ಜಕಾರ್ತಾ / ಹೊಸದಿಲ್ಲಿ: ಇಂಡೋನೇಷ್ಯಾದ ಲಯನ್ ಏರ್ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದ ಪರಿಣಾಮ ಭಾರತದ ಪೈಲಟ್ ಭವ್ಯೇ ಸುನೇಜಾ ಸಹಿತ 188 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ ಪಂಗ್‌ಕಲ್ ಪಿನಾಂಗ್ ದ್ವೀಪಕ್ಕೆ ಹೊರಟ 13 ನಿಮಿಷಗಳಲ್ಲಿ ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡು ವಿಮಾನ ಅದೃಶ್ಯವಾಗಿತ್ತು.
ಸೋಮವಾರ ಬೆಳಗ್ಗೆ ಭಾರತೀಯ ಕಾಲಮಾನ 6.20ರ ಸುಮಾರಿಗೆ ಘಟನೆ ಸಂಭವಿಸಿದೆ. ಲಯನ್ ಏರ್ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ ಅಪಘಾತಕ್ಕೀಡಾದ ವಿಮಾನ. ಮೊದಲ ಬಾರಿಗೆ ಈ ಮಾದರಿಯ ವಿಮಾನ ಪತನವಾಗಿದೆ.
ಸಮುದ್ರಕ್ಕೆ ವಿಮಾನ ಅಪ್ಪಳಿಸಿ ಸುಮಾರು 30-40 ಮೀಟರ್ ಆಳಕ್ಕೆ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಐವರು ಸಿಬಂದಿ, ಇಬ್ಬರು ಪೈಲಟ್‌ಗಳು, 178 ಮಂದಿ ಪ್ರಯಾಣಿಕರು, ಒಂದು ಮಗು, ಎರಡು ಶಿಶುಗಳು ಇದ್ದವು ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ದೇಶಕ ಸಿಂಧು ರಹಾಯು ತಿಳಿಸಿದ್ದಾರೆ. ರಾಡಾರ್ ಸಂಪರ್ಕ ಕಡಿತ ಗೊಳ್ಳುವ ಮುನ್ನವೇ ಅದನ್ನು ಏರ್‌ಪೋರ್ಟ್‌ಗೆ ವಾಪಸಾಗುವಂತೆ ಸೂಚಿಸಲಾಗಿತ್ತು. ರಾಡಾರ್ ಪ್ರಕಾರ ಟೇಕ್ ಆಫ್ ಆಗಿ ದಕ್ಷಿಣಕ್ಕೆ ತಿರುಗಿ ಉತ್ತರದತ್ತ ಹೊರಳಿಕೊಳ್ಳುತ್ತಿರುವಂತೆಯೇ ವಿಮಾನ ಕಣ್ಮರೆಯಾಯಿತು ಎಂದು ತಿಳಿಸಿದ್ದಾರೆ.
ಪತನಕ್ಕೆ ಕಾರಣ ತಿಳಿದಿಲ್ಲ. ಜಾವಾ ಸಮುದ್ರ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಮುಂದು ವರಿದಿದೆ. ಸ್ಮಾರ್ಟ್ ಫೋನ್‌ಬಿಡಿಭಾಗಗಳು, ಪುಸ್ತಕ, ಬ್ಯಾಗ್‌ತೇಲುತ್ತಿರುವುದು ಕಂಡಿವೆ.
ದಿಲ್ಲಿಯ ಪೈಲಟ್
ದುರಂತದಲ್ಲಿ ಅಸುನೀಗಿ ರುವ ಪೈಲಟ್ ಸುನೇಜಾ (31) ದಿಲ್ಲಿಯವರು. 2 ವರ್ಷಗಳ ಹಿಂದೆ ಮದುವೆಯಾಗಿದ್ದರು. 2 ದಿನಗಳ ಹಿಂದಷ್ಟೇ ಕರ್ವಾ ಚೌತ್ ದಿನದಂದು ಪತಿ ಸುನೇಜಾ ಜತೆ ಸಂತಸದಿಂದ ಕಳೆದಿದ್ದರು ಪತ್ನಿ ಗರೀಮಾ ತ್ರಿಪಾಠಿ. ನ.5ರಂದು ಭವ್ಯೇ ಸುನೇಜಾ ದಿಲ್ಲಿಗೆ ಹಿಂದಿರುಗುವವರಿದ್ದರು.