Advertisement

ಸುರಂಗ ಸೇರಿದ ಯೋಜನೆ?

11:27 AM Nov 14, 2017 | |

ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದ ನಾಲ್ಕು ಕಡೆಗಳಲ್ಲಿ ಸುರಂಗ(ಟನಲ್‌) ಮಾರ್ಗ ನಿರ್ಮಿಸುವ ಯೋಜನೆ ಆರಂಭದಲ್ಲಿಯೇ ನೆನೆಗುದಿಗೆ ಬೀಳುವಂತಾಗಿದ್ದು, ಯೋಜನೆ ಜಾರಿಯಾಗುವುದು ಬಹುತೇಕ ಅನುಮಾನವಾಗಿದೆ. ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಯೋಜನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಯಿಂದ ಹಿಂದೆ ಸರಿದಿತ್ತು.

Advertisement

ಆ ಸಂದರ್ಭದಲ್ಲಿ ಬಲ್ಗೇರಿಯಾ ಮೂಲದ ಸಂಸ್ಥೆಯೊಂದು ನಗರದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಾತ್ಯಕ್ಷಿಕೆ ನೀಡಿತ್ತು. ಅದರಂತೆ ಸಚಿವರು, ಯೋಜನೆ ಜಾರಿಗೆ ಸಂಬಂಧಿಸಿದ ಸಾಧ್ಯತಾ ವರದಿ ಹಾಗೂ ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಿದ್ದರು. 

ಅದರಂತೆ ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದ ನಗರದ ಕುಮಾರಕೃಪಾ ರಸ್ತೆಯಿಂದ ಹೆಬ್ಟಾಳ ಜಂಕ್ಷನ್‌, ನಾಯಂಡಹಳ್ಳಿ ಜಂಕ್ಷನ್‌ನಿಂದ ಮೆಜೆಸ್ಟಿಕ್‌ನ ಶಾಂತಲಾ ಸಿಲ್ಕ್ಹೌಸ್‌, ಗೊರಗುಂಟೆಪಾಳ್ಯದಿಂದ ಡಾ.ರಾಜಕುಮಾರ್‌ ಸಮಾಧಿ ಹಾಗೂ ಜಾಲಹಳ್ಳಿಯಿಂದ ಏರ್‌ಪೋರ್ಸ್‌ ಸ್ಟೇಷನ್‌ವರೆಗಿನ  ಭಾಗಗಳಿಗೆ ಬಲ್ಗೇರಿಯಾ ಮೂಲಕ ನಿಯೋಗ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿತ್ತು. 

ಆದರೆ, ಇದಾಗಿ ಐದಾರು ತಿಂಗಳು ಕಳೆದರೂ ಬಲ್ಗೇರಿಯಾ ಮೂಲದ ಸಂಸ್ಥೆ ಯಾವುದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಜತೆಗೆ ಯೋಜನೆಯ ಕುರಿತು ಸರ್ಕಾರವಾಗಲಿ ಅಥವಾ ಬಿಡಿಎ ಅಧಿಕಾರಿಗಳನ್ನಾಗಿ ಸಂಪರ್ಕಿಸಿಲ್ಲ. ಹಾಗಾಗಿ ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಿದ್ದ ಸುರಂಗ ಮಾರ್ಗ ಯೋಜನೆ ಆರಂಭವಾಗುವ ಮೊದಲೇ ನೆನೆಗುದಿಗೆ ಬಿದ್ದಂತಾಗಿದೆ. 

ಜಾರಿಯಾಗದಿರಲು ಕಾರಣವೇನು?: ಸಂಚಾರ ದಟ್ಟಣೆಗೆ ಅನುಗುಣವಾಗಿ ದ್ವಿಪಥದ ಸುರಂಗ ರಸ್ತೆ ನಿರ್ಮಿಸಬೇಕಿದ್ದ ಹಿನ್ನೆಲೆಯಲ್ಲಿ ಒಂದು ಕಿಲೋ ಮೀಟರ್‌ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ 500 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಸುರಂಗ ರಸ್ತೆ ದುಬಾರಿಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದಲೂ ವೆಚ್ಚ ಭರಿಸಬೇಕು ಎಂದು ಬಲ್ಗೇರಿಯಾ ಮೂಲಕ ನಿಯೋಗ ಸರ್ಕಾರವನ್ನು ಮನವಿ ಮಾಡಿತ್ತು. 

