Advertisement

ನಿವೃತ್ತಿ ಜೀವನವನ್ನು ಪ್ಲ್ರಾನ್‌ ಮಾಡಿದ್ದೀರಾ?

08:59 PM Sep 01, 2019 | Sriram |

ವೃತ್ತಿಜೀವನವನ್ನು ಹೊಸದಾಗಿ ಆರಂಭಿಸಿದವರ ಪೈಕಿ ಪ್ರತಿಶತಃ ನಲವತ್ತರಷ್ಟು ಮಂದಿ ಮಾತ್ರ ನಿವೃತ್ತಿಯ ನಂತರದ ಹಣಕಾಸು ಯೋಜನೆಗಳ ಕುರಿತು ಗಂಭೀರವಾಗಿ ಆಲೋಚಿಸುತ್ತಾರೆ. ಉಳಿದವರಲ್ಲಿ ನಿವೃತ್ತಿಗಿನ್ನೂ ಬಹಳ ಸಮಯವಿದೆ ಎಂಬ ಉದಾಸೀನ ಭಾವವಿದೆ. ಹಣಕಾಸಿನ ವಿಚಾರದ ಮಟ್ಟಿಗೆ ಹೇಳುವುದಾದರೆ ಇದು ತೀರಾ ಅಪಾಯಕಾರಿ ಮನಸ್ಥಿತಿ.

Advertisement

ಅದೊಂದು ಕಾಲವಿತ್ತು. ಆಗೆಲ್ಲಾ, ಬಹುತೇಕ ಸರಕಾರಿ ಕೆಲಸಗಳಲ್ಲಿ ದುಡಿಯುತ್ತಿದ್ದ ಹಿರಿಯರಿಗೆ, ದೇಶದ ಆರ್ಥಿಕ ವೈಪರೀತ್ಯಗಳ ಪ್ರಭಾವವಿಲ್ಲದೇ ತಿಂಗಳ ಕೊನೆಗೆ ಸಂಬಳ ಕೈಗೆ ಸೇರಿಬಿಡುತ್ತಿತ್ತು. ಉದ್ಯೋಗದ ಸೇವಾವಧಿ ಮುಗಿದಾಕ್ಷಣ ಪಿಂಚಣಿಯ ವ್ಯವಸ್ಥೆಯೂ ಇತ್ತು. ಈ ಕಾರಣದಿಂದಲೇ, ಕೆಲಸ ಸಿಕ್ಕಾ ಕ್ಷಣ ಬದುಕಲ್ಲಿ ನೆಲೆ ಕಂಡುಕೊಂಡ ಭಾವ ಅವರದಾಗುತ್ತಿತ್ತು. ಆದರೆ ಖಾಸಗಿ ಕೆಲಸದಲ್ಲಿರುವವರಿಗೆ ನೆಲೆ ನಿಲ್ಲುವ ಮಾತು ಅನ್ವಯವಾಗದು. ಆರ್ಥಿಕ ಪರಿಸ್ಥಿತಿಯ ಏರುಪೇರಿಗೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಭಯ ಅವರಿಗೆ ಆಗಲೂ ಇತ್ತು, ಈಗಲೂ ಇದೆ. ಅತಿಯಾದ ಕೆಲಸದ ಒತ್ತಡದಿಂದಾಗಿ ಆರವತ್ತನೆಯ ವಯಸ್ಸಿನವರೆಗೆ ದುಡಿಯುವುದು ಸಹ ಕಷ್ಟಸಾಧ್ಯ. ಹೀಗಿರುವಾಗ, ನಿವೃತ್ತಿಯ ನಂತರದ ಬದುಕು ಹೇಗೆ? ಐವತ್ತರ ಹರೆಯಕ್ಕೆ ನಿವೃತ್ತರಾಗುವುದಾದರೆ ಮುಂದಿನ ಬದುಕಿನಲ್ಲೊಂದು ನೆಮ್ಮದಿಯ ಆದಾಯಕ್ಕಾಗಿ ಮಾಡಬಹುದಾದ ಹಣಕಾಸಿನ ಯೋಜನೆಗಳು ಯಾವುವು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನವಿದು.

