ಬೆಂಗಳೂರು: ಮಹಾರಾಷ್ಟ್ರ ಮೂಲದ ಏರ್‌ಫೋರ್ಸ್ ಕಮಾಂಡರ್ ಸ್ನೇಹಾ ಕುಲಕರ್ಣಿ ಹಾಗೂ ಕಮಾಂಡರ್ ರವೀಶ್ ಕುಲಕರ್ಣಿ ದಂಪತಿ ಸಾರಂಗ್ ತಂಡದ ವಿಂಗ್ ಕಮಾಂಡರ್‌ಗಳಾಗಿರುವುದು ಮತ್ತೂಂದು ವಿಶೇಷ. ಏರ್ ಶೋನಲ್ಲಿ ಒಟ್ಟಿಗೆ ಯುದ್ಧ ವಿಮಾನವನ್ನು ಬಾನಂಗಳಕ್ಕೆ ಹಾರಿಸಿ ಹೃದಯಾಕಾರದ ಆಕೃತಿ ಮೂಡಿಸಲಿರುವುದು ಈ ದಂಪತಿಯ ಚಾಕಚಕ್ಯತೆಗೆ ಸಾಕ್ಷಿಯಾಗಲಿದೆ. ಉಳಿದಂತೆ ಈ ತಂಡದಲ್ಲಿ ಮೂರು ಮಹಿಳೆಯರು ಕಮಾಂಡರ್‌ಗಳಿದ್ದಾರೆ.
ತಾಲೀಮಿನ ನಂತರ ಮಾತನಾಡಿದ ಕಮಾಂಡರ್ ಸ್ನೇಹ ಕುಲಕರ್ಣಿ ಅವರು, ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಕುರಿತು ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಮುಖ್ಯವಾಗಿ ಇತರೆ ಸೇನೆ ವಿಭಾಗಗಳಿಗಿಂತ ಏರ್‌ಫೋರ್ಸ್‌ನಂತಹ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೇವೆ ಸಲ್ಲಿಸಲು ಆನಂತರ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ ಎಂದರು.
ಉಳಿದಂತೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸೇವೆ ನೀಡುತ್ತಿದ್ದು, ರಕ್ಷಣಾ ಕ್ಷೇತ್ರಕ್ಕೂ ಅಧಿಕ ಸಂಖ್ಯೆಯಲ್ಲಿ ಬರಬೇಕು. ಇಲ್ಲಿ ಹೆಚ್ಚಿನ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕಿದೆ. 2019ರ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ಸಂತೋಷವಾಗುತ್ತಿದೆ ಎಂದರು.
ಸ್ವೀಡನ್‌ನಿಂದ ಬಂದ ಗ್ರಿಪೆನ್: ಸ್ವೀಡನ್ ತಯಾರಿಸಿರುವ ಗ್ರಿಪೆನ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿದ್ದು, ಬಹಳ ಆಕರ್ಷಣೀಯವಾಗಿದೆ. ಈ ಯುದ್ಧ ವಿಮಾನ 15.2 ಮೀ. ಉದ್ದವಿದ್ದು, ಇದರ ಎರಡು ರೆಕ್ಕೆಗಳು 8.6 ಮೀ ಇವೆ. ಒಂದು ಇಂಜಿನ್ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 16,500 ಕೆ.ಜಿ ತೂಕವನ್ನು ಒತ್ತೂಯ್ಯಬಲ್ಲದು. ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಗಂಟೆಗೆ 2,500 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಲಿದೆ.
ನಾಲ್ಕು ರಫೇಲ್ ಯುದ್ಧ ವಿಮಾನ: ಈ ಬಾರಿ ನಾಲ್ಕು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಯಲಹಂಕ ವಾಯು ನಲೆಗೆ ಕಳೆದ ಗುರುವಾರ ಬಂದಿಳಿದಿವೆ. ಇವುಗಳಲ್ಲಿ ಮೂರು ವಿಮಾನಗಳು ತಾಲೀಮು ಪ್ರದರ್ಶನ ನಡೆಸಿದರೆ, ಒಂದು ವಿಮಾನ ಸಾರ್ವಜನಿಕರ ವೀಕ್ಷಣೆಗೆಂದು ಇರಿಸಲಾಗಿದೆ. ಈ ವಿಮಾನಗಳು ಚಕ್ರದಂತೆ ತಿರುಗುಗಿ ವೇಗವಾಗಿ ಬಾನೆತ್ತರಕ್ಕೆ ಹಾರುತ್ತಾ ತಾಲೀಮು ನಡೆಸಿದವು. ಇನ್ನು ಖರೀದಿ ಹಗರಣದ ಆರೋಪ ಹಿನ್ನೆಲೆ ದೇಶದಾದ್ಯಂತ ಸುದ್ದಿಯಲ್ಲಿರುವ ಈ ವಿಮಾನಗಳ ಹಾರಾಟ ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ.
ಆನ್‌ಲೈನಲ್ಲಿ ಟಿಕೆಟ್ ಲಭ್ಯ: ಈ ಬಾರಿಯ ಏರ್ ಶೋಗೆ ಈಗಾಗಲೇ ಆನ್‌ಲೈನ್ ಟಿಕೆಟ್ ಲಭ್ಯವಿವೆ. ಸಾರ್ವಜನಿಕರ ಪ್ರವೇಶ ಟಿಕೆಟ್‌ಗೆ 600 ರೂ. ನಿಗದಿಪಡಿಸಲಾಗಿದೆ. ಏರ್‌ಶೋಗೆ ತೆರಳಬಯಸುವವರು ಮೊದಲು ಏರೊ ಇಂಡಿಯಾ ವೆಬ್‌ಸೈಟ್‌ನ ವಿಜಿಟರ್ ಝೊನ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಪ್ರತ್ಯೇಕ ಬಾರ್‌ಕೋಡ್ ಪಡೆದುಕೊಳ್ಳಬೇಕು.
ನಂತರ ಬಾರ್‌ಕೋಡ್ ಜತೆಗೆ ಗುರುತಿನ ಚೀಟಿ ದಾಖಲೆಯೊಂದಿಗೆ ಏರ್‌ಶೋ ಪ್ರವೇಶಕ್ಕೆ ಟಿಕೆಟ್ ಪಡೆದುಕೊಳ್ಳಬೇಕು. ಕಳೆದ ಅವದಿಯಲ್ಲಿ ನಡೆದ ವೈಮಾನಿಕ ಪ್ರದರ್ಶನಕ್ಕೆ ಸುಮಾರು ಐದು ಲಕ್ಷ ಜನ ಆಗಮಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಪ್ರದರ್ಶನಕ್ಕೆ ಏಳು ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ.