ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕೀಡ್ರಾ ಮತ್ತು ಸಾಂಸ್ಕೃತಿಕ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಂಡಳಿ ಅಧ್ಯಕ್ಷರಾದ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
ನಗರದ ಕನ್ನಡ ಭವನ ಆವರಣದಲ್ಲಿರುವ ಸುವರ್ಣ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೇಖಕ ಬನ್ನಪ್ಪ ಬಿ.ಕೆ. ರಚಿಸಿರುವ “ನೈತಿಕ ಶಿಕ್ಷಣ’ ಮತ್ತು “ಜೀವನ ಶಿಕ್ಷಣ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಅಂದಾಜು 50 ಎಕರೆ ಪ್ರದೇಶದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕೆಕೆಆರ್‌ಡಿಬಿ ಈ ಹಿಂದೆಯೂ ಸಾಹಿತಿಗಳಿಗೆ ನೆರವಾಗಿದೆ. ಈಗ ತಮ್ಮ ಅವಧಿಯಲ್ಲೂ ಸಾಹಿತಿಗಳು ಮತ್ತು ಹಿರಿಯರು ಯಾವುದಾದರೂ ಬೇಡಿಕೆ ಮತ್ತು ಪ್ರಸ್ತಾವ ಮುಂದಿಟ್ಟರೂ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂವಿಧಾನದ ವಿಶೇಷ ಕಲಂ 371ನೇ (ಜೆ)ಕಲಂ ಅಡಿ ಕಲ್ಯಾಣ ಕಲ್ಯಾಣ ಭಾಗದ ವಿದ್ಯಾರ್ಥಿಗಳಿಗೆ ಹಲವು ಉನ್ನತ ಕೋರ್ಸ್‌ಗಳಲ್ಲಿ ಸೀಟ್‌ಗಳು ಲಭ್ಯವಾಗುತ್ತಿವೆ. ಎಂಜನಿಯರಿಂಗ್, ಮೆಡಿಕಲ್, ಕೆಎಎಸ್‌ನಂತ ಸೀಟು ಪಡೆದ ವಿದ್ಯಾರ್ಥಿಗಳು ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಆದರೆ, ಅಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇರಲಿಲ್ಲ. ವಿದ್ಯಾರ್ಥಿಗಳ ವಸತಿ ಸಮಸ್ಯೆ ತಪ್ಪಿಸಲು ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ 60 ಕೋಟಿ ರೂ. ಖರ್ಚು ಮಾಡಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಉಪ ಸಭಾಪತಿ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ ಮಾತನಾಡಿ, ಸಾಹಿತಿ ಬನ್ನಪ್ಪ ದೊಡ್ಡ ಸಾಧಕರಾಗಿದ್ದಾರೆ. ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು ಎನ್ನುವುದಕ್ಕೆ ಅವರ ಸಾಧನೆಯೇ ನಿದರ್ಶನ ಎಂದು ಬಣ್ಣಿಸಿದರು.
ಇದನ್ನೂ ಓದಿ: ಡ್ರೋಣ್ ಮೂಲಕ ಕೀಟನಾಶಕ ಸಿಂಪರಣೆ
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ಬನ್ನಪ್ಪ ಮೌಲ್ಯಯುತವಾದ ಪುಸ್ತಕಗಳ ರಚನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. “ನೈತಿಕ ಶಿಕ್ಷಣ’, “ಜೀವನ ಶಿಕ್ಷಣ’ ಪುಸ್ತಕಗಳ 100 ಪ್ರತಿಗಳನ್ನು ನಮ್ಮ ಶಾಲೆಗಾಗಿ ಖರೀದಿಸಲಾಗುವುದು ಎಂದು ತಿಳಿಸಿದರು.
ಉಪನ್ಯಾಸಕ ಡಾ| ಆನಂದ ಸಿದ್ಧಾಮಣಿ ಪುಸ್ತಕಗಳ ಪರಿಚಯ ಮಾಡಿದರು. ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಸಿಂಡಿಕೇಟ್ ಮಾಜಿ ಸದಸ್ಯ ರಾಘವೇಂದ್ರ ಕುಲಕರ್ಣಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ಮಹಿಪಾಲರೆಡ್ಡಿ ಮುನ್ನೂರ, ಗಂಗಾಧರ, ಜಗನ್ನಾಥ ತರನಳ್ಳಿ ಪಾಲ್ಗೊಂಡಿದ್ದರು.
ಸಾಹಿತಿ ಬನ್ನಪ್ಪ ಬಿ.ಕೆ. ಈ ಹಿಂದೆ ನರೇಂದ್ರ ಮೋದಿ ಅವರ ಪುಸ್ತಕ ಬರೆಯುವಾಗ ಗುಜರಾತ್ ರಾಜ್ಯಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ, ಪುಸ್ತಕ ಬರೆದಿದ್ದರು. ಅವರ ಕೃತಿಗಳು ಅನುಭವ ಮತ್ತು ಪ್ರಾಮಾಣಿಕತೆ ಹಿನ್ನೆಲೆ ಒಳಗೊಂಡಿರುತ್ತವೆ. ಬನ್ನಪ್ಪ ಅವರಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ.
-ದತ್ತಾತ್ರೇಯ ಪಾಟೀಲ ರೇವೂರ, ಅಧ್ಯಕ್ಷ, ಕೆಕೆಆರ್‌ಡಿಬಿ