ಇಂದೇ ಪ್ಲ್ರಾನ್‌ ಮಾಡಿ
ನಿಮ್ಮ ಅದಾಯ ಗಳಿಕೆಯ ಶುರುವಾದ ದಿನದಿಂದಲೇ ನಿವೃತ್ತಿಯ ನಿಧಿಯ ಕುರಿತಾಗಿಯೂ ಯೋಚಿಸಬೇಕು. ಆದರೆ ವಯಸ್ಸಿನ ಬಿಸಿಯಲ್ಲಿನ ಯುವಕರಿಗೆ ವೇದ್ಯವಾಗದ ಮಾತಿದು. ಕಳೆದ ವರ್ಷ ಬಿರ್ಲಾ ಸನ್‌ ಲೈಫ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ವೃತ್ತಿಜೀವನವನ್ನು ಹೊಸದಾಗಿ ಆರಂಭಿಸಿದವರ ಪೈಕಿ ಪ್ರತಿಶತಃ ನಲವತ್ತರಷ್ಟು ಜನ ಮಾತ್ರ ನಿವೃತ್ತಿಯ ನಂತರದ ಹಣಕಾಸಿನ ಯೋಜನೆಗಳ ಕುರಿತು ಗಂಭೀರವಾಗಿ ಆಲೋಚಿಸುತ್ತಾರೆಂದು ತಿಳಿದುಬಂದಿದೆ. ಉಳಿದವರಲ್ಲಿ ಬಹುತೇಕರದು ನಿವೃತ್ತಿಗಿನ್ನೂ ಬಹಳ ಸಮಯವಿದೆ ಎಂಬ ಉದಾಸೀನ ಭಾವ. ಹಣಕಾಸಿನ ವಿಚಾರದ ಮಟ್ಟಿಗೆ ಹೇಳುವುದಾದರೆ ಅದು ತೀರಾ ಅಪಾಯಕಾರಿ ಮನಸ್ಥಿತಿ. ಮುಖ್ಯವಾಗಿ, ಇಂದಿನ ಪರಿಸ್ಥಿತಿಯಲ್ಲಿ ತಾನೆಷ್ಟು ವರ್ಷಗಳ ಕಾಲ ದುಡಿಯಲಿದ್ದೇನೆ ಮತ್ತು ದುಡಿಮೆ ಮುಗಿದ ಮರುದಿನದಿಂದ ಸಂತೃಪ್ತ ಬದುಕಿಗಾಗಿ ತನಗೆ ಬೇಕಾಗಬಹುದಾದ ಆದಾಯದ ಕುರಿತಾಗಿ ಸಣ್ಣದ್ದೊಂದು ಲೆಕ್ಕಾಚಾರವನ್ನು ಇಂದಿನ ಜನಾಂಗ ಮಾಡಿಟ್ಟುಕೊಳ್ಳುವುದು ಅನಿವಾರ್ಯ.

ವಿನಾಯಿತಿಗಳ ಪ್ರಯೋಜನ ಪಡೆದುಕೊಳ್ಳಿ
ಖಾಸಗಿ ಕಂಪನಿಯ ಉದ್ಯೋಗಿಗಳು ಪಿಎಫ್ ಯೋಜನೆಗಳ ಲಾಭ ಪಡೆದುಕೊಳ್ಳುವುದು ಒಳಿತು. ಕಂಪನಿಯಿಂದ ಇರಬಹುದಾದ ಪಿಎಫ್ ಯೋಜನೆಯ ಹೊರತಾಗಿಯೂ ಪಿಪಿಎಫ್ ಎಂಬ ಯೋಜನೆಯಡಿ ಹೂಡುವ ಹಣ ಖಂಡಿತವಾಗಿಯೂ ನಿವೃತ್ತಿಯ ಬದುಕಿನ ಉಳಿತಾಯಕ್ಕೆ ಒಳ್ಳೆಯ ಯೋಜನೆ. ವಾರ್ಷಿಕ ಐನೂರರಿಂದ ಒಂದೂವರೆ ಲಕ್ಷದವರೆಗೆ ಹಣವನ್ನು ಹೂಡಬಹುದಾದ ಈ ಯೋಜನೆಯಲ್ಲಿನ ಹೂಡಿಕೆಗೆ ಆದಾಯ ತೆರಿಗೆಯಡಿಯಲ್ಲಿಯೂ ವಿನಾಯತಿಯಿದೆ ಎನ್ನುವುದು ಗಮನಾರ್ಹ. ಕನಿಷ್ಟ ಹದಿನೈದು ವರ್ಷಗಳ ಹೂಡಿಕೆ ಅವಧಿಯ ಯೋಜನೆಯಡಿ ಸಾಲದ ಸೌಲಭ್ಯ, ಭಾಗಶಃ ಹಿಂಪಡೆಯುವಿಕೆಯಂಥ ಸೌಲಭ್ಯ ಇರುವುದರಿಂದ ಇದು ಅತ್ಯಂತ ಸೂಕ್ತ ನಿವೃತ್ತಿ ನಿಧಿ ಯೋಜನೆಗಳಲ್ಲೊಂದು ಎಂದರೆ ತಪ್ಪಾಗಲಾರದು. ಇದರ ಹೊರತಾಗಿ ವಿಮಾ ಕಂಪನಿಗಳ ಪಿಂಚಣಿ ಯೋಜನೆಗಳ ಕುರಿತು ಯೋಚಿಸಬಹುದು. ಸಾಮಾನ್ಯವಾಗಿ, ದೀರ್ಘಾವಧಿಯ ಜೀವ ವಿಮೆಯ ಯೋಜನೆಯನ್ನು ಕೂಡಿಕೊಂಡೇ ಬರುವುದರಿಂದ ಪಿಂಚಣಿ ವಿಮೆ ಎರಡು ಬಗೆಯ ಲಾಭಗಳನ್ನು ಹೂಡಿಕೆದಾರರಿಗೆ ಕೊಡಬಲ್ಲವು. ಅವಧಿಯುದ್ದಕ್ಕೂ ವಿಮಾ ರಕ್ಷಣೆಯನ್ನು ಕೊಡುವ ಈ ಯೋಜನೆಗಳು ಅವಧಿಯ ನಂತರ ನಿಗದಿತ ಮೊತ್ತದ ಪಿಂಚಣಿಯನ್ನು ಬದುಕಿನ ಕೊನೆಯವರೆಗೂ ನೀಡುತ್ತವೆ ಎನ್ನುವುದು ಗಮನಾರ್ಹ.

