ಅಜೆಕಾರು: ಅಜೆಕಾರು ಎಣ್ಣೆಹೊಳೆ ಸ್ವರ್ಣಾನದಿ ಏತ ನೀರಾವರಿ ಯೋಜನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಬೃಹತ್ ಏತ ನೀರಾವರಿ ಯೋಜನೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು 108 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಾವರಿ ಯೋಜನೆಯ ಅಣೆಕಟ್ಟುವಿಗೆ ರವಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಎಣ್ಣೆಹೊಳೆಯಲ್ಲಿ 125 ಮೀ. ಉದ್ದದ 3ಮಿ. ಎತ್ತರದ ಬ್ಯಾರೇಜ್ ಕಟ್ಟಿ ನೀರು ಸಂಗ್ರಹಿಸಿ ಬೃಹತ್ ಪಂಪುಗಳ ಮೂಲಕ ಚೆಕ್ ಡ್ಯಾಂಗಳಿಗೆ ನೀರು ಹಾಯಿಸಿ ಕೃಷಿಕರ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಕಳ ಪುರಸಭೆ ವ್ಯಾಪ್ತಿಯ ರಾಮಸಮುದ್ರ, ಆನೆಕೆರೆಗಳಿಗೂ ಜಲ ಮರುಪೂರಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.
ನೀರಾವರಿ ಯೋಜನೆ ಜತೆಗೆ ಎಣ್ಣೆಹೊಳೆಯಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಮರ್ಣೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಕುಮಾರ್, ಹಿರ್ಗಾನ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಜಿ.ಪಂ. ಸದಸ್ಯ ಉದಯ ಕೋಟ್ಯಾನ್, ಜ್ಯೋತಿ ಹರೀಶ್, ರೇಷ್ಮಾ, ವಾರಾಹಿ ಯೋಜನೆಯ ಕಾರ್ಯ ಪಾಲಕ ಎಂಜಿನಿಯರ್ ಪ್ರವೀಣ್, ಎಂಜಿನಿಯರ್ ಪ್ರಸನ್ನ, ಉದ್ಯಮಿ ಶಿವರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.