ಯಲಬುರ್ಗಾ: ಒಣಬೇಸಾಯ ಪ್ರದೇಶವಾದ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಹಗೇದಾಳ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಯ ಯಲಬುರ್ಗಾ ಬ್ರಾಂಚ್ ಫೀಡರ್ ಕಾಮಗಾರಿಯನ್ನು ಮಂಗಳವಾರ ವೀಕ್ಷಣೆ ಮಾಡಿ ಪರಿಶೀಲಿಸಿ ಅವರು ಮಾತನಾಡಿದರು. ಬಹು ನಿರೀಕ್ಷಿತ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. 2022 ಜನವರಿ ತಿಂಗಳಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಮಳೆ ಇಲ್ಲದೇ ಸತತ ಬರ ಎದುರಿಸುವ ತಾಲೂಕು ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲಮಟ್ಟ ಹೆಚ್ಚಳವಾಗುತ್ತದೆ.
ರೈತರ ಜಮೀನುಗಳು ನೀರಾವರಿಯಾಗಲಿವೆ. ಕೊಪ್ಪಳ ಏತ ನೀರಾವರಿ ಯೋಜನೆಗೆ ರಾಜ್ಯ ಸರಕಾರ ಅನುದಾನ ನೀಡಿದ್ದು, ಯೋಜನೆ ಸರ್ಮಪಕ ಅನುಷ್ಠಾನಕ್ಕೆ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ ಎಂದರು. ತಾಲೂಕಿನಲ್ಲಿ ಗುನ್ನಾಳ ಹಾಗೂ ಹಗೇದಾಳ ಬಳಿ ಕೆರೆ ತುಂಬಿಸುವ ಯೋಜನೆಯ 10 ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಫೀಡರ್ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. ಯೋಜನೆ ಸರ್ಮಪಕ ಅನುಷ್ಠಾನಕ್ಕೆ ರೈತರು ಸಹಕಾರ ನೀಡಬೇಕು. ಯೋಜನೆ ವ್ಯಾಪ್ತಿಯಲ್ಲಿ ಬರುವ ಪೈಪ್‌ಲೈನ್, ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ರೈತರು ಸಹಕಾರ ನೀಡಬೇಕು. ರೈತರ ಜಮೀನುಗಳಿಗೆ ಪರಿಹಾರ ಸಹ ನೀಡಲಾಗುತ್ತದೆ ಎಂದರು.
ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯನ್ನು ನಿತ್ಯ ಅಧಿ ಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಕಾಮಗಾರಿ ನಿಗದಿತ ಅವಧಿ ಯೊಳಗೆ ಮುಗಿಸುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆಯಾಗಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಈ ಕ್ಷೇತ್ರಕ್ಕೆ ನೀರಾವರಿ ಮಾಡುವುದು ನನ್ನ ಮೊದಲ ಆದ್ಯತೆ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿರುವೆ. ನೀರಾವರಿ ಮಾಡುವುದು ಶತಸಿದ್ಧ. ಕೊಪ್ಪಳ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ ಎಂದರು. ತಹಶೀಲ್ದಾರ್ ಶ್ರೀಶೈಲ ತಳವಾರ, ಮುಖಂಡ ವೀರಣ್ಣ ಹುಬ್ಬಳ್ಳಿ, ಎಂಜನೀಯರ್ ಸುಭಾಷ, ಮಹಾಂತೇಶ, ಗ್ರಾಪಂ ಸದಸ್ಯರು, ಮುಖಂಡರು, ಇತರರು ಇದ್ದರು.