ಒಂದು ಮಾತು ನೆನಪಿರಲಿ. ಭವಿಷ್ಯತ್ತಿಗಾಗಿ ನಿಧಿಯ ಹೂಡಿಕೆಯೆನ್ನುವುದು ಯಾವತ್ತಿಗೂ ಒಂದೇ ಬುಟ್ಟಿಯ ಹಣ್ಣಿನಂತಾಗಬಾರದು. ಉಳಿತಾಯಕ್ಕೆಂದು ತೆಗೆದಿಡಬಹುದಾದ ಮೊತ್ತವನ್ನು ಹಲವು ಭಾಗಗಳನ್ನಾಗಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ ಪ್ರಕಾರದ ಉಳಿತಾಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಯಾವುದಾದರೊಂದು ಯೋಜನೆ ತಕ್ಷಣಕ್ಕೆ ಹೆಚ್ಚಿನ ಲಾಭ ತಂದುಕೊಟ್ಟಿತೆನ್ನುವ ಕಾರಣಕ್ಕೆ ಉಳಿಸಬಹುದಾದ ಅಷ್ಟೂ ಹಣವನ್ನು ಅಂಥ ಯೋಜನೆಯಡಿ ತೊಡಗಿಸಿಬಿಡುವುದು ತೀರಾ ಅಪಾಯಕಾರಿಯಾಗಬಲ್ಲದು. ನಿವೃತ್ತಿಯ ನಂತರದ ಬದುಕಿನ ಕುರಿತು ನಿವೃತ್ತಿಪೂರ್ವ ಇಪ್ಪತ್ತು ವರ್ಷಗಳ ಮೊದಲೇ ಯೋಚಿಸಲಾರಂಭಿಸಿ. ಇಲ್ಲವಾದರೆ ಹಣವಿಲ್ಲದ ಕೊನೆಗಾಲದ ಬದುಕು ದುಸ್ತರವಾದೀತು, ಎಚ್ಚರ.

