Advertisement

ಪ್ಲಾಸ್ಟಿಕ್ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಂಕಲ್ಪ

03:33 PM Sep 20, 2019 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕವಾಗಿ ಘನ ತ್ಯಾಜ್ಯವನ್ನು ವಿಲೇವಾರಿ ಮಾಡುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಪ್ಲಾಸ್ಟಿಕ್‌ನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಮೂಲಕ ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿಸಬೇಕೆಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಂಗಡಣೆ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಲು ಕಾಲಮಿತಿ ಯೊಳಗೆ ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲೆಯಲ್ಲಿ 50 ಸಾವಿರ ಟನ್‌ ಕಸ: ಜಿಲ್ಲೆಯಲ್ಲಿ 50 ಸಾವಿರ ಟನ್‌ ಕಸವಿದ್ದು, ಅದನ್ನು ಹಸಿ ಕಸ ಮತ್ತು ಒಣ ಕಸ ಎಂದು 35 ರೀತಿಯಲ್ಲಿ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಲು ಹೊಸ ರೀತಿಯಾದ ಯಂತ್ರೋಪಕರಣಗಳನ್ನು ಅಳವಡಿಸಬೇಕು. ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಸ ವಿಂಗಡಣೆ ಘಟಕಗಳನ್ನು ಶೀಘ್ರವಾಗಿ ಸ್ಥಾಪಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇದರಿಂದ ರೈತರಿಗೆ ರಸಗೊಬ್ಬರದ ವ್ಯವಸ್ಥೆ ಮಾಡಬಹುದು. ಜೊತೆಗೆ ಪರಿಸರ ಮಾಲಿನ್ಯ ತಡೆಯಬಹುದು ಎಂದರು.

ವೈಜ್ಞಾನಿಕ ಕ್ರಮ ಕೈಗೊಳ್ಳಿ: ಹಸಿ ಕಸ, ಒಣ ಕಸ ಮನೆಗಳಿಂದಲೇ ಸಂಗ್ರಹವಾಗಬೇಕು. ನಿಯಮಾವಳಿ ಗಳನ್ನು ಮೀರಿ ಕಸ ಹಾಕುವವರ ಮೇಲೆ ಕ್ರಮ ವಹಿಸ ಬೇಕು. ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪರಿಸರ ವೈಪರೀತ್ಯಗಳನ್ನು ಸರಿಪಡಿಸಲಿಕ್ಕೆ ಪರಿಸರ ಮತ್ತು ಜಲ ಮೂಲಗಳ ಸಂರಕ್ಷಣೆಗೆ ವೈಜ್ಞಾನಿಕವಾದ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂದರು. ಅಂತರ್ಜಲ ವೃದ್ಧಿಗೆ ಒತ್ತು ಕೊಡಿ:ಜಿಲ್ಲೆಯ ಸುತ್ತಮುತ್ತ ಇರುವ ಕಲ್ಯಾಣಿಗಳು, ಕೆರೆಗಳ ಸಂರಕ್ಷಣೆ ಮಾಡಬೇಕು. ಕಸ ವಿಂಗಡಣೆ ಕುರಿತ ಕಾರ್ಯ ಕ್ರಮಗಳನ್ನು ಆಯೋಜಿಸಿ ಜನರಿಗೆ ಶಾಲಾ, ಕಾಲೇಜು ಗಳಲ್ಲಿ ಅರಿವು ಮೂಡಿಸಬೇಕು ಎಂದರು.ಕಲ್ಲು ಗಣಿಗಾರಿಕೆ ಪ್ರದೇಶ ಮತ್ತು ಕೈಗಾರಿಕೆ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ತಿಳಿಯಲು ಸಂಚಾರಿ ಘಟಕದ ಮೂಲಕ ತಪಾಸಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಇಂಗು ಗುಂಡಿ ನಿರ್ಮಿಸಿ: ಬರಪೀಡಿತ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲವನ್ನು ವೃದ್ಧಿಸುವ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಗರ ಪ್ರದೇಶಗಳಲ್ಲಿ ಕೊರೆಯಲಾಗಿರುವ ಸಾರ್ವಜನಿಕ ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ಇಂಗು ಗುಂಡಿ ಗಳ ನಿರ್ಮಾಣ ಮಾಡಬೇಕು ಎಂದರು. ಮಳೆ ನೀರು ಕೊಯ್ಲು ಅಳವಡಿಕೆ, ಇಂಗು ಗುಂಡಿ ಗಳ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ ಹಾಗೂ ಕೆರೆಗಳಿಗೆ ಬೇಲಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ. ಅಂತರ್ಜಲ ವೃದ್ಧಿ ಮಾಡಲು ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಒಒ ಬಿ. ಫೌಜಿಯಾ ತರನ್ನುಮ್‌, ಅಪರ ಜಿಲ್ಲಾಧಿಕಾರಿ ಆರತಿ, ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ನಗರ ಯೋಜನಾ ಅಧಿಕಾರಿ ರೇಣುಕಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಧು

ಸೂದನ್‌, ಸಹಾಯಕ ಅಧಿಕಾರಿ ವಿಜಯ ಎಂ., ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್‌ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next