Advertisement

ಸಂಕಷ್ಟದಲ್ಲಿದ್ದವರ ನೆರವಿಗಾಗಿ ಯೋಜನೆ ಜಾರಿ

11:19 AM Jul 14, 2020 | Suhan S |

ಮಂಡ್ಯ/ಮದ್ದೂರು: ಭಾರತದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಉದ್ದೇಶದಿಂದ ಸಮರೋಪಾದಿಯಲ್ಲಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆ ಜಾರಿಗೊಳಿಸಿದ್ದು, ಶಾಸಕರು ಹಾಗೂ ಜನಪ್ರತಿನಿಧಿಗಳು ಅರ್ಹ ಫ‌ಲಾನುಭಗಳಿಗೆ ತಲುಪಿಸಲು ಸಹಕಾರ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಡಾ. ಸಿದ್ದರಾಮಯ್ಯ ಮನವಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾವಲಂಬಿ ಭಾರತಕ್ಕಾಗಿ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ ಅತ್ಯಗತ್ಯ. ದೇಶದಲ್ಲಿ ಹಿಂದೆಂದೂ ಸೃಷ್ಟಿಯಾಗದ ಪರಿಸ್ಥಿತಿ ಹಿನ್ನೆಲೆಯಲ್ಲಿ 2020-21ರ ಅವಧಿಯಲ್ಲಿ ರಾಜ್ಯಗಳ ಸಾಲದ ಮಿತಿಯನ್ನು ಶೇ.3ರಿಂದ 5ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ರಾಜ್ಯಗಳಿಗೆ 4.28 ಲಕ್ಷ ಕೋಟಿ ರೂ. ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲಿದೆ ಎಂದು ಹೇಳಿದರು.

ಮೂಲ ಸೌಕರ್ಯಕ್ಕಾಗಿ ಹಣ ಬಿಡುಗಡೆ: 9ರಿಂದ 10 ಕೋಟಿ ವಲಸೆ ಕಾರ್ಮಿಕರಿದ್ದು, ಅವರ ಮೂಲ ಸೌಕರ್ಯಕ್ಕಾಗಿ 610 ಕೋಟಿ ಹಣವನ್ನು ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಿದೆ. 2 ತಿಂಗಳ ಕಾಲ ಅಕ್ಕಿ, ಬೇಳೆ ವಿತರಿಸಲಾಗಿದ್ದು, ಇದನ್ನು ನವೆಂಬರ್‌ ವರೆಗೂ 80 ಕೋಟಿ ಜನರಿಗೆ ವಿತರಿಸಲು ನಿರ್ಧರಿಸಲಾಗಿದೆ. ದೇಶದ ಶೇ.75ರಷ್ಟು ಜನತೆಗೆ ಈ ಯೋಜನೆ ಸಿಗಲಿದೆ. ಎಂಎಸ್‌ ಎಂಇಗಳ ಪುನಶ್ಚೇತನಕ್ಕಾಗಿ 5ರಿಂದ 100 ಕೋಟಿ ಸಾಲ ಸೌಲಭ್ಯದ ಮಿತಿ ಮಾಡಲಾಗಿದೆ. ಇದಕ್ಕಾಗಿ 11.29 ಸಾವಿರ ಕೋಟಿ ಮೀಸಲಿಡಲಾಗಿದೆ. 65 ಲಕ್ಷ ಯೂನಿಟ್‌ಗಳು ದೇಶದಲ್ಲಿವೆ. ಎಲ್ಲರಿಗೂ ವಸತಿ ಕಲ್ಪಿಸುವ ಉದ್ದೇಶದಿಂದ 3.20 ಲಕ್ಷ ಕೋಟಿ ಯೋಜನೆ ಘೋಷಿಸಲಾಗಿದೆ. ಬ್ಯಾಂಕ್‌ಗಳಿಗೆ 1 ಕೋಟಿ ರೂ.ವರೆಗೆ ಗ್ಯಾರಂಟಿ ನೀಡಬೇಕಾಗಿಲ್ಲ. ಈ ಯೋಜನೆಯಲ್ಲಿ 3.26 ಲಕ್ಷ ಕೋಟಿ ಹಣವನ್ನು 75 ಸಾವಿರ ಯೂನಿಟ್‌ಗೆ ವಿತರಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.

ಕೇಂದ್ರ ಸರ್ಕಾರಿ ನೌಕರರಿಗೆ ಶೇ.24ರಷ್ಟು ಕೊಡುಗೆ ನೀಡಲಾಗಿದೆ. ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧನೆಗೆ ಶೇ.74ರಷ್ಟು ಹೆಚ್ಚಳ ಮಾಡಲಾಗಿದೆ. ಸಣ್ಣಪುಟ್ಟ ಬ್ಯಾಂಕ್‌ಗಳು, ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳ ಪುನಶ್ಚೇತನಕ್ಕೆ 30 ಸಾವಿರ ಕೋಟಿ ನೀಡಲಾಗಿದೆ ಎಂದರು.

ವಿದ್ಯುತ್‌ ಕ್ಷೇತ್ರದಲ್ಲಿ ಕ್ರಾಂತಿ: ವಿದ್ಯುತ್‌ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗಿದೆ. ವಿದ್ಯುತ್‌ ವಿತರಣಾ ಕಂಪನಿಗಳಿಗೆ 90 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಏಷ್ಯಾದಲ್ಲೇ ಮೊದಲ ಬಾರಿಗೆ 700 ಎಕರೆ ಪ್ರದೇಶದಲ್ಲಿ 4500 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಪ್ರಮಾಣ ಹೈಡ್ರೋ ಥರ್ಮಲ್‌ ಘಟಕ ಸ್ಥಾಪನೆಗೆ ಚಾಲನೆ ನೀಡಿದ್ದು, 2023ಕ್ಕೆ ದೇಶ ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬಿ ಸಾಧಿಸಲಿದೆ ಎಂದರು.

Advertisement

ಕಿಸಾನ್‌ ಸಮ್ಮಾನ್‌ ಕಾರ್ಡ್‌ಗೆ 2 ಲಕ್ಷ ಕೋಟಿ ಸಾಲ ನೀಡಲು ನಿರ್ಧರಿಸಲಾಗಿದೆ. ಬೃಹತ್‌ ಕೈಗಾರಿಕೆಗೆ 14 ಲಕ್ಷ ಕೋಟಿ ಕಾಯ್ದಿರಿಸಲಾಗಿದೆ. ಕೋವಿಡ್‌-19 ಸಂಕಷ್ಟದ ಹಿನ್ನೆಲೆಯಲ್ಲಿ 6100 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಅನುದಾನ ನೀಡಲಾಗಿದೆ. ನರೇಗಾ ಕೂಲಿ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಿದ್ದು, ಕೂಲಿ ಹಣವನ್ನು 180ರಿಂದ 225 ರೂ.ಗೆ ಏರಿಸಲಾಗಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ಜಯಕುಮಾರ್‌, ನಗರಸಭೆ ಸದಸ್ಯ ಎಂ.ಪಿ. ಅರುಣ್‌ಕುಮಾರ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next