Advertisement
ಕೋಣೆನಾಲಾ ಕೊಳಚೆ ನೀರು ಹರಿವ ನಗರದ ಮುಖ್ಯ ಕಾಲುವೆಯಾಗಿದ್ದು, ಅದು ಲಂಡನ್ ಬ್ರಿಜ್ ಬಳಿ ದೊಡ್ಡ ಕಾಲುವೆ ಮೂಲಕ ನೇರ ಅರಬ್ಬಿ ಸಮುದ್ರ ಸೇರುತ್ತಿತ್ತು. ಇದರಿಂದಾಗಿ ಸಮುದ್ರದ ಜಲಚರಗಳ ಮೇಲೆ ದುಷ್ಪರಿಣಾಮದ ಸಾಧ್ಯತೆಗಳಿವೆ ಎಂದು ಕಡಲಜೀವಿ ವಿಜ್ಞಾನಿಗಳು ಆತಂಕವ್ಯಕ್ತಪಡಿಸಿದ್ದರು. ಹೀಗಾಗಿ ಈ ನೀರನ್ನು ಶುದ್ಧಗೊಳಿಸಿ ಗಾರ್ಡನ್‌ಗಳಲ್ಲಿರುವ ಗಿಡ ಮರಗಳಿಗೆ ಉಣಿಸಲು ಮುಂದಾಗಲಾಗಿದೆ.
Related Articles
ಕಳೆದ ಅನೇಕ ವರ್ಷಗಳಿಂದ ಕೊಳಚೆ ನೀರು ಸಮುದ್ರ ಸೇರುತ್ತಿರುವ ವಿಷಯ ಹಸಿರು ನ್ಯಾಯಪೀಠ ಹಾಗೂ ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್ ತನಕ ತಲುಪಿದ್ದವು. ಕಾರವಾರ ಕೊಳಚೆ ನಗರ ಎಂಬ ಕುಖ್ಯಾತಿಗೆ ಎನ್‌ಜಿಟಿ ದಂಡ ಸಹ ವಿಧಿ ಸಿತ್ತು. ಕಸ ಸಂಗ್ರಹಣೆ ಮತ್ತು ಸುಸಜ್ಜಿತ ನಿರ್ವಹಣೆಗೆ ಶಿರವಾಡದಲ್ಲಿ ಘನತ್ಯಾಜ್ಯ ಘಟಕ ಹೊಂದಿದ್ದರೂ ಸಹ ಕೋಣೆನಾಲಾ ನಗರಸಭೆಗೆ ದೊಡ್ಡ ಶಾಪವಾಗಿ ಪರಿಣಮಿಸಿತ್ತು.
Advertisement
ಕೈಗೂಡದ ಹಲವು ಪ್ರಯತ್ನತ್ಯಾಜ್ಯ ನೀರು ಭೂಮಿಯನ್ನು ಸೇರದಂತೆ ಕೋಣೆನಾಲಾ ಕಾಲುವೆಗೆ 18 ವರ್ಷಗಳ ಹಿಂದೆ ಟೈಲ್ಸ್ ಅಳವಡಿಸಲಾಗಿತ್ತು. ತ್ಯಾಜ್ಯ ನೀರಿನಿಂದ ಸಂಗ್ರಹವಾಗುವ ಹೂಳನ್ನು ಗೊಬ್ಬರವಾಗಿ ಪರಿವರ್ತಿಸುವ ಕಾರ್ಯ ಸಹ ಒಂದು ವರ್ಷ ಜಾರಿಯಲ್ಲಿತ್ತು. ಆದರೆ ಈ ಯೋಜನೆಯಲ್ಲಿ ನಿರ್ಣಾಯಕ ಫಲಿತಾಂಶ ಬರಲಿಲ್ಲ. ಹೀಗಾಗಿ ಕೋಣೆನಾಲಾ ಕೊಳಚೆ ನೀರು ಸಮಸ್ಯೆ ಹಾಗೇ ಉಳಿದುಕೊಂಡಿತ್ತು. 18 ವರ್ಷಗಳ ನಂತರ ಕೋಣೆನಾಲಾ ಕೊಳಚೆ ಕಾಲುವೆಯ ಪುನರ್ ನಿರ್ಮಾಣ ಹಾಗೂ ಅದಕ್ಕೆ ಸ್ಲ್ಯಾಬ್ ಹಾಕುವುದು ಸೇರಿದಂತೆ ಕೊಳಚೆ ನೀರು ಶುದ್ಧಿಗೆ ಹಲವು ಪ್ರಸಿದ್ಧ ಕಂಪನಿಗಳಿಂದ ಮಾರ್ಗದರ್ಶನವನ್ನು ಸಹ ನಗರಸಭೆ ಪಡೆದಕೊಂಡಿತ್ತು. ಯೋಜನೆಗೆ 100 ಕೋಟಿ ಖರ್ಚಾದರೂ ಅಡ್ಡಿಯಿಲ್ಲ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಹಣ ತರಬೇಕು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಕೊರೊನಾ ಸಾಂಕ್ರಾಮಿಕದ ಎರಡು ವರ್ಷದಲ್ಲಿ ಈ ಸಮಸ್ಯೆ ಹಾಗೆ ಉಳಿದು ಹೋಯಿತು. ಇದೀಗ ಕೋಣೆನಾಲಾ ನಿರ್ವಹಣೆ ವಿಷಯ ಮುನ್ನೆಲೆಗೆ ಬಂದಿದೆ. ಕೊಣೆನಾಲಾದ ಕೊಳಚೆ ನೀರು ಸಮುದ್ರಕ್ಕೆ ಸೇರದಂತೆ ನೋಡಿಕೊಳ್ಳಿ ಎಂದು ಪರಿಸರ ಸಂಬಂಧ ನ್ಯಾಯಾಲಯಗಳು ಸೂಚಿಸುವ ಹಂತಕ್ಕೆ ಸಮಸ್ಯೆ ಬೃಹದಾಕಾರವಾಗಿ ಬೆಳೆದಿತ್ತು. ಇದನ್ನು ಮನಗಂಡ ನಗರಸಭೆ ಸಮುದ್ರಕ್ಕೆ ಕೊಳಚೆ ನೀರು ಸೇರುವ ಜಾಗದಲ್ಲಿ ಪ್ಲಾಂಟ್ ಹಾಕಲು ಮುಂದಾಗಿ, ಶುದ್ಧೀಕರಿಸಿದ ನೀರನ್ನು ಕಡಲತೀರದ ಗಾರ್ಡನ್ ಗಿಡಗಳಿಗೆ ಬಳಸಲು ಯೋಜನೆ ರೂಪಿಸಿದೆ. ಯೋಜನೆ ಇನ್ನೇನು ಒಂದು ತಿಂಗಳೊಳಗೆ ಅನುಷ್ಠಾನವೂ ಆಗಲಿದೆ. ಇದು ಯಶಸ್ವಿಯಾದಲ್ಲಿ ನಗರಸಭೆಯ ಮುಡಿಗೆ ಕಿರೀಟವೊಂದು ಪ್ರಾಪ್ತವಾಗಲಿದೆ. ಕೋಣೆನಾಲಾದ ಕೊಳಚೆ ನೀರು ಶುದ್ದೀಕರಿಸಲು ಲಂಡನ್ ಬ್ರಿಜ್ ಸಮೀಪ, ಕಡಲತೀರದಲ್ಲಿ ಪಾಂಡ್ ನಿರ್ಮಿಸಲಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ನಗರಸಭೆಯ ಗಾರ್ಡನ್, ಬೀಚ್ ಗಾರ್ಡನ್‌ಗೆ ಬಳಸಲು ಪೈಪ್‌ಲೈನ್ ಹಾಕಲಾಗುತ್ತಿದೆ. ಎಲೆಕ್ಟ್ರಿಕಲ್ ಕೆಲಸ ಬಾಕಿ ಇದೆ. ಇದಕ್ಕೆ ಸಂಬಂಧಿಸಿದ ಸಾಮಗ್ರಿ ಸಹ ಬಂದಿವೆ. ಯೋಜನೆ ನಾವು ಅಂದುಕೊಂಡ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಈ ಯೋಜನೆ ಯಶಸ್ಸು ಕಾಣುವ ಆಶಾವಾದ ನಮ್ಮದು.-ಆರ್.ಪಿ. ನಾಯ್ಕ ಪೌರಾಯುಕ್ತರು, ನಗರಸಭೆ, ಕಾರವಾರ ದುರ್ವಾಸನೆಯ ಶಿಕ್ಷೆ
ನಗರದ ಮಾಲಾದೇವಿ ಕ್ರೀಡಾಂಗಣದ ಪಕ್ಕದಿಂದ ಹಿಡಿದು ನಗರದ ಲಂಡನ್ ಬ್ರಿಜ್ ವರೆಗಿನ ಮುಖ್ಯ ಕಾಲುವೆ ಕೊಳಚೆ ನೀರಿನಿಂದ ದುರ್ವಾಸನೆ ಮತ್ತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಕೊಳಚೆ ನೀರು ಹರಿವ ಮುಖ್ಯ ಕಾಲುವೆ ಮಾರ್ಗದಲ್ಲಿ ಕ್ರೀಡಾಂಗಣ, ಗುರುಭವನ, ಶಾಲಾ ಕಾಲೇಜು, ಅನೇಕ ಕಚೇರಿ, ಆಯುರ್ವೇದ ಆಸ್ಪತ್ರೆಗಳಿವೆ. ನಗರದ ಮುಖ್ಯ ಹೋಟೆಲ್, ಲಾಡ್ಜ್ ಗಳು, ಜನವಸತಿ ಪ್ರದೇಶ, ಬ್ಯಾಂಕ್‌ಗಳು ಸಹ ಇವೆ. ಈ ಕೊಳಚೆ ನೀರಿನ ವಾಸನೆಯನ್ನು ಈ ಎಲ್ಲ ಸರ್ಕಾರಿ ಕಚೇರಿ ಸಿಬ್ಬಂದಿ ಅನುಭವಿಸುವಂತಾಗಿದೆ. ಕೋಣೆನಾಲಾದ ಹೂಳನ್ನು ಪ್ರತಿವರ್ಷ ತೆಗೆಯಲು ಹಾಗೂ ನೀರಿಗೆ ಔಷಧಿ ಸಿಂಪಡಿಸಲು ನಗರಸಭೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಕೆಲ ದಶಕಗಳಿಂದ ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ವರದಿ -ನಾಗರಾಜ್ ಹರಪನಹಳ್ಳಿ