Advertisement

ದೀರ್ಘಾವಧಿ ಯೋಜನೆ ಚೆನ್ನ
ಕಡಿಮೆಯೆಂದರೂ ಬಾಕಿಯಿರುವ ನಿಮ್ಮ ವೃತ್ತಿಜೀವನದ ಕಾಲಾವಧಿಯಷ್ಟು ಉಳಿತಾಯವನ್ನು ಉದ್ಯೋಗಿಯೊಬ್ಬ ಮಾಡಬೇಕು ಎನ್ನುವ ತರ್ಕವೊಂದಿದೆ. ವೃತ್ತಿಜೀವನವನ್ನಾರಂಭಿಸಿ ಮೂವತ್ತು ವರ್ಷಗಳ ಕಾಲ ದುಡಿಯುವ ಇಚ್ಛೆ ನಿಮಗಿದ್ದರೆ ಆದಾಯದ ಕನಿಷ್ಠ ಮೂವತ್ತು ಪರ್ಸೆಂಟಿನಷ್ಟು ಉಳಿತಾಯದೊಂದಿಗೆ ಬದುಕಿನ ಲೆಕ್ಕಾಚಾರವನ್ನು ಆರಂಭಿಸಬೇಕು ಎನ್ನುವುದು ಮಾತಿನ ತಾತ್ಪರ್ಯ. ಮಾಡುವ ಹೆಚ್ಚಿನ ಉಳಿತಾಯ ಯೋಜನೆಗಳು ದೀರ್ಘಾವಧಿ ಯೋಜನೆಗಳಾಗಿದ್ದರೆ ಚೆನ್ನ. ಅಲ್ಪಾವಧಿಯ ಯೋಜನೆಗಳಲ್ಲಿ ಹೂಡಿಕೆಯಿದ್ದರೂ ಸಾಧ್ಯವಾದಷ್ಟು ಕಡಿಮೆಯಿದ್ದರೆ ಒಳ್ಳೆಯದು. ಅಲ್ಪಾವಧಿಯ ಅವಧಿಗಳಲ್ಲಿ ಹೂಡಿಕೆ ಮತ್ತು ಮರಳಿ ಪಡೆಯುವ ಲಾಭದ ಅನುಪಾತ ದೀರ್ಘಾವಧಿಯ ಹೂಡಿಕೆಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆ. ಹಾಗಾಗಿ ಅಲ್ಪಾವಧಿಯ ಹೂಡಿಕೆಯ ಯೋಜನೆಗಳು ನಿಮ್ಮ ನಿವೃತ್ತಿಯ ನಿಧಿಗೆ ಹೆಚ್ಚಿನ ಸಹಾಯ ಮಾಡಲಾರವು.

ಕಡಿಮೆ ಲಾಭವಾದರೂ, ಖಚಿತವಾದುದು
ದೀರ್ಘ‌ ಕಾಲದವರೆಗಿನ ಕಂತುಗಳನ್ನು ಕಟ್ಟುವ ಯೋಜನೆಗಳು ಕಿರಿಕಿರಿ ಎಂದೆನ್ನಿಸಿದರೆ ಕೊಂಚ ದೊಡ್ಡ ಮೊತ್ತದ ಹಣವನ್ನು ತಕ್ಷಣಕ್ಕೆ ಕಟ್ಟಿ, ನಿವೃತ್ತಿಯ ಕಾಲಕ್ಕೆ ಪಿಂಚಣಿ ಪಡೆದುಕೊಳ್ಳುವ ಎಲ್ಲೆ„ಸಿಯ ಜೀವನ್‌ ಶಾಂತಿಯಂಥ ಯೋಜನೆಗಳು ಸಹ ಮೂವತ್ತು ವರ್ಷದ ಮೇಲಿನ ವಯಸ್ಸಿನವರಿಗೆ ಲಭ್ಯ ಇವೆ. ಉಳಿದ ಯೋಜನೆಗಳಿಗೆ ಹೋಲಿಸಿದರೆ ಹಿಂಪಡೆಯುವ ಬಡ್ಡಿದರ ಕೊಂಚ ಕಡಿಮೆಯೆನ್ನಿಸಿದರೂ, 20- 30 ವರ್ಷಗಳ ನಂತರ ನೀವು ಪಡೆಯಲಿರುವ ಪಿಂಚಣಿಯ ಮೊತ್ತವನ್ನು ಇಂದೇ ಕರಾರಿನಲ್ಲಿ ನಮೂದಿಸಿಬಿಡುವುದರಿಂದ ಇಂಥ ಯೋಜನೆಗಳು ಸುರಕ್ಷಿತ ಯೋಜನೆಗಳು. ಉಳಿದಂತೆ ಈಕ್ವಿಟಿ ಸಂಪರ್ಕಿತ ಉಳಿತಾಯ ಯೋಜನೆಗಳು, ಭೂಮಿಯ ಮೇಲಿನ ಹೂಡಿಕೆ, ಮ್ಯೂಚುವಲ್‌ ಫ‌ಂಡ್‌ಗಳ ಹಲವು ಯೋಜನೆಗಳು ಹೆಚ್ಚಿನ ಲಾಭ ನೀಡುತ್ತವೆ ಎನ್ನುವುದು ತಜ್ಞರ ಅಭಿಮತ. ಅಷ್ಟಾಗಿಯೂ, ಈ ಯೋಜನೆಗಳಲ್ಲಿನ ಹೂಡಿಕೆ ಮಾರುಕಟ್ಟೆಯ ಏರುಪೇರಿನ ಮೇಲೆ ಅವಲಂಬಿತವಾಗಿರುವುದರಿಂದ ಖಚಿತ ಆದಾಯಕ್ಕೆ ಇವುಗಳನ್ನು ನೆಚ್ಚಿಕೊಳ್ಳಲಾಗದು.

– ಗುರುರಾಜ ಕೊಡ್ಕಣಿ, ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next