ಸಿಂಧನೂರು: ನಗರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಹೆಚ್ಚುತ್ತಿರುವ ಟ್ರಾಪಿಕ್ ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಾಣವೇ ಪರಿಹಾರವೆಂಬ ನಿಲುವಿಗೆ ಬಲ ಬಂದಿದ್ದು, ಸರಕಾರದ ಮಟ್ಟದಲ್ಲಿ ಈ ಬೇಡಿಕೆಗೆ ಮನ್ನಣೆ ದೊರಕಿದೆ.
ನಗರದ ಎಲ್ಲ ಮಾರ್ಗದಲ್ಲಿ ಮುಖ್ಯರಸ್ತೆ ದಾಟಲು ಅಲ್ಲಲ್ಲಿ ತಡೆಬೀಳುತ್ತಿರುವುದಕ್ಕೆ ಬೈಪಾಸ್ ನಿರ್ಮಾಣವೇ ಪರಿಹಾರವೆಂಬ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಗಂಗಾವತಿ-ರಾಯಚೂರು, ಸಿಂಧನೂರು-ಕುಷ್ಟಗಿ ಮಾರ್ಗದ ಪ್ರಮುಖ ಹೆದ್ದಾರಿಗಳು ನಗರದ ಹೃದಯಭಾಗದಿಂದಲೇ ಹಾದುಹೋಗಿವೆ. ರಸ್ತೆ ವಿಸ್ತರಣೆಯಾಗಿದ್ದರೂ ವಾಹನಗಳ ದಟ್ಟಣೆ ಹೆಚ್ಚಿದೆ. ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆಯಾಗಿದ್ದರೂ ಮಹಾತ್ಮಗಾಂಧಿ ವೃತ್ತವನ್ನು ದಾಟುವಷ್ಟರಲ್ಲೇ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಪ್ರತಿಭಟನೆ, ಧರಣಿ ವೇಳೆ ಸಂಚಾರತಡೆಗೂ ಮುಂದಾಗುವುದರಿಂದ ಮಹಾತ್ಮಗಾಂಧಿ ವೃತ್ತದಲ್ಲಿ ಸುಗಮಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬೈಪಾಸ್‌ನಿರ್ಮಾಣವಾದರೆ ದೂರದ ಊರಿನ ಪ್ರಯಾಣಿಕರ ಹಾದಿ ಸುಗಮವಾಗಲಿದೆ.
ಹೆದ್ದಾರಿ ಪ್ರಾಧಿಕಾರ ಉತ್ಸುಕ:
ಜೇವರ್ಗಿ-ಚಾಮರಾಜನಗರ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಧನೂರು ನಗರ ಹೊರಭಾಗದಲ್ಲಿ 12.5 ಕಿ.ಮೀ. ಉದ್ದದ ಬೈಪಾಸ್ ರಸ್ತ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ವಿಸ್ತೃತ ವರದಿ ಸಲ್ಲಿಸಿದೆ. ಈ ಮಾರ್ಗದ ಕುರಿತು ಪೀಡ್‌ಬ್ಯಾಂಕ್ ಕಂಪನಿ ವಾಹನಗಳ ದಟ್ಟಣೆ ಅವಲೋಕಿಸಿ ವರದಿ ನೀಡಿದೆ. ಗಂಗಾವತಿ ಮಾರ್ಗದ ಕೈಗಾರಿಕಾ ಪ್ರದೇಶದಿಂದ ಮಸ್ಕಿ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಬೈಪಾಸ್‌ಗೆ ಅವಕಾಶವಿದೆ ಎನ್ನುವುದನ್ನು ತಿಳಿಸಲಾಗಿದೆ. ವೇಗಧೂತ ಬಸ್‌ಗಳು, ಖಾಸಗಿ ವಾಹನಗಳು ಈ ಮಾರ್ಗದಲ್ಲಿಸಾಗಿದರೆ, ನಗರ ಪ್ರವೇಶಿಸಬೇಕಾಗದ ಅನಿವಾರ್ಯತೆ ತಪ್ಪಲಿದೆ. ಅಗತ್ಯ ಜಮೀನನ್ನು ಸ್ವಾಧೀನಪಡಿಸಿಕೊಂಡು ಒಪ್ಪಿಸಿದರೆ, ತ್ವರಿತವಾಗಿ ಬೈಪಾಸ್ ನಿರ್ಮಿಸಿಕೊಡುವುದಕ್ಕೆ ಹೆದ್ದಾರಿ ಪ್ರಾಧಿಕಾರ ಸಜ್ಜಾಗಿದೆ.
ಸರಕಾರಕ್ಕೆ ಸಲ್ಲಿಕೆ: ಬೈಪಾಸ್ ಅಗತ್ಯತೆ ಉಲ್ಲೇಖೀಸಿ ಸಂಸದ ಸಂಗಣ್ಣ ಕರಡಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಅವರುಕೂಡ ಸಾಥ್ ನೀಡಿದ್ದಾರೆ. 12.5 ಕಿ.ಮೀ. ಮಾರ್ಗದಲ್ಲಿ ಅಗತ್ಯ ಬೀಳುವ ಜಮೀನನ್ನು ಸ್ವಾಧಿಧೀನಪಡಿಸಿಕೊಳ್ಳುವುದಕ್ಕಾಗಿ 70 ಕೋಟಿ ರೂ. ಅಗತ್ಯವೆಂದು ಅನುದಾನ ಕೋರಿ ರಾಜ್ಯ ಸರಕಾರಕ್ಕೆ ಬೇಡಿಕೆ ಇಡಲಾಗಿದೆ.
ಬೈಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ಭೂಸ್ವಾಧೀನಕ್ಕಾಗಿ ಹಣ ನೀಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ರಾಜ್ಯ ಸರಕಾರದಿಂದ ಅನುದಾನ ದೊರಕಿದ ತಕ್ಷಣವೇ ಈ ಕೆಲಸ ಆರಂಭಗೊಳ್ಳಲಿದೆ. –
ಸಂಗಣ್ಣ ಕರಡಿ, ಸಂಸದ
–ಯಮನಪ್ಪ ಪವಾರ