Advertisement

ಶೀಘ್ರ ದಿನಕ್ಕೆ 10 ಲಕ್ಷ ಟೆಸ್ಟ್‌; ಸಚಿವ ಹರ್ಷವರ್ಧನ್‌ ಹೇಳಿಕೆ

02:44 AM Jul 31, 2020 | Hari Prasad |

ಹೊಸದಿಲ್ಲಿ: ಸದ್ಯಕ್ಕೆ ದೇಶದಲ್ಲಿ ಪ್ರತಿ ದಿನ ಸುಮಾರು 5 ಲಕ್ಷ ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಇದನ್ನು ದುಪ್ಪಟ್ಟುಗೊಳಿಸಲು ಚಿಂತನೆ ನಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಪ್ರಿಲ್‌ನಲ್ಲಿ ನಾವು ದಿನಕ್ಕೆ 6 ಸಾವಿರ ಪರೀಕ್ಷೆಗಳನ್ನಷ್ಟೇ ಮಾಡುತ್ತಿದ್ದೆವು.

ಈಗ ಈ ಸಂಖ್ಯೆ 5 ಲಕ್ಷಕ್ಕೇರಿದೆ. ಮುಂದಿನ ಒಂದೆರಡು ತಿಂಗಳಲ್ಲಿ ದಿನಕ್ಕೆ 10 ಲಕ್ಷ ಸ್ಯಾಂಪಲ್‌ಗ‌ಳನ್ನು ಪರೀಕ್ಷೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, 6 ತಿಂಗಳ ಹಿಂದೆ ದೇಶವು ವೆಂಟಿಲೇಟರ್‌ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆದರೆ, ಈಗ ನಾವೇ ವೆಂಟಿಲೇಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹರ್ಷವರ್ಧನ್‌ ಹೇಳಿದ್ದಾರೆ. ಲಸಿಕೆ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿದ ಅವರು, ದೇಶದ ವೈದ್ಯಕೀಯ ಸಮುದಾಯದ ಜೊತೆಗೆ ವಿಜ್ಞಾನಿಗಳು ಕೂಡ ಕೋವಿಡ್ 19 ವಿರುದ್ಧದ ಸಮರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಶ್ಲಾಘಿಸಿದ್ದಾರೆ.

10 ಲಕ್ಷ ದಾಟಿದ ಗುಣಮುಖರು: ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ ಸೋಂಕು ದೃಢಪಟ್ಟವರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಗುಣಮುಖರಾದವರ ಸಂಖ್ಯೆ 10 ಲಕ್ಷ ಮೀರಿದೆ. ಇದೇ ವೇಳೆ ದೇಶದಲ್ಲಿ ಸೋಂಕಿತರ ಸಂಖ್ಯೆ 16.17 ಲಕ್ಷ ದಾಟಿದೆ.

Advertisement

ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ 52,123 ಹೊಸ ಪ್ರಕರಣಗಳು ಪತ್ತೆಯಾಗಿ, 775 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ 5.28 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದರೆ, ಗುಣಮುಖ ರಾದವರ ಸಂಖ್ಯೆ 10 ಲಕ್ಷ ದಾಟಿ, ಗುಣಮುಖ ಪ್ರಮಾಣ ಶೇ.64.44ಕ್ಕೇರಿದೆ ಎಂದೂ ಸಚಿವಾಲಯ ತಿಳಿಸಿದೆ.

ಲಸಿಕೆ ಬಂದರಷ್ಟೇ ಸೋಂಕು ನಿರ್ಮೂಲನೆ ಸಾಧ್ಯ
ಭಾರತದಂಥ ದೊಡ್ಡ ಹಾಗೂ ಜನಸಂಖ್ಯೆ ಅಧಿಕವಿರುವ ದೇಶದಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಪರಿಗಣಿಸಿಕೊಂಡು ಕೋವಿಡ್ 19 ಸೋಂಕನ್ನು ಎದುರಿಸಲು ಸಾಧ್ಯವಿಲ್ಲ. ಈ ಸೋಂಕನ್ನು ನಿರ್ಮೂಲನೆ ಮಾಡಬೇಕೆಂದರೆ ನಾವು ಲಸಿಕೆಯ ಮೊರೆ ಹೋಗಲೇಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸಮೂಹ ರೋಗನಿರೋಧಕ ಶಕ್ತಿ ಎನ್ನುವುದು ರೋಗದಿಂದ ಪರೋಕ್ಷ ಸುರಕ್ಷೆ ಒದಗಿಸುವಂಥದ್ದು. ಇದು ಜನರನ್ನು ರೋಗದಿಂದ ರಕ್ಷಿಸುತ್ತದೆ ನಿಜ. ಆದರೆ, ಯಾವಾಗ ಲಸಿಕೆ ಅಭಿವೃದ್ಧಿಯಾಗುತ್ತದೋ ಅಥವಾ ಯಾವಾಗ ಜನರು ರೋಗ ಬಂದು ಸಂಪೂರ್ಣ ಗುಣಮುಖರಾಗುತ್ತಾರೋ ಆಗ ಮಾತ್ರ ಈ ಶಕ್ತಿ ಸೃಷ್ಟಿಯಾಗುತ್ತದೆ.

ಭಾರತದಲ್ಲಿ ಇಂಥ ಸಮೂಹ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಲು ಆಗುವುದಿಲ್ಲ. ಲಸಿಕೆ ಬಂದ ನಂತರವಷ್ಟೇ ರೋಗ ನಿರ್ಮೂಲನೆ ಸಾಧ್ಯ ಎಂದಿದ್ದಾರೆ ಸಚಿವಾಲಯದ ಅಧಿಕಾರಿಗಳು. ಇತ್ತೀಚೆಗೆ ದಿಲ್ಲಿಯಲ್ಲಿ ಶೇ.23ಕ್ಕೂ ಹೆಚ್ಚು ಮಂದಿಯ ಹಾಗೂ ಮುಂಬೈನ ಶೇ.57ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ದೇಶದ ಜನರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿದೆಯೇ ಎಂಬ ಚರ್ಚೆಗಳು ಶುರುವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next