Advertisement

ಆದರೆ, ಅಷ್ಟು ದೊಡ್ಡ ಮೊತ್ತವನ್ನು ಸರ್ಕಾರಿಂದ ಭರಿಸಲು ಸಾಧ್ಯವಿಲ್ಲದ ಕಾರಣ, ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವಂತೆ ಮತ್ತು ಟೋಲ್‌ ಶುಲ್ಕ ಸಂಗ್ರಹಿಸುವಂತೆ ವಿದೇಶಿ ಸಂಸ್ಥೆಗೆ ಸಚಿವರು ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ವಿದೇಶಿ ಸಂಸ್ಥೆಯವರು ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. 

ರಾಜಕೀಯ ಕಾರಣವೂ ಇದೆ: ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಜಾರಿಯನ್ನು ವಿರೋಧಿಸಿ ಕೆಲವರು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಿಂದ ತಡೆಯಾಜ್ಞೆ ತಂದಿದ್ದರು. ಜತೆಗೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪ ಸರ್ಕಾರಕ್ಕೆ ಇರಿಸುಮುರಿಸು ಉಂಟುಮಾಡಿತ್ತು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸುರಂಗ ನಿರ್ಮಾಣ ಯೋಜನೆ ಕೈಗೆತ್ತಿಕೊಂಡರೆ ಇಲ್ಲಸಲ್ಲದ ಆರೋಪ ಎದುರಾಗುವ ಕಾರಣದಿಂದ ನನೆಗುದಿಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕುರಿತಂತೆ ವಿದೇಶಿ ಮೂಲದ ನಿಯೋಗವೊಂದು ಸುರಂಗ ಮಾರ್ಗ ನಿರ್ಮಿಸುವ ಪ್ರಾತ್ಯಕ್ಷಿಕೆ ನೀಡಿದ್ದರು. ಅದರಂತೆ ಯೋಜನೆ ಜಾರಿಗೆ ಸಂಬಂಧಿಸಿದ ಸಾಧ್ಯತಾ ವರದಿ ಹಾಗೂ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಲಾಗಿತ್ತು. ಆದರೆ, ಅವರು ಈವೆರಗೆ ವರದಿ ಸಲ್ಲಿಸಿಲ್ಲ. ಹೀಗಾಗಿ ಚುನಾವಣೆಗೆ ಮೊದಲು ಯೋಜನೆ ಜಾರಿಯಾಗುವುದು ಸಾಧ್ಯತೆ ಕಡಿಮೆ.
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

ಸುರಂಗ ಮಾರ್ಗಕ್ಕೆ ಉದ್ದೇಶಿಸಿದ್ದ ಮಾರ್ಗಗಳು 
– ಕುಮಾರಕೃಪಾ ರಸ್ತೆಯಿಂದ ಹೆಬ್ಟಾಳ ಜಂಕ್ಷನ್‌ವರೆಗೆ (6 ಕಿ.ಮೀ.)
– ನಾಯಂಡಹಳ್ಳಿ ಜಂಕ್ಷನ್‌ನಿಂದ ಮೆಜೆಸ್ಟಿಕ್‌ನ ಶಾಂತಲಾ ಸಿಲ್ಕ್ಹೌಸ್‌ವರೆಗೆ (7 ಕಿ.ಮೀ.)
– ಗೊರಗುಂಟೆಪಾಳ್ಯದಿಂದ ಡಾ.ರಾಜ್‌ಕುಮಾರ್‌ ಸಮಾಧಿವರೆಗೆ (1 ಕಿ.ಮೀ.)
– ಜಾಲಹಳ್ಳಿಯಿಂದ ಏರ್‌ಪೋರ್ಸ್‌ ಸ್ಟೇಷನ್‌ವರೆಗೆ (3 ಕಿ.ಮೀ.)

ಸುರಂಗ ರಸ್ತೆಯ ಉಪಯೋಗಗಳೇನು?
– ಭೂಸ್ವಾಧೀನ ಪ್ರಕ್ರಿಯೆಯ ಕಿರಿಕಿರಿ ಇರುವುದಿಲ್ಲ
– ಮರಗಳನ್ನು ಕಡಿಯುವ ಅವಶ್ಯಕತೆ ಬರುವುದಿಲ್ಲ
– ಸಂಚಾರ ದಟ್ಟಣೆ ಹಾಗೂ ಸಿಗ್ನಲ್‌ಗ‌ಳಿರುವುದಿಲ್ಲ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next