ಮುಂಡಗೋಡ: ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಮನೆ ನೀಡುತ್ತಿದ್ದು, ಇದರ ಫಲಾನುಭವಿಗಳನ್ನು ಗುರುತಿಸಲು ಎಲ್ಲಿಯೂ ಭ್ರಷ್ಟಾಚಾರದ ವಾಸನೆ ಬಾರದ ಹಾಗೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪಪಂ ಆಡಳಿತ ಕಮಿಟಿಯವರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಎಚ್ಚರಿಸಿದರು.
ಪಪಂ ಸಭಾಭವನದಲ್ಲಿ ಪ.ಪಂ ಆಡಳಿತ ಕಮಿಟಿಯವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಕಡು ಬಡವರಿಗೆ ನೀಡುತ್ತಿರುವ ಮನೆ ಇದಾಗಿದೆ. ಈಗಾಗಲೇ 915 ಫಲಾನುಭವಿಗಳನ್ನು ಗುರುತಿಸಲಾಗಿದೆ. ನಗರ ಬೆಳೆಯುತ್ತಿರುವ ಈ ಸಮಯಗಳಲ್ಲಿ ನಗರಕ್ಕೆ ಮತ್ತೂಮ್ಮೆ ಜಾಗ ತರಲು ಸಾಧ್ಯವಿಲ್ಲ. ಕಷ್ಟಪಟ್ಟು ಈ ಜಾಗ ತಂದಿದ್ದೇವೆ. ಅನೇಕ ವರ್ಷಗಳಿಂದ ಬಡವರಿಗೆ ಮಾತು ಕೋಡುತ್ತಾ ಬರುತ್ತಿದ್ದೇವೆ. ಹಾಗಾಗಿ ಒಳ್ಳೆಯ ರೀತಿಯಲ್ಲಿ ಜಿ ಪ್ಲಸ್‌ನಲ್ಲಿ ಮನೆ ಕಟ್ಟಿ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.
ಇದನ್ನೂ ಓದಿ:ISI ಸೂತ್ರಧಾರಿ! ತಾಲಿಬಾನ್ ನಿಂದ ಅಫ್ಘಾನ್ ಕೈವಶ…ಪಾಕ್ ನ ಲಷ್ಕರ್, ಜೈಶ್ ಉಗ್ರರಿಂದ ಲೂಟಿ
950 ಮನೆಗಳು ಆಗುತ್ತಿರುವ ಸ್ಥಳದಲ್ಲಿ ಜನರಿಗೆ ವ್ಯವಸ್ಥೆ ಕಲ್ಪಿಸಲು ಕಾರ್ಮಿಕ ಇಲಾಖೆಯಿಂದ 2 ಎಕರೆ ಜಾಗ ತೆಗೆದುಕೊಂಡಿದ್ದೇವೆ. ಆ ಸ್ಥಳದಲ್ಲಿ 7.5 ಕೋಟಿ ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಮಂಟಪ ಕಟ್ಟಿಸಲು ತೀರ್ಮಾನಿಸಲಾಗಿದೆ. ಇದರಿಂದ ಬಡವರಿಗೆ, ತಾಲೂಕಿನ ಜನತೆಗೆ ಅನುಕೂಲವಾಗಲಿದೆ. ಬರುವ ಗಣೇಶ ಚತುರ್ಥಿ ಆದ ನಂತರ ಕಾಮಾಗಾರಿ ಆರಂಭಿಸಬೇಕಿದೆ.
ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಪ.ಪಂ ಅಧ್ಯಕ್ಷೆ ರೇಣುಕಾ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ್, ಶೇಖರ ಲಮಾಣಿ, ಸಂಗನಬಸಯ್ಯಾ , ರವಿ ಗೌಡ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ. ಪಾಟೀಲ, ಮುಖಂಡರಾದ ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ರವಿ ಹಾವೇರಿ. ಗುರು ಕಾಮತ್, ಪ.ಪಂ ಸದಸ್ಯರು,ಸಿಬ್ಬಂದಿ ಇದ್ದರು.