತು ಉದ್ಯಾನವನವೂ ಪ್ರೇಕ್ಷಣೀಯ ಸ್ಥಳವೆಂದು ಹೇಳಿಕೊಳ್ಳುವ, ಆ ಮೂಲಕ ಪ್ರವಾಸಿಗರನ್ನು ಸೆಳೆಯಬಹುದಾಗಿದ್ದ ಸುಂದರ ತಾಣ ಯಾರಿಗೂ ಬೇಡದಂತಾಗಿರುವುದು ವಿಷಾದನೀಯ.
ಇನ್ನೊಂದು ಪ್ರಮುಖ ಪ್ರವಾಸಿ ತಾಣ ಗಾಂಧಿ ಮಂಟಪ. ಕಳೆದ ಹಲವಾರು ವರ್ಷಗಳಿಂದ ಗಾಂಧಿ ಪುಣ್ಯತಿಥಿಯ ಸಂದರ್ಭ ಸರ್ವೋದಯ ಸಮಿತಿ ಗಾಂಧಿ ಭವನ ನಿರ್ಮಿಸಬೇಕೆನ್ನುವ ಬೇಡಿಕೆಯನ್ನು ಮುಂದಿಡುತ್ತಲೇ ಬರುತ್ತಿದ್ದು, ಇದೊಂದು ಕ್ಷೀಣ ಧ್ವನಿಯಾಗಿದ್ದುದರಿಂದ ಅದು ಆ ಸಂದರ್ಭಕ್ಕಷ್ಟೆ ಸೀಮಿತವಾಗಿ ಬಿಡುತ್ತಿದ್ದುದು ವಿಪರ್ಯಾಸ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು 1.70 ಕೋಟಿ ರೂ. ವೆಚ್ಚದ ಗಾಂಧಿ ಭವನಕ್ಕೆ ಅನುಮೋದನೆ ದೊರಕಿರುವ ಬಗ್ಗೆ ಮಾತನಾಡಿದ್ದಾರೆ.
ಕಟ್ಟೆಗಳು ಮಾತ್ರ; ಉದ್ಯಾನ ಇಲ್ಲ!ಗಾಂಧಿ ಮಂಟಪದ ಮುಂಭಾಗದಲ್ಲೆ ವರ್ಷಗಳ ಹಿಂದೆ ಉದ್ಯಾನವೊಂದನ್ನು ರೂಪಿಸಲು ಅನುವಾಗುವಂತೆ ಸಿಮೆಂಟ್ ಕಟ್ಟೆಗಳನ್ನೆಲ್ಲ ಕಟ್ಟಲಾಗಿದೆ. ಪ್ರಸ್ತುತ ಆ ಕಟ್ಟೆಗಳು ಮಾತ್ರ ಇವೆ. ಅದರ ಹಿಂದಿನ ಉದ್ದೇಶವಾದ ಉದ್ಯಾನವನ ರೂಪುಗೊಂಡೇ ಇಲ್ಲ. ಸದುದ್ದೇಶಗಳು ದಾರ ಕಡಿದ ಗಾಳಿಪಟದಂತೆ ಆಗಿ ಹೋದರೆ ಯಾರಿಗೂ ಪ್ರಯೋಜನವಾಗಲಾರದು. ಗಾಂಧಿ ಭವನ ನಿರ್ಮಾಣದ ಚಿಂತನೆ ಅಷ್ಟಕ್ಕೆ ನಿಂತು ಹೋಗದಿರಲಿ ಎನ್ನುವ ಸದಾಶಯವಷ್ಟೇ ನಗರದ ಜನತೆಯದ್ದು. ನಿಸರ್ಗ ರಮಣೀಯ ಮಡಿಕೇರಿಯ ರಾಜಾಸೀಟು ತನ್ನ ಇರುವಿಕೆಯಲ್ಲೆ ಮೈದುಂಬಿಕೊಂಡಿದ್ದ ಪ್ರಶಾಂತತೆ, ಕಳೆದ ಕೆಲ ವರ್ಷಗಳಿಂದ ವ್ಯಾಪಕವಾಗಿ ಅಂಕೆ ಇಲ್ಲದಂತೆ ಬೆಳೆೆಯುತ್ತಿರುವ ಪ್ರವಾಸೋದ್ಯಮದಿಂದ ಮರೆಯಾಗುತ್ತಿದ್ದು, ಸುಂದರ ಪರಿಸರದ ಶಾಂತಿಗೆ ಭಂಗ ಉಂಟಾಗಿದೆ. ಮಹಾತ್ಮಾ ಗಾಂಧೀಜಿ ಅವರು 1934ರಲ್ಲಿ ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ, ರಾಜಾಸೀಟಿಗೆ ಭೇಟಿ ನೀಡಿ ಅಲ್ಲಿನ ಅಪೂರ್ವ ಪ್ರಕೃತಿ ಸೌಂದರ್ಯಕ್ಕೆ ತಲೆಬಾಗಿದ್ದರು. ಈ ಬಗ್ಗೆ ತಮ್ಮ ಹರಿಜನ ಪತ್ರಿಕೆಯಲ್ಲೂ ಉಲ್ಲೇಖೀಸಿದ್ದರು. ಇಂತಹ ಸುಂದರ ಪರಿಸರದ ನೆಲೆ ರಾಜಾಸೀಟು ಪ್ರವಾಸಿಗಳ ಮೋಜು ಮಸ್ತಿಯ ತಾಣವಾಗಿ ಪರಿವರ್ತನೆಯಾಗಿಬಿಟ್ಟಿದೆ. ರಾಜಾಸೀಟು ಅನ್ನುವಂತಹದ್ದು ಭಾರೀ ವಿಸ್ತಾರವಾದ ಪ್ರದೇಶವೇನೂ ಅಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನ ಯೋಜನೆಗಳು ಪ್ರವಾಸೋದ್ಯಮ ಇಲಾಖೆಯಿಂದ ರೂಪುಗೊಂಡಿವೆಯಾದರೂ ಇವಾವುವೂ ಕಳೆದ ಹಲ ವರ್ಷ ಗಳಿಂದ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ರಾಜಾಸೀಟಿನ ಸೀಮಿತ ಪ್ರದೇಶದಲ್ಲೆ ಪ್ರವಾಸಿಗರು ಹಲ ಸಂಖ್ಯೆಯಲ್ಲಿ ತುಂಬಿ ಉದ್ಯಾನವನ ಗದ್ದಲದ ಗೂಡಾಗಿ ಹೋಗಿರುವುದು ಬೇಸರದ ವಿಚಾರ. ಮಡಿಕೇರಿಯ ಆಹ್ಲಾದಕರ ವಾತಾವರಣದಲ್ಲಿ ಕೆಲ ಕಾಲ ಕಳೆದು ತೆರಳುವ ಮನೋಭಾವ ಕೆಲ ವರ್ಷಗಳ ಹಿಂದೆ ಪ್ರವಾಸಿಗರಲ್ಲಿ ಕಂಡು ಬರುತ್ತಿತ್ತು. ಇದೀಗ ಅತಿರೇಕದ ಮಾನ್ಸೂನ್ ಟೂರಿಸಂ ಎನ್ನುವ ಹೊಸ ಕಲ್ಪನೆಯೊಂದಿಗೆ ಪ್ರವಾಸೋದ್ಯಮ ತನ್ನೆಲ್ಲ ಮಿತಿಗಳನ್ನು ಮೀರಿ ಬೆಳೆೆದಿದೆ. ಮಡಿಕೇರಿಯ ಬಿರುಮಳೆ ಯಲ್ಲೆ ನೆನೆದು, ಕಿರುಚಾಡುವ, ಪ್ರವಾಸಿ ಸ್ಥಳದಲ್ಲಿ ಮೋಜು ಮಸ್ತಿ ಮಾಡುವ ವಿಚಿತ್ರಗಳಿಗೆ ಸ್ಥಳೀಯರು ಬೆಚ್ಚಿದ್ದಾರೆ, ಪರಿಸ್ಥಿತಿ ಎಲ್ಲಿಯವರೆಗೆ ಬೆಳೆೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೇ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪಾದಸ್ಪರ್ಶದಿಂದ ಪುನೀತ ವಾದ ಮಂಜಿನ ನಗರಿ ಮಡಿಕೇರಿಯಲ್ಲಿ, ಮಹಾತ್ಮನ ನೆನಪಿನ ಭವನದ ಬಗ್ಗೆ ಜನರ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದರೂ ಇಲ್ಲಿಯ ವರೆಗೆ ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ಮಹಾತ್ಮಾ ಗಾಂಧೀಜಿ 1930ರ ದಶಕದಲ್ಲಿ ಮಡಿಕೇರಿಗೆ ಭೇಟಿ ನೀಡಿ, ಈಗಿನ ಸಂತ ಮೈಕಲರ ಶಾಲೆಯ ಬಳಿಯ ಸಣ್ಣ ದಿಣ್ಣೆಯ ಮೇಲಿನ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ರಾಜಾಸೀಟಿನಲ್ಲಿ ಕೆಲ ಸಮಯವನ್ನು ಕಳೆದು ಹೋದದ್ದು ಕೊಡಗಿನ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಮಹತ್ವದ ಅಂಶ. ರಾಷ್ಟ್ರಪಿತನ ಪಾದಸ್ಪರ್ಶವಾದ ಸ್ಥಳದಲ್ಲಿ ಗಾಂಧಿ ಮಂಟಪ ವನ್ನು ಹಲವಾರು ದಶಗಳ ಹಿಂದೆ ನಿರ್ಮಿಸಲಾಗಿದ್ದು, ಇದರಲ್ಲಿನ ಗಾಂಧಿ ಪ್ರತಿಮೆಗೆ ಗಾಂಧಿ ಪುಣ್ಯ ತಿಥಿಯಂದು ಮಾಲಾರ್ಪಣೆ ಮಾಡಿ, ಸರ್ವಧರ್ಮ ಪ್ರಾರ್ಥನೆ ಮಾಡಿ ತೆರಳಿದರೆ ಅಲ್ಲಿಗೆ ವರ್ಷದ ಒಂದೇ ದಿನದ ಮಹಾತ್ಮನ ಸ್ಮರಣೆ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ. ಮತ್ತೆ ಮಹಾತ್ಮರ ಸ್ಮರಣೆ ಮುಂದಿನ ವರ್ಷ. ಅದೂ ಕೇವಲ ಮಹಾತ್ಮರ ಚಿತಾ ಭಸ್ಮದ ಮೆರವಣಿಗೆ, ಪ್ರಾರ್ಥನೆಗಳಿಗಷ್ಟೇ ಸೀಮಿತ. ಸಣ್ಣ ಕಾರ್ಯಕ್ರಮವಾದರೂ ಇದನ್ನು ಸರ್ವೋದಯ ಸಮಿತಿಯ ಸದಸ್ಯರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿಕೊಂಡು ನಡೆಸಿ ಕೊಂಡು ಬರುತ್ತಿದ್ದಾರೆ. – ಎಸ್.ಕೆ. ಲಕ್ಷ್ಮೀಶ್